ಗುಂಪಿನ ಹತ್ಯೆ ಪ್ರಕರಣಗಳ ಮುಂದುವರೆಕೆ

ನವದೆಹಲಿ,ಜು.23- ಸುಪ್ರೀಂಕೋರ್ಟ್‍ನ ಗಂಭೀರ ಎಚ್ಚರಿಕೆ ನಡುವೆಯೂ ದೇಶದ ವಿವಿಧೆಡೆ ವದಂತಿಗಳಿಂದ ಉದ್ರಿಕ್ತ ಗುಂಪಿನ ಹತ್ಯೆ ಪ್ರಕರಣಗಳು ಮುಂದುವರೆದಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂಥ ಪ್ರಕರಣಗಳನ್ನು ತಡೆಗಟ್ಟಲು ರಾಜ್ಯಗಳಿಂದ ಅನುಸರಿಸಬಹುದಾದ ಮಾದರಿ ಕಾನೂನು ರೂಪಿಸುವ ಪರ್ಯಾಯ ಆಯ್ಕೆಯನ್ನು ಗಂಭೀರವಾಗಿ ಪರಿಗಣಿಸುತ್ತಿದೆ.
ವದಂತಿಗಳು ಮತ್ತು ಗಾಳಿ ಸುದ್ದಿಗಳಿಂದ ಅಮಾಯಕ ಜನರನ್ನು ಉದ್ರಿಕ್ತ ಗುಂಪು ಹಿಂಸಿಸಿ ಕೊಲ್ಲುತ್ತಿರುವುದನ್ನು ತಡೆಗಟ್ಟಲು ಎನ್‍ಡಿಎ ಸರ್ಕಾರ, ಭಾರತೀಯ ದಂಡ ಸಂಹಿತೆ(ಐಪಿಸಿ) ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‍ಪಿಸಿ) ನಿಯಮಗಳಿಗೆ ತಿದ್ದುಪಡಿಗಳನ್ನು ಮಾಡಬಹುದಾದ ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ.
ಅಲ್ಲದೆ ಇಂಥ ಕೃತ್ಯಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡುವ ಮಾದರಿ ಕಾನೂನು ರಚಿಸುವ ಮತ್ತೊಂದು ಆಯ್ಕೆಯ ಬಗ್ಗೆಯೂ ಕೇಂದ್ರ ಸರ್ಕಾರ ಪರಿಗಣಿಸುತ್ತಿದೆ ಎಂದು ಗೃಹ ಸಚಿವಾಲಯದ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.
ಗುಂಪಿನ ಹಿಂಸಾಕೃತ್ಯಗಳು ಮತ್ತು ಹತ್ಯೆಯನ್ನು ತಡೆಗಟ್ಟಲು ಹೊಸ ಕಾನೂನು ರೂಪಿಸಲು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಸುಪ್ರೀಂಕೋರ್ಟ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಈ ಆಯ್ಕೆಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ. ಈ ಕುರಿತ ಚರ್ಚೆ ಇನ್ನು ಪ್ರಾರಂಭಿಕ ಹಂತದಲ್ಲಿ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಐಪಿಸಿ ಮತ್ತು ಸಿಆರ್‍ಪಿಸಿಯ ಕೆಲವು ನಿಯಮಗಳಿಗೆ ತಿದ್ದುಪಡಿಗಳನ್ನು ಮಾಡಿದರೆ ಇಂಥ ಕೃತ್ಯಗಳನ್ನು ತಡೆಗಟ್ಟಲು ಹೊಸ ಕಾನೂನು ರಚಿಸುವ ಅಗತ್ಯವಿಲ್ಲ ಎಂಬುದನ್ನು ಸಹ ಸರ್ಕಾರ ಪರಿಶೀಲಿಸುತ್ತಿದೆ.
ಕಳೆದ ಮೂರು ದಿನಗಳಿಂದ ದೇಶದ ವಿವಿಧೆಡೆ ಮತ್ತೆ ಗುಂಪು ಪ್ರೇರಿತ ಹಿಂಸಾ ಕೃತ್ಯಗಳು ಮತ್ತು ಹತ್ಯಾ ಪ್ರಕರಣಗಳು ನಡೆಯುತ್ತಿರುವುದರಿಂದ ತೀವ್ರ ಒತ್ತಡಕ್ಕೆ ಸಿಲುಕಿರುವ ಕೇಂದ್ರ ಸರ್ಕಾರ ಈ ಆಯ್ಕೆಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸುತ್ತಿದೆ.
ಈ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ಕಾನೂನು ತಜ್ಞರು ಮತ್ತು ವಿಷಯ ಪರಿಣಿತರೊಂದಿಗೆ ಸರ್ಕಾರ ಚರ್ಚಿಸಿ ಸಾಧಕ-ಬಾಧಕಗಳನ್ನು ಗಣನೆಗೆ ತೆಗೆದುಕೊಂಡು ತೀರ್ಮಾನ ಕೈಗೊಳ್ಳಬೇಕಾಗಿದೆ.
ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಗೋ ಕಳ್ಳ ಸಾಗಾಣೆದಾರ ಎಂಬ ಶಂಕೆ ಮೇರೆಗೆ ಅಕ್ಬರ್ ಖಾನ್ ಎಂಬ 28 ವರ್ಷದ ಯುವಕನನ್ನು ಉದ್ರಿಕ್ತ ಗ್ರಾಮಸ್ಥರ ಗುಂಪೆÇಂದು ಥಳಿಸಿ ಕೊಂದು ಹಾಕಿದ ಘಟನೆ ದೇಶಾದ್ಯಂತ ಸುದ್ದಿಯಾಗಿ ವಿರೋಧ ಪಕ್ಷಗಳು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದೆ.
ಇಂಥ ಕೃತ್ಯಗಳು ಮುಂದುವರೆದಿರುವುದರಿಂದ ಕೇಂದ್ರ ಸರ್ಕಾರ ಈಗ ಬಿಗಿಯಾದ ಹೊಸ ಕಾನೂನು ಅಥವಾ ಪರ್ಯಾಯ ಮಾದರಿ ಕಾನೂನನ್ನು ರೂಪಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ