ಸಂತ್ರಸ್ತ ಬಾಲಕಿ ಬಿಚ್ಚಿಟ್ಟ ಭಯಂಕರ ಸತ್ಯ….

ಪಾಟ್ನಾ:ಜು-೨೯: ಬಿಹಾರದ ನಿರಾಶ್ರಿತ ಶಿಬಿರದ 34 ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಅತ್ಯಾಚಾರ ಸಂತ್ರಸ್ತ ಬಾಲಕಿಯೊಬ್ಬಳು ಭಯಂಕರ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

ಶಿಬಿರದಲ್ಲಿ ಅತ್ಯಾಚಾರಕ್ಕೂ ಮುನ್ನ ಬಾಲಕಿಯರಿಗೆ ನೀಡಲಾಗುತ್ತಿದ್ದ ಆಹಾರದಲ್ಲಿ ಮಾದಕ ದ್ರವ್ಯ ಬೆರೆಸಿ ಕೊಡಲಾಗುತ್ತಿತ್ತು. ಕೆಲವೊಮ್ಮೆ ಊಟ ಕೊಡದೆ ಹಸಿವಿನಿಂದ ಬಳಲುವಂತೆ ಮಾಡಲಾಗುತ್ತಿತ್ತು. ಬಾಲಕಿಯರನ್ನು ಕಾಮುಕರು ವಿಕೃತವಾಗಿ ಬಳಸಿಕೊಳ್ಳುತ್ತಿದ್ದರು. ರಾತ್ರಿ ಸಮಯದಲ್ಲಿ ಅತ್ಯಾಚಾರವೆಸಗಲಾಗುತ್ತಿತ್ತು ಎಂದು ಸಂತ್ರಸ್ತ ಬಾಲಕಿಯರು ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.

ಆಹಾರದಲ್ಲಿ ಅಮಲೇರಿಸುವ ಮಾದಕ ದ್ರವ್ಯ ಬೆರಸಿ ಕೊಡುತ್ತಿದ್ದರು. ಅಮಲೇರುತ್ತಿದ್ದಂತೆ ಆಯಾಗಳು ಬ್ರಿಜೇಷ್ ಸರ್(ಪ್ರಮುಖ ಆರೋಪಿ) ಕೋಣೆಯಲ್ಲಿ ಮಲಗುವಂತೆ ಹೇಳುತ್ತಿದ್ದರು. ಬೆಳಗೆದ್ದು ನೋಡಿದಾಗ ನಮ್ಮ ಬಟ್ಟೆಗಳೆಲ್ಲ ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತಿದ್ದವು. ಅಲ್ಲದೆ ನಮ್ಮ ದೇಹ ನೋವಿನಿಂದ ಕೂಡಿರುತ್ತಿತ್ತು ಎಂದು ಸಂತ್ರಸ್ತ ಬಾಲಕಿಯೊಬ್ಬಳು ಪೋಕ್ಸೋ ಕೋರ್ಟ್ ನಲ್ಲಿ ಹೇಳಿದ್ದಾಳೆ.

ಹೇಳಿದಂತೆ ಕೇಳದಿದ್ದರೆ ನಮಗೆ ಥಳಿಸುತ್ತಿದ್ದರು. ನಮ್ಮ ಮೈಮೇಲೆ ಬಿಸಿ ನೀರು, ಎಣ್ಣೆ ಎರಚುತ್ತಿದ್ದರು. ಬ್ರಿಜೇಷ್ ಸರ್ ತಮ್ಮ ಕೋಣೆಗೆ ಕರೆದುಕೊಂಡು ಹೋಗಿ ಗುಪ್ತಾಂಗದ ಮೇಲೆ ಪರಚಿ ಗಾಯ ಮಾಡುತ್ತಿದ್ದರು. ಪ್ರತಿ ರಾತ್ರಿ ನಮ್ಮನ್ನು ಬೆಚ್ಚಿಬೀಳಿಸುವ ಕರಾಳ ರಾತ್ರಿಗಳಾಗಿಯೇ ಬರುತ್ತಿದ್ದವು.
ಕಾಮುಕರಿಂದ ತಪ್ಪಿಸಿಕೊಳ್ಳಲು ನಾವು ಕೆಲವೊಮ್ಮೆ ಒಡೆದ ಗ್ಲಾಸ್ ನಿಂದ ಕೈ ಕಾಲುಗಳಿಗೆ ಗಾಯ ಮಾಡಿಕೊಳ್ಳುತ್ತಿದ್ದೇವು ಎಂದು ಹೇಳಿದ್ದಾಳೆ.

ಈ ಶಿಬಿರದಲ್ಲಿ ಇದ್ದ ಬಾಲಕಿಯರು 7 ರಿಂದ 18 ವರ್ಷದೊಳಗಿನವರಾಗಿದ್ದು ಅವರಲ್ಲಿ ಹಲವರು ಬಾಲಕಿಯರು ಹಲವು ಸಮಸ್ಯೆಗಳಿಗೆ ತುತ್ತಾಗಿದ್ದಾರೆ ಎಂದು ಸಂತ್ರಸ್ತೆ ಹೇಳಿದ್ದಾಳೆ.

ದುರ್ಘಟನೆ ಬಯಲಿಗೆ ಬಂದ ನಂತರ ಮೊದಲಿಗೆ 29 ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ 34 ಬಾಲಕಿರ ಮೇಲೆ ಅತ್ಯಾಚಾರ ನಡೆದಿರುವುದು ವೈದ್ಯಕೀಯ ತಪಾಸಣೆಯಿಂದ ಬಹಿರಂಗಗೊಂಡಿದೆ.

ಸೇವಾ ಸಂಕಲ್ಪ ಇವಂ ಸಮಿತಿ ಎಂಬ ಸ್ವಯಂ ಸೇವಾ ಸಂಸ್ಥೆ ಈ ನಿರಾಶ್ರಿತ ಶಿಬಿರವನ್ನು ನಡೆಸುತ್ತಿದ್ದು ಬ್ರಿಜೇಶ್ ಕುಮಾರ್ ಠಾಕೂರ್ ಎಂಬಾತ ಇದರ ಮುಖ್ಯಸ್ಥನಾಗಿದ್ದ. ಈ ಸಂಬಂಧ ಬ್ರಿಜೇಶ್ ಸೇರಿದಂತೆ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

Bihar shelter home rape,Muzaffarpur,Victim girl

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ