ವಿದ್ಯುತ್ ಚಾಲಿತ ಆಟೋಗಳ ಬಳಕೆಗೆ ತಕ್ಷಣ ಪರವಾನಗಿ

ಬೆಂಗಳೂರು, ಜು.28- ಪೆಟ್ರೋಲ್, ಡೀಸೆಲ್ ಆಟೋಗಳ ಬದಲು ವಿದ್ಯುತ್ ಚಾಲಿತ ಆಟೋಗಳ ಬಳಕೆಗೆ ಮುಂದಾದರೆ ತಕ್ಷಣ ಪರವಾನಗಿ ನೀಡಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

ನಗರದ ಪ್ರೆಸ್‍ಕ್ಲಬ್ ಸಭಾಂಗಣದಲ್ಲಿ ಇಂಡಿಯನ್ ವೆಹಿಕಲ್ಸ್ ಡ್ರೈ ವರ್ಸ್ ಯೂನಿಯನ್ ಸಂಘದಿಂದ 9ನೆ ವರ್ಷದ ಚಾಲಕರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಾರಥಿ ನಂ.1 ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಬೆಂಗಳೂರು ನಗರದಲ್ಲಿ ವಾಯುಮಾಲಿನ್ಯ ಮಿತಿಮೀರಿದೆ. ಈ ನಿಟ್ಟಿನಲ್ಲಿ ಪೆಟ್ರೋಲ್, ಡೀಸೆಲ್ ಆಟೋಗಳಿಗೆ ಅನುಮತಿ ನೀಡಬೇಕೆ, ಬೇಡವೆ ಎನ್ನುವುದು ಚರ್ಚೆಯ ಹಂತದಲ್ಲಿದೆ. ಎಲೆಕ್ಟ್ರಿಕ್ ಆಟೋಗಳನ್ನು ಬಳಸಲು ಮುಂದಾದರೆ ಈಗ ಬೇಡಿಕೆಯಿರುವ 30 ಸಾವಿರ ಅರ್ಜಿಯೊಂದಿಗೆ ಹೆಚ್ಚುವರಿಯಾಗಿ ತಕ್ಷಣ ಪರವಾನಗಿ ನೀಡಲು ನಮ್ಮ ಸಂಸ್ಥೆ ಸಿದ್ಧವಿದೆ ಎಂದರು.

ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಸಾರಿಗೆ ಹಾಗೂ ಮೆಟ್ರೋ ವ್ಯವಸ್ಥೆಯನ್ನು ಹೆಚ್ಚಳ ಮಾಡುವಂತೆ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮೆಟ್ರೋ ಹಾಗೂ ವಿದ್ಯುತ್ ಆಧಾರಿತ ಸಾರಿಗೆ ವ್ಯವಸ್ಥೆ ಬಲಪಡಿಸಲು ಉದ್ದೇಶಿಸಲಾಗಿದೆ.

ಸಾರಿಗೆ ಇಲಾಖೆ ನಷ್ಟದಲ್ಲಿದ್ದು, ಈ ನಷ್ಟ ಸರಿದೂಗಿಸಲು ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಶೇ.90ರಷ್ಟು ಉದ್ಯೋಗ ಒದಗಿಸಲಾಗಿದೆ. 1.20 ಲಕ್ಷ ನೌಕರರು ಸಾರಿಗೆ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ನಾಲ್ಕು ಲಕ್ಷ ಜನಸಂಖ್ಯೆಯುಳ್ಳ ಈ ಕುಟುಂಬಗಳು ಸಾರಿಗೆ ಸಂಸ್ಥೆಯ ಉದ್ಯೋಜಗವನ್ನೇ ಅವಲಂಬಿಸಿವೆ. ಚಾಲಕರ ಹುದ್ದೆ ಕಷ್ಟಕರವಾಗಿದ್ದು, ಅಧಿಕಾರಿಗಳು ಅವರಿಗೆ ಯಾವುದೇ ರೀತಿಯ ತೊಂದರೆ ನೀಡಬಾರದೆಂದು ಆದೇಶ ನೀಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ 54 ಜನ ಚಾಲಕರಿಗೆ ಬೆಳ್ಳಿ ಪದಕ, ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು. ಮಹಿಳಾ ಚಾಲಕಿ ಉಮಾ ಎಂಬುವವರಿಗೆ ಚಿನ್ನದ ಪದಕ, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.

ಕಾರ್ಮಿಕ ಸಚಿವ ವೆಂಕಟರಮಣಪ್ಪ ಟ್ರೇಡ್ ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದಸ್ವಾಮಿ, ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘದ ರಾಜ್ಯಾಧ್ಯಕ್ಷ ಎಂ.ಮಂಜುನಾಥ್, ಕರ್ನಾಟಕ ರಾಜ್ಯ ವಾಹನ ಚಾಲಕರ ಸಂಘದ ರಾಜ್ಯಾಧ್ಯಕ್ಷ ಸಿ.ನಾರಾಯಣಸ್ವಾಮಿ, ಚಾಲಕರ ವೇದಿಕೆ ಸಂಸ್ಥಾಪಕ ವಿಕಾಸ್‍ಗೌಡ ಮತ್ತಿತರರು ಉಪಸ್ಥಿತರಿದ್ದರು.

Sarathini No.1 award,DC Thammanna, 9th year drivers of the Indian Vehicles Drywars Union Association,

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ