ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 2017-2018ರ ಸಾಲಿನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ಇದೀಗ ಪ್ರತಿಷ್ಠಿತ ಬಾರ್ಮಿ ಆರ್ಮಿ ಅಂತರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗಳ ಪ್ರಖ್ಯಾತ ಕ್ಲಬ್ ಆಗಿರುವ ಬಾರ್ಮಿ ಆರ್ಮಿ ಹಲವಾರು ವರ್ಷಗಳಿಂದಲೂ ಇಂಗ್ಲೆಂಡ್ ಆಟಗಾರರಿಗೆ ಸ್ಪೂರ್ತಿ ತುಂಬುತ್ತಾ ಬಂದಿದೆ. ಇಂತಹಾ ಮಹತ್ವದ ಕ್ಲಬ್ ಈಗ ಭಾರತ ಕ್ರಿಕೆಟ್ ತಂಡದ ನಾಯಕನನ್ನು ಗುರುತಿಸಿ ಗೌರವಿಸಿದೆ.
ಬಿಸಿಸಿಐ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಕೊಹ್ಲಿ ಪ್ರಶಸ್ತಿಯೊಂದಿಗಿರುವ ಚಿತ್ರವನ್ನು ಹಂಚಿಕೊಂಡಿದೆ. ಹಾಗೆಯೇ “ಬಾರ್ಮಿ ಆರ್ಮಿಯು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು 2017 ಮತ್ತು 2018ರ ಸಾಲಿನ ಇಂಟರ್ನ್ಯಾಷನಲ್ ಪ್ಲೇಯರ್ ಆಫ್ ದಿ ಇಯರ್ ಆಗಿ ಆಯ್ಕೆ ಮಾಡಿದೆ” ಎಂದು ಬರೆದುಕೊಂಡಿದೆ.
ಪ್ರಶಸ್ತಿ ಬಗೆಗೆ ಪ್ರತಿಕ್ರಿಯಿಸಿದ ಕೊಹ್ಲಿ ವಿದೇಶೀ ಅಭಿಮಾನಿಗಳಿಂದ ಪ್ರಶಸ್ತಿ ಸ್ವೀಕರಿಸಿದ್ದೇನೆ ಎಂದರೆ ಹೆಮ್ಮೆಯಾಗುತ್ತಿದೆ. ನಾನೊಬ್ಬ ಕ್ರಿಕೆಟಿಗನಾಗಿ ನನಗೆ ದೊರೆತ ಜಾಗತಿಕ ಮನ್ನಣೆ, ಅಭಿಮಾನಿಗಳ ಪ್ರೀತಿಗೆ ನಾನು ಸದಾ ಋಣಿ ಎಂದರು.