ಮಹಿಳೆಯರಿಗೆ ರಿಯಾಯ್ತಿ ದರದಲ್ಲಿ ಮೈಸೂರು ಸಿಲ್ಕ್ ಸೀರೆ

ಬೆಂಗಳೂರು, ಜು.31- ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ರಿಯಾಯ್ತಿ ದರದಲ್ಲಿ ಮೈಸೂರು ಸಿಲ್ಕ್ ಸೀರೆಯನ್ನು ನೀಡಲಾಗುವುದು ಎಂದು ರೇಷ್ಮೆ ಖಾತೆ ಸಚಿವ ಸಾ.ರಾ.ಮಹೇಶ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರಮಹಾಲಕ್ಷ್ಮಿ ಹಬ್ಬಕ್ಕೆ ರಿಯಾಯ್ತಿ ದರದಲ್ಲಿ ಸೀರೆ ನೀಡಲಾಗುವುದು. 15ರಿಂದ 16ಸಾವಿರ ಬೆಲೆ ಬಾಳುವ ಮೈಸೂರು ಸಿಲ್ಕ್ ಸೀರೆಯನ್ನು 4500 ರೂ.ಗೆ ನೀಡುವ ಉದ್ದೇಶವಿದೆ. ಇದಕ್ಕೆ 6ರಿಂದ 8 ಕೋಟಿ ಹೊರೆಯಾಗಲಿದ್ದು, ರೇಷ್ಮೆ ಕಾರ್ಖಾನೆ ಮತ್ತು ಸರ್ಕಾರ ಈ ಹೊರೆಯನ್ನು ಭರಿಸಲಿವೆ ಎಂದರು.

ರಿಯಾಯ್ತಿ ದರದಲ್ಲಿ ಸೀರೆ ನೀಡುವಿಕೆಯಲ್ಲಿ ದುರ್ಬಳಕೆಯಾಗದಂತೆ ಮಾನದಂಡಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಐದು ವರ್ಷ ಸುಭದ್ರವಾಗಿರುತ್ತದೆ. ಈ ಬಗ್ಗೆ ಅನುಮಾನ ಬೇಡ ಎಂದು ತಿಳಿಸಿದರು.

ರೈತರ ಸಾಲ ಮನ್ನಾ ಮಾಡಿರುವುದನ್ನು ಬಿಜೆಪಿ ಸಹಿಸದೆ ಸರ್ಕಾರ ಬೀಳುತ್ತೆ ಎಂಬ ರೀತಿ ಟೀಕೆ ಮಾಡುತ್ತಿದೆ. ರಾಜ್ಯ ಒಡೆಯಬೇಕು ಎನ್ನುವವರನ್ನು ರಾಜದ್ರೋಹಿಗಳೇ ಎನ್ನಬೇಕಾಗುತ್ತದೆ. ಅಖಂಡ ಕರ್ನಾಟಕ ನಿರ್ಮಾಣಮಾಡಲು ನಮ್ಮ ಹಿರಿಯರು ನಡೆಸಿದ ಹೋರಾಟ, ತ್ಯಾಗದ ಬಗ್ಗೆ ವಿವೇಕ ಇಲ್ಲದವರು ವಿಭಜನೆ ಬಗ್ಗೆ ಮಾತನಾಡುತ್ತಾರೆ. ಅಖಂಡ ಕರ್ನಾಟಕ ಒಗ್ಗಟ್ಟಾಗಿ ಇರಬೇಕು ಎಂಬುದೇ ನಮ್ಮ ಅಪೇಕ್ಷೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ