
ಹೊಸದಿಲ್ಲಿ: ಜಿಎಸ್‌ಟಿ ಪರಿಷ್ಕೃತ ದರಗಳು ಶುಕ್ರವಾರದಿಂದ ಜಾರಿಗೆ ಬಂದಿದ್ದು, ಫ್ರಿಡ್ಜ್, ಸಣ್ಣ ಪರದೆಯ ಟಿ.ವಿ, ವಾಷಿಂಗ್ ಮೆಷಿನ್, ಫುಟ್‌ವೇರ್ ಮತ್ತಿತರ ಉತ್ಪನ್ನಗಳ ದರಗಳು ಇಳಿಕೆಯಾಗಿವೆ. ಪರಿಷ್ಕೃತ ದರಗಳನ್ನು ಜಾಹೀರಾತಿನ ಮೂಲಕ ಕಂಪನಿಗಳು ಪ್ರಕಟಿಸಿ, ಗ್ರಾಹಕರನ್ನು ಆಕರ್ಷಿಸುತ್ತಿವೆ.
ಎಲೆಕ್ಟ್ರಾನಿಕ್ಸ್ ವಲಯದ ಪ್ರಮುಖ ಕಂಪನಿಯಾದ ಸ್ಯಾಮ್‌ಸಂಗ್, ಟಿ.ವಿ, ಫ್ರಿಡ್ಜ್, ವಾಷಿಂಗ್ ಮೆಷಿನ್ ದರಗಳನ್ನು ಶೇ.8ರಷ್ಟು ಇಳಿಕೆ ಮಾಡಿದೆ. ಆ ಮೂಲಕ ಜಿಎಸ್‌ಟಿ ದರ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿರುವುದಾಗಿ ಹೇಳಿದೆ. ಪರಿಷ್ಕೃತ ದರಗಳು ಶುಕ್ರವಾರದಿಂದಲೇ ಅನ್ವಯವಾಗಿವೆ.
ನಮ್ಮ ಉತ್ಪನ್ನಗಳಿಗೆ ಶೇ.7.81ರ ಜಿಎಸ್‌ಟಿ ದರ ಕಡಿತ ಮಾಡಿದ್ದು, ಪೂರ್ಣ ಸೌಲಭ್ಯವನ್ನು ಎಲ್ಲ ಗ್ರಾಹಕರಿಗೂ ವರ್ಗಾಯಿಸಲು ಸಂತೋಷವಾಗುತ್ತಿದೆ ಎಂದು ಸ್ಯಾಮ್‌ಸಂಗ್ ಇಂಡಿಯಾದ ಹಿರಿಯ ಉಪಾಧ್ಯಕ್ಷ ರಾಜೀವ್ ಭೂತಾನಿ ಹೇಳಿದ್ದಾರೆ.
ಈಗಾಗಲೇ ಎಲ್‌ಜಿ, ಪ್ಯಾನಸೋನಿಕ್, ಗೋಡ್ರೇಜ್ ಕಂಪನಿಗಳು ಈಗಾಗಲೇ ಉತ್ಪನ್ನಗಳ ದರದಲ್ಲಿ ಶೇ.7ರಿಂದ 8ರಷ್ಟು ಇಳಿಕೆ ಮಾಡಿವೆ. ಸ್ವಾತಂತ್ರ್ಯ ದಿನಾಚರಣೆ, ಗೌರಿಗಣೇಶ, ದೀಪಾವಳಿ ಮತ್ತಿತರ ಹಬ್ಬಗಳ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಿಗೆ ಬೇಡಿಕೆ ಸೃಷ್ಟಿಯಾಗುತ್ತದೆ. ಏತನ್ಮಧ್ಯೆ, ಜಿಎಸ್‌ಟಿ ದರ ಕಡಿತದಿಂದ ಮಾರುಕಟ್ಟೆಯಲ್ಲಿ ಉತ್ಸಾಹ ಮೂಡಿದೆ.
ಕಳೆದ ವಾರ ನಡೆದಿದ್ದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಶೇ.28ರ ಜಿಎಸ್‌ಟಿ ಶ್ರೇಣಿಯಲ್ಲಿದ್ದ ಅನೇಕ ಉತ್ಪನ್ನಗಳ ದರವನ್ನು ಇಳಿಸಲಾಗಿತ್ತು. ವ್ಯಾಕ್ಯೂಮ್ ಕ್ಲೀನರ್, ವಾಷಿಂಗ್ ಮೆಷಿನ್, 68 ಸೆಂ.ಮೀ(27 ಇಂಚು) ಟಿವಿ, ಫ್ರಿಡ್ಜ್, ಲಾಂಡ್ರಿ ವೆನ್ನ್, ಪೆಯಿಂಟ್ಸ್, ಹ್ಯಾಂಡ್ ಡ್ರೈಯರ್, ಫುಡ್ ಗ್ರೈಂಡರ್ ಮತ್ತು ವಾರ್ನಿಶ್‌ಗಳ ತೆರಿಗೆಯನ್ನು ಶೇ.28ರಿಂದ ಶೇ.18ಕ್ಕೆ ಇಳಿಸಲಾಗಿತ್ತು. ಕೆಲವು ಉತ್ಪನ್ನಗಳ ದರಗಳಲ್ಲಿ ಶೇ.10ರಷ್ಟು ಇಳಿಕೆಯಾಗಿದ್ದರೆ, ಕೆಲವು ಉತ್ಪನ್ನಗಳ ದರದಲ್ಲಿ ಶೇ.6ರಷ್ಟು ಇಳಿಕೆಯಾಗಿದೆ. ಸ್ಯಾನಿಟರಿ ನ್ಯಾಪ್‌ಕಿನ್‌ಗಳ ತೆರಿಗೆ ಶೂನ್ಯವಾಗಿದೆ.
ಮಾರಾಟ ಹೆಚ್ಚಳದ ನಿರೀಕ್ಷೆ
ಬರಲಿರುವ ಹಬ್ಬಗಳು ಮತ್ತು ಜಿಎಸ್‌ಟಿ ದರ ಇಳಿಕೆಯ ಕಾರಣಗಳಿಂದ ಎಲೆಕ್ಟ್ರಾನಿಕ್ಸ್ ಕಂಪನಿಗಳ ಮಾರಾಟ ವಹಿವಾಟು ಏರಿಕೆಯಾಗಲಿದೆ. ತೆರಿಗೆ ಇಳಿಸಿದ ಸರಕಾರದ ಕ್ರಮ ಸ್ವಾಗತಾರ್ಹ ಎಂದು ಗ್ರಾಹಕ ಬಳಕೆಯ ಎಲೆಕ್ಟ್ರಾನಿಕ್ಸ್ ಸಾಧನಗಳ ಉತ್ಪಾದಕರ ಸಂಘ ಹೇಳಿದೆ.