ಸರಕಾರದ ಕಾರ್ಯಕ್ರಮ ಅನುಷ್ಠಾನಕ್ಕೆ ಆದ್ಯತೆ ನೀಡಿ- ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು:ಜು-೩೦: ಜಿಲ್ಲಾಧಿಕಾರಿ, ಸಿಇಒ ಯಾರೇ ಆಗಲಿ ಸರಕಾರವನ್ನು ಲಘುವಾಗಿ ಪರಿಗಣಿಸದೇ ಸರಕಾರದ ಕಾರ್ಯಕ್ರಮವನ್ನು ಅನುಷ್ಠಾನ ಮಾಡುವತ್ತ ಬದ್ಧತೆ ಪ್ರದರ್ಶಿಸಿ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ವಿಧಾನಸೌಧದ ಸಮ್ಮೇಳನ‌ ಸಭಾಂಗಣದಲ್ಲಿ ಸೋಮವಾರ ಸಿಎಂ ನೇತೃತ್ವದಲ್ಲಿ ಕರೆಯಲಾಗಿದ್ದ ಜಿಲ್ಲಾಧಿಕಾರಿಗಳ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಸರಕಾರದಲ್ಲಿ ಹಣದ ಕೊರತೆ ಇಲ್ಲ. ಪ್ರತಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಕನಿಷ್ಠ 5 ಕೋಟಿ ರು. ಹಾಕಲಾಗಿದೆ. ಜಿಲ್ಲಾಧಿಕಾರಿಗಳು ಹೆಚ್ಚು ಆಸಕ್ತಿ ವಹಿಸಿ ಕೆಲಸ ಮಾಡಬೇಕು.

ಜಿಲ್ಲಾ ಮುಖ್ಯ‌ ನಿರ್ವಹಣಾಧಿಕಾರಿಗಳು ಹೋಬಳಿ ಅಥವಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತಿಂಗಳಿಗೆ ಒಮ್ಮೆಯಾದರೂ ಗ್ರಾಮ ವಾಸ್ತವ್ಯ ಮಾಡಿದರೆ ಆ ಜನರ ಸಮಸ್ಯೆ, ಬೇಡಿಕೆಗಳು ನಿಮ್ಮ‌ ಗಮನಕ್ಕೆ ಬರಲಿದೆ.

ಜಿಲ್ಲಾಧಿಕಾರಿಗಳ ಹಂತದಲ್ಲೇ ಸಮಸ್ಯೆ‌‌ ನೀಗಿಸಿದರೆ ಜನರು ಸಚಿವರವರೆಗೂ ಬರುವ ಸಮಸ್ಯೆ ತಪ್ಪಲಿದೆ.

ನನ್ನ ಬಳಿಯೇ ಸಾಕಷ್ಟು ಜನರು ಬಂದು‌ ಸಮಸ್ಯೆ ತೋಡಿಕೊಳ್ಳುತ್ತಾರೆ. ಅವರು ನಮ್ಮ ಬಳಿ ಬರುತ್ತಿದ್ದಾರೆಂದರೆ ನೀವು ಕೆಲಸ‌ ಮಾಡುತ್ತಿಲ್ಲ ಎಂದರ್ಥ ಅಲ್ಲವೇ ಎಂದು ಕುಟುಕಿದರು.

ಸಣ್ಣ ಕೆಲಸಕ್ಕೂ ಜನ ವರ್ಷಾನುಗಟ್ಟಲೆ ಕಾಯುವಂಥ ಸ್ಥಿತಿ ಇದೆ. ಗಂಗಾ ಕಲ್ಯಾಣ ಯೋಜನೆಯಡಿ ಬೋರ್‌ವೆಲ್ ಕೊರೆದು ಸಂಪೂರ್ಣ ವ್ಯವಸ್ಥೆ ಪಡೆದುಕೊಳ್ಳಲು ಮೂರ್ನಾಲಕ್ಕು ವರ್ಷ ತೆಗೆದುಕೊಳ್ಳುತ್ತದೆ ಎಂದರೆ ಹೇಗೆ??

ಜಿಲ್ಲಾಸ್ಪತ್ರೆಗಳ ವೈದ್ಯರು, ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದರೆ ಸರಕಾರಕ್ಕೆ ಪತ್ರ ಬರೆದು ಸಮಸ್ಯೆ ನೀಗಿಸಿ.

ಹಳ್ಳಿಗಳಲ್ಲಿಯೂ ಡ್ರಗ್ ವ್ಯಾಪಿಸಿದೆ ಎಂದರೆ, ಸಂಬಂಧ ಪಟ್ಟ ಇಲಾಖೆ ಇದರ ಬಗ್ಗೆ ಎಚ್ಚರಿಕೆ ವಹಿಸಿಲ್ಲವಾ?? ಜಿಲ್ಲೆಗಳಲ್ಲಿ ಡ್ರಗ್ ಸಂಬಂಧ ಜಾಗೃತಿ ಕಾರ್ಯಕ್ರಮ ಮೂಡಿಸಬೇಕು. ಆದರೆ, ಈ ಕೆಲಸ ಆಗುತ್ತಿಲ್ಲ.

ಜಿಲ್ಲಾಧಿಕಾರಿಗಳು ತಮ್ಮ ಕೆಲಸ ನಿಭಾಯಿಸಿದರೆ ಸರಕಾರದ ಎಲ್ಲ ಕಾರ್ಯಕ್ರಮಗಳು ಅನುಷ್ಠಾನವಾಗಲಿದೆ. ಈ ಬಗ್ಗೆ ಹೆಚ್ಚು ಗಮ‌ನ ಹರಿಸಿ ಎಂದು ಸೂಚನೆ ನೀಡಿದರು.‌

ಉತ್ತರ ಕರ್ನಾಟಕ ಭಾಗವನ್ನು ಯಾವುದೇ ಕಾರಣಕ್ಕೂ‌ ನಿರ್ಲಕ್ಷಿಸಿಲ್ಲ. ಮುಖ್ಯಮಂತ್ರಿಗಳ ಹೇಳಿಕೆಗಳನ್ನು ತಪ್ಪಾರ್ಥೈಸಲಾಗಿದೆ. ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ಕೇಂದ್ರ ಸರಕಾರ ೩೭೧ಜೆ ವಿಶೇಷ ಸವಲತ್ತು ಕೊಡಲಾಗಿದೆ. ಅಷ್ಟೆ ಅಲ್ಲದೇ ರಾಜ್ಯ ಸರಕಾರದಿಂದ ೧೯ ಸಾವಿರ ಕೋಟಿ ರು.ಗಳನ್ನು ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ‌ ನೀಡಲಾಗಿದೆ. ಕರ್ನಾಟಕ ಯಾವತ್ತಿದ್ದರೂ ಒಂದೇ ರಾಜ್ಯ ಎಂದು ಹೇಳಿದರು‌.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ