ಸಮಾಜದಲ್ಲಿ ಮಾದಕ ವಸ್ತು ಬಳಕೆ ಹೆಚ್ಚಳ

ನವದೆಹಲಿ, ಜು.22- ಶಾಲಾ ಮಕ್ಕಳು ಸೇರಿದಂತೆ ಸಮಾಜದಲ್ಲಿ ಮಾದಕ ವಸ್ತು ಬಳಕೆ ಮತ್ತು ಹೆಚ್ಚುತ್ತಿರುವ ಡ್ರಗ್ಸ್ ಹಾವಳಿ ನಿಗ್ರಹಕ್ಕೆ ರಾಷ್ಟ್ರೀಯ ಕ್ರಿಯಾಯೋಜನೆಯೊಂದನ್ನು ರೂಪಿಸುವಂತೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್)ಗೆ ಸುಪ್ರೀಂಕೋರ್ಟ್ ಇಂದು ಮಹತ್ವದ ನಿರ್ದೇಶನ ನೀಡಿದೆ.
ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳ ಬಳಕೆ ಗಂಭೀರವಾಗಿ ಹೆಚ್ಚಾಗುತ್ತಿರುವ ಪ್ರಸ್ತುತ ಸಂದರ್ಭಗಳಲ್ಲಿ ಸುಪ್ರೀಂಕೋರ್ಟ್‍ನ ಈ ಸೂಚನೆ ಭಾರೀ ಪ್ರಾಮುಖ್ಯತೆ ಪಡೆದುಕೊಂಡಿದೆ. ಮಾದಕ ವಸ್ತು ಹಾವಳಿ ತಡೆಗಟ್ಟಲು ರಾಷ್ಟ್ರೀಯ ಯೋಜನೆ ರೂಪಿಸುವಂತೆ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಮಣಿಂದರ್‍ಸಿಂಗ್ ಅವರಿಗೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು ಸೂಚನೆ ನೀಡಿದೆ.
ಈ ವಿಷಯವು ರಾಷ್ಟ್ರೀಯ ಪ್ರಾಮುಖ್ಯತೆ ಪಡೆದಿರುವುದರಿಂದ ಮಾದಕ ವಸ್ತುಗಳ ಹಾವಳಿ ನಿಯಂತ್ರಣಕ್ಕೆ ನೀತಿ ರೂಪಿಸಲು ಸರ್ಕಾರ ಮತ್ತು ಏಮ್ಸ್‍ಗೆ ಯಾವುದೇ ಕಾಲಮಿತಿ ವಿಸ್ತರಣೆ ಮಾಡುವುದಿಲ್ಲ ಎಂದು ಪೀಠವು ತಿಳಿಸಿದೆ.
ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಮಣಿಂದರ್‍ಸಿಂಗ್ ಅವರ ಹೇಳಿಕೆಯನ್ನು ನಾವು ಆಲಿಸಿದ್ದೇವೆ. ಈ ಸಂಬಂಧ ಸೆಪ್ಟೆಂಬರ್ 7ರಂದು ಅಥವಾ ಅದಕ್ಕೂ ಮುನ್ನ ಉನ್ನತಾಧಿಕಾರ ಸಮಿತಿಯ ವರದಿಯನ್ನು ಅಂತಿಮಗೊಳಿಸುವಂತೆ ನಾವು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಅಧಿಕಾರಿಗಳಿಗೆ ಈ ಮೂಲಕ ಸೂಚನೆ ನೀಡುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದರು.
ಈ ವಿಷಯದಲ್ಲಿ ಮತ್ತೆ ಕಾಲಮಿತಿ ವಿಸ್ತರಿಸಲಾಗದು ಎಂಬುದನ್ನು ನಾವು ಸ್ಪಷ್ಟಪಡಿಸುತ್ತೇವೆ. ಏಮ್ಸ್‍ನ ಸಕ್ಷಮ ಅಧಿಕಾರಿಗಳು ಇದನ್ನು ಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಪ್ರಾಮುಖ್ಯತೆಯ ರಾಷ್ಟ್ರೀಯ ಕ್ರಿಯಾಯೋಜನೆಯೊಂದನ್ನು ರೂಪಿಸಬೇಕು. ಯಾವುದೇ ಕಾರಣಕ್ಕೂ ಇದು ವಿಳಂಬವಾಗಬಾರದು ಎಂದು ಹಿರಿಯ ನ್ಯಾಯಮೂರ್ತಿಗಳಾದ ಎ.ಎಂ.ಕಾನ್ವಿಲ್ಕರ್ ಮತ್ತು ಬಿ.ವೈ.ಚಂದ್ರಚೂಡ್ ಅವರನ್ನೂ ಒಳಗೊಂಡ ಪೀಠವು ಹೇಳಿತು.
ಏಮ್ಸ್ ಡ್ರಗ್ಸ್ ಹಾವಳಿ ತಡೆಗಟ್ಟಲು ರಾಷ್ಟ್ರೀಯ ನೀತಿಯೊಂದನ್ನು ರೂಪಿಸುವುದೇ ಅಲ್ಲದೆ ಇವುಗಳ ದುಷ್ಪರಿಣಾಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕ್ರಮಗಳನ್ನು ಸಹ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ತಾಕೀತು ಮಾಡಿದೆ. ವಿವಿಧ ರಾಜ್ಯಗಳಲ್ಲಿ ಶಾಲಾ ಮಕ್ಕಳು ಸೇರಿದಂತೆ ಸಮಾಜದಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಡ್ರಗ್ಸ್ ಹಾವಳಿ ಗಂಭೀರ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿ ಎನ್‍ಜಿಒ ಸೇರಿದಂತೆ ವಿವಿಧ ಸಂಸ್ಥೆಗಳು ಈ ಸಂಬಂಧ ಈಗಾಗಲೇ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಅರ್ಜಿಗಳನ್ನು ಸಲ್ಲಿಸಿದ್ದು, ಇವುಗಳ ಬಗ್ಗೆ ಸುಪ್ರೀಂಕೋರ್ಟ್ ವಿಚಾರಣೆ ಮುಂದುವರಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ