ಸಂಸತ್ ಮುಂಗಾರು ಅಧಿವೇಶನ: ಪ್ರಧಾನಿ ಮೋದಿ ವಿರುದ್ಧ ರಾಹುಲ್ ನೇರ ವಾಗ್ದಾಳಿ

ನವದೆಹಲಿ:ಜು-20:ಅವಿಶ್ವಾಸ ನಿರ್ಣಯದ ಮೇಲೆ ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ರಾಹುಲ್​ ಗಾಂಧಿ ಮಾತನಾಡಿದ್ದು, ರಾಹುಲ್ ವಾಗ್ವಾಳಿಗೆ ಲೋಕಸಭೆಯಲ್ಲಿ ಭಾರೀ ಗದ್ದಲ-ಕೋಲಾಹಲ ನಡೆದು ಸ್ಪೀಕರ್ ಸುಮಿತ್ರಾ ಮಹಾಜನ್ ಕೆಲಕಾಲ ಸದನವನ್ನು ಮುಂದೂಡಿದ ಘಟನೆ ನಡೆಯಿತು.

ಲೋಕಸಭೆಯಲ್ಲಿ ರಾಹುಲ್ ಗಾಂಧಿ ಆವೇಶ ಭರಿತರಾಗಿ ಮಾತನಾಡಿ, ಪ್ರಧಾನಿ ಮೋದಿ ವಿರುದ್ಧ ನಿರಂತರ ವಾಗ್ದಾಳಿ ನಡೆಸಿದರು. ಪ್ರಧಾನಿ ಉದ್ಯಮಿಗಳ ಸ್ನೇಹಿ, ರೈತರ ಪರಿಸ್ಥಿತಿ ಏನಾದರೂ ಆಗಲಿ ಎನ್ನುವ ಧೋರಣೆ ಹೊಂದಿದ್ದಾರೆ ಎಂದು ನೇರ ವಾಗ್ದಾಳಿ ನಡೆಸಿದರು.

ಭಾಷಣದಲ್ಲಿ ಮಾತ್ರ ರೈತರ ಪರ ಮಾತನಾಡುತ್ತಾರೆ. ಆದರೆ, ನಮ್ಮ ಹಣಕಾಸು ಸಚಿವರು ರೈತರಿಗೆ ಯಾವುದೇ ಕಾರಣಕ್ಕೂ ಅನುದಾನ ನೀಡೋಕೆ ಆಗಲ್ಲ ಎಂದು ಹೇಳ್ತಾರೆ. ಮೋದಿ ಚೌಕಿದಾರ್​ ಅಲ್ಲ ಭಾಗೀದಾರ ಎಂದು ರಾಹುಲ್ ಆರೋಪ ಮಾಡಿದರು.

ಇನ್ನು ರಫೆಲ್​ ಡೀಲ್​ ಬಗ್ಗೆ ಪ್ರಸ್ತಾಪ ಮಾಡಿದ ರಾಹುಲ್​ ಗಾಂಧಿ, ಫ್ರಾನ್ಸ್ ಅಧ್ಯಕ್ಷರೇ ನನಗೆ ಹೇಳಿದ್ದಾರೆ. ಯಾವುದೇ ಸೀಕ್ರೇಟ್​ ಫ್ಯಾಕ್ಟ್​ ಇಲ್ಲ ಎಂದು ನನಗೆ ಹೇಳಿದ್ದಾರೆ. ಭಾರತ- ಫ್ರಾನ್ಸ್ ನಡುವೆ ಯಾವುದೇ ಗುಪ್ತ ಒಪ್ಪಂದವಾಗಿಲ್ಲ ಎಂದು ಹೇಳಿದ್ದಾರೆ. ಪ್ರಧಾನಿ ಉದ್ಯಮಿಗಳೊಂದಿಗೆ ಹೆಚ್ಚಿನ ಸಂಬಂಧ ಹೊಂದಿದ್ದಾರೆ. ಇದು ದೇಶದ ಎಲ್ಲರಿಗೂ ಗೊತ್ತಿದೆ. ರಪೇಲ್​ ಡೀಲ್​ನಲ್ಲಿ ಉದ್ಯಮಿಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಇದು ದೇಶದ ಪ್ರತಿಯೊಬ್ಬರಿಗೂ ಗೊತ್ತು. ಉದ್ಯಮಿಯೊಬ್ಬರು ಇದರ ಲಾಭ ಪಡೆದಿದ್ದಾರೆ. ಸುಮಾರು 45 ಸಾವಿರ ಕೋಟಿ ರೂ.ರಪೇಲ್​ ಡೀಲ್​ ನಲ್ಲಿ ಲಾಭ ಪಡೆದಿದ್ದಾರೆ. ರಪೇಲ್​ ಡೀಲ್​ ಅನ್ನು ಎಚ್​ಎಎಲ್​ನಿಂದ ಕಿತ್ತುಕೊಂಡು ಉದ್ಯಮಿಗೆ ಕೊಟ್ಟಿದ್ದೇಕೆ…? ಈ ಬಗ್ಗೆ ಪ್ರಧಾನಿ ಲೋಕಸಭೆಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ರಾಹುಲ್​ ಹೇಳಿಕೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಆಕ್ಷೇಪ ವ್ಯಕ್ತಪಡಿಸಿ, ಪ್ರಧಾನಿ ವಿರುದ್ಧ ದಾಖಲೆ ರಹಿತ ಆರೋಪ ಮಾಡಿದ ರಾಹುಲ್​ ಗಾಂಧಿ ಸದನದ ನಿಯಮ ಉಲ್ಲಂಘಿಸಿದ್ದಾರೆ ಎಂದರು. ಇದಕ್ಕೆ ಧ್ವನಿ ಗೂಡಿಸಿದ ಸಚಿವ ಅನಂತ್ ಕುಮಾರ್, ರಾಹುಲ್​ ಗಾಂಧಿ ಹಾಗೂ ಅವರ ಕುಟುಂಬ ಸದನಕ್ಕೆ ಗೌರವ ಕೊಡಲ್ಲ ಎಂದು ಆರೋಪಿಸಿದರು. ಅಲ್ಲದೇ ಸದನದ ನಿಯಮವನ್ನು ಅನಂತಕುಮಾರ್​ ಓದಿ ಹೇಳಿದರು.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ಪುತ್ರನ ಕಂಪನಿ ಆದಾಯ 1ಸಾವಿರ ಪಟ್ಟು ಹೆಚ್ಚಾಗಿದ್ದು ಹೇಗೆ..? ಲೋಕಸಭೆಯಲ್ಲಿ ಶಾ ವಿರುದ್ಧ ಸಿಡಿದೆದ್ದ ರಾಹುಲ್​, ನಿರ್ಮಲಾ ಸೀತಾರಾಮನ್​ ದೇಶಕ್ಕೆ ಸುಳ್ಳು ಹೇಳುತ್ತಿದ್ದಾರೆ. ಪ್ರಧಾನಿಗಳೇ ದೇಶಕ್ಕೆ ಸತ್ಯವನ್ನು ಹೇಳಿ ಅಚ್ಚೇ ದಿನ ಸರ್ಕಾರ ಅಲ್ಲ, ಸೂಟ್ ಬೂಟ್​ ಸರ್ಕಾರ ಎಂದು ಗಂಭೀರ ಆರೋಪ ಮಾಡಿದರು.

ರಾಹುಲ್​ ಗಾಂಧಿ ಅವರ ಆರೋಪಗಳಿಂದ ಸಿಡಿದೆದ್ದ ನಿರ್ಮಲಾ ಸೀತಾರಾಮನ್​ ಜಿಎಸ್​ಟಿ ಇದು ಕಾಂಗ್ರೆಸ್​ ರೈಲು, ಕಾಂಗ್ರೆಸ್ ರೈಲು ಹತ್ತಿರುವ ಬಿಜೆಪಿ ಇದು ನಮ್ಮ ಯೋಜನೆ ಎಂದು ಹೇಳುತ್ತಿದ್ದಾರೆ. ಇದರಿಂದ ಯಾವುದೇ ಉಪಯೋಗವಾಗಿಲ್ಲ, ಒಂದು ತೆರಿಗೆ ಒಂದು ದೇಶ ಎಂದರು. ಆದರೆ ನಾಲ್ಕು ಸ್ಲಾಬ್​ಗಳಲ್ಲಿ ತೆರಿಗೆ ವಿಧಿಸಲಾಗುತ್ತಿದೆ. ಪ್ರಧಾನಿ ಕೇವಲ ವಿದೇಶಿ ಪ್ರವಾಸ ಕೈಗೊಳ್ಳುತ್ತಾರೆ. ಹತ್ತಾರು ಸೂಟ್​ ಬೂಟ್ ಹಾಕಿಕೊಂಡು ಓಡಾಡುತ್ತಾರೆ.. ಇದರಿಂದ ದೇಶಕ್ಕೆ ಏನು ಲಾಭವಾಗಿದೆ..?ಬಡವರಿಗೆ, ರೈತರಿಗೆ ಏನು ಲಾಭವಾಗಿದೆ…? ಎಂದು ಪ್ರಶ್ನಿಸಿದರು.

ದೇಶದ ರೈತರು, ದಲಿತರು, ಆದಿವಾಸಿಗಳ ಬಗ್ಗೆ ಪ್ರಧಾನಿ ಒಂದೇ ಒಂದು ಮಾತನಾಡ್ತಿಲ್ಲ. ದೇಶದ ಪ್ರತಿ ಕುಟುಂಬಕ್ಕೆ 15 ಲಕ್ಷ ರೂ. ತಂದು ಕೊಡುತ್ತೇವೆ ಎಂದು ಪ್ರಧಾನಿ ಹೇಳಿದ್ರು. ಎಲ್ಲಿ ಆ ಹಣ..? ದೇಶದಲ್ಲಿ ಯುವಕರು ನೌಕರಿ ಇಲ್ಲದೇ ಒದ್ದಾಡುತ್ತಿದ್ದಾರೆ. ನಾಲ್ಕು ಲಕ್ಷ ಯುವಕರಿಗೂ ಉದ್ಯೋಗ ದೊರೆತಿಲ್ಲ
ಪ್ರಧಾನಿ ಮಾತ್ರ 2 ಕೋಟಿ ಯುವಕರಿಗೆ ಉದ್ಯೋಗ ದೊರೆತಿದೆ ಎಂದು ಹೇಳುತ್ತಿದ್ದಾರೆ. ಎಲ್ಲಿದೆ ಉದ್ಯೋಗ…?  ಪ್ರಧಾನಿ ನೌಕರಿ ಕೊಡಿ ಎಂದು ಕೇಳಿದರೆ ಪಕೋಡಾ ಮಾಡಿ ಎನ್ನುತ್ತಾರೆ. ಇದು ಸರಿಯೇ..? ಕಪ್ಪು ಹಣ ವಾಪಸ್​ ತರುತ್ತೇವೆ ಎಂದು ರಾತ್ರಿ ಎಂಟು ಗಂಟೆಗೆ ಹಳೆ ನೋಟುಗಳನ್ನು ಘೋಷಿಸಿದರು.. ಇನ್ನೂ ವರೆಗೂ ಒಂದೇ ಒಂದು ಪೈಸೆ ದೇಶಕ್ಕೆ ವಾಪಸ್​ ಬಂದಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

ರಾಹುಲ್​ ಮಾತಿಗೆ ಬಿಜೆಪಿ ಸದಸ್ಯರಿಂದ ಪ್ರತಿರೋಧ ವ್ಯಕ್ತವಾಗಿ ಸದನದಲ್ಲಿ ಗದ್ದಲವುಂಟಾಯಿತು. ಇದರಿಂದ ಸ್ಪೀಕರ್​ ಸುಮಿತ್ರಾ ಮಹಾಜನ್​ ದಾಖಲೆ ಸಮೇತ ಮಾತನಾಡುವಂತೆ ರಾಹುಲ್ ಗಾಂಧಿಗೆ ಸೂಚನೆ ನೀಡಿ, ಕಲಾಪವನ್ನು ಕೆಲ್ಕಾಲ ಮುಂದೂಡಿದರು.
Rahul Gandhi,attacks govt,Lok Sabha,raises Rafale deal

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ