ಅಸ್ತಿತ್ವ ಕಳೆದುಕೊಂಡ ಶಿರೂರು ಶ್ರೀ ಪರ ಸಲ್ಲಿಸಿದ್ದ ಕೇವಿಯಟ್

ಉಡುಪಿ:ಜು-೨೩: ಶೀರೂರು ಮಠದ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಪರವಾಗಿ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಕೇವಿಯೆಟ್ ಅಸ್ತಿತ್ವ ಕಳೆದುಕೊಂಡಿದೆ.

ಉಡುಪಿಯ ಹಿರಿಯ ಹಾಗೂ ಕಿರಿಯ ವಿಭಾಗೀಯ ಸಿವಿಲ್ ನ್ಯಾಯಾಲಯದಲ್ಲಿ ಜು. 4ರಂದು ಶೀರೂರುಶ್ರೀ ಪರವಾಗಿ ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಕೇವಿಯೆಟ್ ಸಲ್ಲಿಸಿದ್ದರು.

ಪುತ್ತಿಗೆ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರ ಹೊರತು ಆರು ಮಠಗಳ ಎಂಟು ಯತಿಗಳು ತಮ್ಮ ವಿರುದ್ಧ ಯಾವುದೇ ದಾವೆ ಹೂಡಿ ಮಧ್ಯಂತರ ಆದೇಶ ಪಡೆದುಕೊಳ್ಳದಂತೆ ಕೇವಿಯೆಟ್ ಸಲ್ಲಿಸಿದ್ದರು. ಯಾವುದೇ ವಿಚಾರದಲ್ಲಿ ಅರ್ಜಿ ಸಲ್ಲಿಸಿ ಪಡೆವ ಕೇವಿಯೆಟ್ ಮೂರು ತಿಂಗಳು ಅಸ್ತಿತ್ವದಲ್ಲಿರುತ್ತದೆ.

ಶೀರೂರು ಶ್ರೀಪಾದರು ಜು. 19ರಂದು ನಿಧನರಾಗಿದ್ದಾರೆ. ಹೀಗಾಗಿ ಕೇವಿಯೆಟ್ ಅಸ್ತಿತ್ವ ಕಳೆದುಕೊಂಡಿದೆ. ತಮ್ಮ ವಿರುದ್ಧ ಆರು ಮಠಗಳ ಎಂಟು ಯತಿಗಳು ಇಲ್ಲಾ ಯಾರಾದರೊಬ್ಬರು ದಾವೆ ಹೂಡಿದರೆ ನ್ಯಾಯಾಲಯವು ಏಕಪಕ್ಷೀಯವಾಗಿ ಮಧ್ಯಂತರ ಆದೇಶ ನೀಡದೆ ತಮ್ಮ ವಾದವನ್ನೂ ಆಲಿಸಬೇಕೆನ್ನುವುದು ಶೀರೂರುಶ್ರೀ ಪರ ವಾದವಾಗಿದೆ.

45ವರ್ಷಗಳಿಂದ ಯತಿಯಾಗಿ ಶ್ರೀಕೃಷ್ಣನ ಪೂಜೆಯ ಮೂರು ಪರ್ಯಾಯ ನೆರವೇರಿಸಿದ ಶೀರೂರು ಶ್ರೀಗಳು ಯತಿ ಧರ್ಮ ಪಾಲಿಸದ ಕಾರಣಕ್ಕೆ ಶಿಷ್ಯ ಸ್ವೀಕಾರ ಮಾಡದಿದ್ದರೆ ಪಟ್ಟದ ದೇವರನ್ನು ನೀಡದಿರುವ ಆರು ಮಠಗಳ ಎಂಟು ಯತಿಗಳ ನಿರ್ಧಾರದ ಹಿನ್ನೆಲೆಯಲ್ಲಿ ಮೊದಲ ಹೆಜ್ಜೆಯಾಗಿ ನ್ಯಾಯಾಲಯದಲ್ಲಿ ಕೇವಿಯೆಟ್ ಸಲ್ಲಿಸಲಾಗಿತ್ತು.
udupi, no value to shiroor swamijis, caveat

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ