ಕೊಡಗು ಜಿಲ್ಲೆಯಲ್ಲಿ ಪ್ರವಾಹ ಸೃಷ್ಟಿದ ಮಳೆ

ಮಡಿಕೇರಿ,ಜು.20- ಕೊಡಗು ಜಿಲ್ಲೆಯಲ್ಲಿ ಬಿದ್ದ ಭಾರೀ ಮಳೆಯಿಂದ ಉಂಟಾದ ಪ್ರವಾಹ ಹಾಗೂ ಹಾನಿಯ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದ ಬಾಲಕ ಅಬ್ದುಲ್ ಫತಾಹ್‍ನನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಿನ್ನೆ ಭೇಟಿ ಮಾಡಿ ಮಾತುಕತೆ ನಡೆಸಿದರು.
ಕೊಡುಗು ಜಿಲ್ಲಾಡಳಿತದ ಪರಿಶೀಲನಾ ಸಭೆಯ ನಂತರ ಬಾಲಕನೊಂದಿಗೆ ಮುಖ್ಯಮಂತ್ರಿ ಮಾತುಕತೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರ ಸಮಗ್ರ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿದ್ದು ಯಾವ ಜಿಲ್ಲೆಯನ್ನೂ ಕಡೆಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅತಿವೃಷ್ಟಿಯಿಂದ ಉಂಟಾಗಿರುವ ನಷ್ಟಕ್ಕೆ ಪರಿಹಾರ ಒದಗಿಸಲಾಗುವುದು. ಕೊಡಗು ಜಿಲ್ಲೆಗೆ ಮೊದಲ ಹಂತದಲ್ಲಿ 329 ಕೋಟಿ ರೂ. ಪರಿಹಾರ ಕೇಳಿದ್ದಾರೆ, ಸರ್ಕಾರದಿಂದ 100 ಕೋಟಿ ರೂ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.
ಬಾಲಕನ ಮಾತನ್ನು ಆಲಿಸಿದ ಮುಖ್ಯಮಂತ್ರಿ, ನೀನು ಕೇಳದಿದ್ದರೂ ಕೊಡಗಿಗೆ ಬಂದು ಸಮಸ್ಯೆ ಆಲಿಸಿ ಪರಿಹಾರ ಕೊಡುತ್ತಿದ್ದೆ. ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಬಾಲಕ ಫತಾಹ್, ಮುಖ್ಯಮಂತ್ರಿಗಳು ಕೊಡಗಿಗೆ ಬಂದು ನಮ್ಮನ್ನು ಭೇಟಿ ಮಾಡಿದ್ದು ಬಹಳ ಖುಷಿಯಾಯಿತು. ನಮ್ಮೂರಿನ ರಸ್ತೆ ಹಾಗೂ ಶಾಲೆಯ ಕಾಂಪೌಂಡ್ ದುರಸ್ತಿ ಮಾಡಿಕೊಡುವಂತೆ ಕೇಳಿಕೊಂಡಿದ್ದೇನೆ. ಅದಕ್ಕೆ ಮುಖ್ಯಮಂತ್ರಿ ಒಪ್ಪಿಕೊಂಡಿದ್ದಾರೆ. ಇದು ನನಗೆ ಸಂತಸ ತಂದಿದೆ ಎಂದನು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ