ಸರ್ಕಾರ ಶೀಘ್ರ ಪತನವಾಗಲಿದೆ: ಮಾಜಿ ಶಾಸಕ ಕೆ.ಎನ್.ರಾಜಣ್ಣ

ಬೆಂಗಳೂರು, ಜು.22- ಸರ್ಕಾರದ ಕಾರ್ಯವೈಖರಿಯನ್ನು ಗಮನಿಸುತ್ತಿದ್ದರೆ ಈ ಸರ್ಕಾರಕ್ಕೆ ಆಯಸ್ಸು ತುಂಬ ಕಡಿಮೆ ಎಂದು ಕಾಣುತ್ತದೆ. ಶೀಘ್ರ ಪತನವಾಗುತ್ತದೆ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದರು.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಮಂತ್ರಿ ಇನ್ನೊಬ್ಬ ಮಂತ್ರಿಯ ಖಾತೆಯಲ್ಲಿ ಹಸ್ತಕ್ಷೇಪ ಮಾಡುವುದು ಎಷ್ಟು ಸಮಂಜಸ. ಸಚಿವರಾದ ಯು.ಟಿ.ಖಾದರ್ ಅವರ ಗಮನಕ್ಕೇ ಬರದೆ ಅವರ ಖಾತೆಯಲ್ಲಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಾರೆಂದರೆ ಸರ್ಕಾರದ ಕಾರ್ಯವೈಖರಿ ಹೇಗಿರಬೇಕು? ಇಂತಹ ಕಾರ್ಯವೈಖರಿ ಇರುವ ಸರ್ಕಾರದ ಆಯಸ್ಸು ಹೆಚ್ಚಾಗಿಲ್ಲವೆಂದು ಕಾಣುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿಗಳು ಕಣ್ಣೀರು ಸುರಿಸುವುದನ್ನು ಖಂಡಿಸಿದ ರಾಜಣ್ಣ ಅವರು, ಎಷ್ಟೇ ಕಷ್ಟ-ಸುಖ ಬರಲಿ ನಿಮ್ಮ ಜತೆ ನಾವಿದ್ದೇವೆ ಎಂದು ಮುಖ್ಯಮಂತ್ರಿಗಳಾದವರು ಜನರಿಗೆ ಧೈರ್ಯ ತುಂಬಬೇಕು. ಅದನ್ನು ಬಿಟ್ಟು ಅವರೇ ಅಳುವುದು ರಾಜ್ಯಕ್ಕೆ ಮಾಡುವ ಅಪಮಾನ. ಎಲೆಕ್ಷನ್ ಸಂದರ್ಭದಲ್ಲಿ ಏನೋ ಅಳುತ್ತಾರೆ. ಆದರೆ, ಮುಖ್ಯಮಂತ್ರಿ ಹುದ್ದೆ ಹಿಡಿದ ಮೇಲೂ ಕೂಡ ಅಳುವುದು ಎಂದರೆ ಏನು..? ಸಿಎಂ ಕಣ್ಣೀರು ಹಾಕಿರುವ ವಿಷಯ ಸಂಸತ್‍ನಲ್ಲೂ ಚರ್ಚೆಯಾಗುವುದು ನಾಚಿಕೆಯ ವಿಷಯ ಎಂದು ರಾಜಣ್ಣ ಕಿಡಿಕಾರಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ