ಶಿರೂರು ಶ್ರೀಗಳು ಸಾವಿಗೂ ಮುನ್ನ ಎಸ್ ಪಿಗೆ ಬರೆದಿದ್ದರು ಪತ್ರ!

ಉಡುಪಿ: ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಸಾವಿನ ಬಗ್ಗೆ ಕುರಿತಂತೆ ದಿನಕ್ಕೊಂದು ಮಾಹಿತಿ ಲಭ್ಯವಾಗುತ್ತಿದೆ. ಈಗ ಶಿರೂರು ಸ್ವಾಮೀಜಿ ಸಾವಿಗೂ ಮುನ್ನ ಬರೆದಿದ್ದ ಪತ್ರ ಈಗ ಸುದ್ದಿಯಲ್ಲಿದೆ.

ಜೂನ್ 24 ರಂದು ಶಿರೂರು ಸ್ವಾಮೀಜಿ ಎಸ್ಪಿಗೆ ಒಂದು ಪತ್ರ ಬರೆದಿದ್ದರು. 7 ಮಠಾಧೀಶರ ಜೊತೆ ಮನಸ್ತಾಪವಾದಾಗ ಜೂನ್ 24 ರಂದು ಬರೆದ ಪತ್ರ ಇದಾಗಿದ್ದು, ಪತ್ರದ ಕೊನೆಯಲ್ಲಿ ಪಟ್ಟದ ದೇವರು ಸಿಗದೇ ಹೋದರೆ ಮುಂದಿನ ಅನಾಹುತಕ್ಕೆ ಉಳಿದ ಮಠಾಧೀಶರೇ ಹೊಣೆ ಎಂದು ಶಿರೂರು ಶ್ರೀ ಉಲ್ಲೇಖಿಸಿದ್ದಾರೆ.

ಪಟ್ಟದ ದೇವರು ಕೈಗೆ ಸಿಗುವ ತನಕ ಉಪವಾಸ ನಡೆಸುವೆ. ದೇವರ ಪ್ರಸಾದ ಸ್ವೀಕರಿಸದೆ ಅನಾಹುತವಾದರೆ ಸಪ್ತ ಮಠಾಧೀಶರೇ ಹೊಣೆ, ಪಟ್ಟದ ದೇವರನ್ನು ಆದಷ್ಟು ಬೇಗ ನಮಗೆ ನೀಡುವಂತೆ ತಾವು ಸಹಕರಿಸುತ್ತೀರಿ ಅಂತಾ ನಂಬಿದ್ದೆನೆ ಎಂದು ಬರೆದಿದ್ದರು. ಆದರೆ ಈ ಪತ್ರದ ಸ್ವೀಕೃತಿ ಜುಲೈ 25ಕ್ಕೆ ಆಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂಶಯ ವ್ಯಕ್ತಪಡಿಸಲಾಗಿತ್ತು. ಆದರೆ ಪೊಲೀಸ್ ವರಿಷ್ಟಾಧಿಕಾರಿಗಳು ಈಗ ಪತ್ರದ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ.

ಜೂನ್ 24ಕ್ಕೆ ಈ ಪತ್ರ ಸಿಕ್ಕಿತ್ತು. ಆದರೆ ಸಿವಿಲ್ ವಿಚಾರ ಆದ ಕಾರಣ ಕೋರ್ಟ್ ನಲ್ಲಿ ನೋಡಿಕೊಳ್ಳಲು ಹಿಂಬರಹ ನೀಡಲಾಗಿತ್ತು. ಸ್ವಾಮೀಜಿ ಸಾವಿನ ನಂತರ ಅದೇ ಪತ್ರದ ಜೆರಾಕ್ಸ್ ಪ್ರತಿ ನಮ್ಮ ಕೈ ಸೇರಿತ್ತು. ಅದಕ್ಕೆ ಜುಲೈ 25 ರಂದು ಸ್ವೀಕೃತಿ ನೀಡಿದ್ದೇವೆ ಎಂದು ವರಿಷ್ಟಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇಂದು ಶಿರೂರು ಸ್ವಾಮೀಜಿ ಅವರ ಮರಣೋತ್ತರ ಪರೀಕ್ಷೆ ಪೊಲೀಸರ ಕೈಗೆ ಸೇರಿದೆ. ಈ ವರದಿಯ ಪ್ರಕಾರ ಶ್ರೀಗಳ ಹೊಟ್ಟೆಯಲ್ಲಿ ವಿಷವಿರಲಿಲ್ಲ ಎಂದು ತಿಳಿಸಲಾಗಿದೆ. ಆದರೆ ಇದು ಪ್ರಾಥಮಿಕ ವರದಿಯಾಗಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್.ಎಸ್.ಎಲ್) ವರದಿ ಬರುವವರೆಗೆ ಕಾಯುವುದು ಅನಿವಾರ್ಯ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರ ಕೈ ಸೇರಿರುವ ವೈದ್ಯಕೀಯ ವರದಿಯಲ್ಲಿ ಶಿರೂರು ಶ್ರೀಗಳ ಸ್ವಾಮೀಜಿಯ ಲಿವರ್ (ಯಕೃತ್) ಸಂಪೂರ್ಣ ಹಾನಿಯಾಗಿದ್ದು, ಎರಡೂ ಮೂತ್ರಕೋಶಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲವಂತೆ. ಅಷ್ಟೇ ಅಲ್ಲದೆ ಅನ್ನನಾಳದಲ್ಲಿ ಹಲವು ರಂಧ್ರಗಳಿದ್ದವು, ಹೊಟ್ಟೆಯಲ್ಲಿ ರಕ್ತನಾಳಗಳು ಒಡೆದು ರಕ್ತಸ್ರಾವವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಜುಲೈ 19ರಂಂದು ಶ್ರೀಗಳು ಅನುಮಾನಾಸ್ಪದ ರೀತಿಯಲ್ಲಿ ಹರಿಪಾದ ಸೇರಿದ್ದರು. ಶ್ರೀಗಳ ಸಾವಿನ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಶಿರೂರು ಮೂಲ ಮಠದಲ್ಲಿ ಕಾಂಡೋಮ್ ಗಳು, ಮಹಿಳೆಯರ ಬಟ್ಟೆಗಳು ಮತ್ತು ಬಾವಿಯಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ. ಇತ್ತ ಶಿರೂರು ಶ್ರೀಗಳು ಪರಸ್ತ್ರೀ ವ್ಯಾಮೋಹಕ್ಕೆ ಸಿಲುಕಿ ಸಾವನ್ನಪ್ಪಿದ್ರಾ ಎಂಬ ಪ್ರಶ್ನೆಯೂ ಭಕ್ತಾದಿಗಳಲ್ಲಿ ಮನೆ ಮಾಡಿದೆ. ಪ್ರಾಥಮಿಕ ಮರಣೋತ್ತರ ವರದಿಯಲ್ಲಿ ಶಿರೂರು ಶ್ರೀಗಳಿಗೆ ವಿಷ ಪ್ರಾಷಾನ ಆಗಿಲ್ಲ ಎಂದು ಹೇಳಲಾಗುತ್ತಿದೆ. ಆದ್ರೆ ಎಫ್‍ಎಸ್‍ಎಲ್ ವರದಿ 6 ವಾರಗಳ ಬಳಿಕ ಪೊಲೀಸರ ಕೈ ಸೇರುವ ಸಾಧ್ಯತೆಗಳಿವೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ