ಅವಿಶ್ವಾಸ ಗೊತ್ತುವಳಿ ಮಂಡನೆಗೆ ಪ್ರಧಾನಿ ಮೋದಿ ಉತ್ತರ

ನವದೆಹಲಿ:ಜು-20: ಕೇಂದ್ರ ಎನ್ ಡಿಎ ಸರ್ಕಾರದ ವಿರುದ್ಧದ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಿದ್ದು, ಸದನದಲ್ಲಿ ಬಿಜೆಪಿಗೆ ಪೂರ್ಣ ಬಹುಮತವಿದ್ದರೂ ಅವಿಶ್ವಾಸ ನಿರ್ಣಯ ಮಂಡನೆ ಮಾಡಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.

ಮೂರು ದಶಕದ ನಂತರ ಏಕೈಕ ಪಕ್ಷವೊಂದು ಭಾರಿ ಬಹುಮತ ಗಳಿಸಿದೆ. ಆದರೂ ಸರಕಾರವನ್ನು ಉರುಳಿಸುವ ಪ್ರಯತ್ನ ನಡೆದಿರುವುದು ಸೂಕ್ತವಲ್ಲ ಎಂದು ಮೋದಿ ತಿಳಿಸಿದರು.

ಸದನದಲ್ಲಿ ಇನ್ನೂ ಫಲಿತಾಂಶ ಬಂದಿಲ್ಲ ಆದರೂ ಒಬ್ಬ ಮೋದಿಯನ್ನು ಅಧಿಕಾರದಿಂದ ಇಳಿಸಲು ಇಷ್ಟೊಂದು ದೊಡ್ಡ ಮಟ್ಟದ ಪ್ರಯತ್ನ ಅಗತ್ಯವಿದೆಯೇ ಎಂದು ಕೇಳಿದ ಪ್ರಧಾನಿ, ಅವರು( ರಾಹುಲ್ ಗಾಂಧಿ) ನನ್ನ ಕುರ್ಚಿಯತ್ತ ಬಂದು ಎದ್ದೇಳಿ, ಎದ್ದೇಳಿ ಎಂದು ಹೇಳಿದರು. ಆದರೆ ನನ್ನನ್ನು ಇಲ್ಲಿಂದ ಎಬ್ಬಿಸಲು ಅಥವಾ ಕೂರಿಸಲು 125 ಕೋಟಿ ಭಾರತೀಯರಿಂದ ಮಾತ್ರ ಸಾಧ್ಯ ಎಂದರು.

ಎನ್‌ಡಿಎ ಮೈತ್ರಿ ಕೂಟ ಸರಕಾರದ ವಿರುದ್ಧ ಮಂಡಿಸಲಾಗಿರುವ ಅವಿಶ್ವಾಸ ನಿರ್ಣಯ ಗೊತ್ತುವಳಿ ಚರ್ಚೆ ವೇಳೆ ಪ್ರತಿಪಕ್ಷಗಳಾದ ಟಿಡಿಪಿ, ಆಪ್‌ ಮತ್ತು ಟಿಎಂಸಿ ಪಕ್ಷಗಳ ಸದಸ್ಯರು ತೀವ್ರ ವಾಗ್ದಾಳಿ ನಡೆಸಿದರು.

ಚರ್ಚೆ ವೇಳೆ ಭಾಷಣ ಮಾಡಿದ ಅಸಾದುದ್ದೀನ್‌ ಓವೈಸಿ, ದಲಿತರ ಮೇಲೆ ಪ್ರೀತಿ ಇದೆ ಎಂದು ಹೇಳಿಕೊಳ್ಳುವ ಕೇಂದ್ರ ಸರಕಾರ, ಎಸ್‌ಸಿಎಸ್‌ಟಿ ಕಾಯಿದೆ ಜಾರಿಗೆ ತರುವ ವಿಷಯದಲ್ಲಿ ಹಿಂದೇಟು ಹಾಕುತ್ತಿದೆ ಎಂದರು.

ಅವಿಶ್ವಾಸ ನಿರ್ಣಯ ಕುರಿತು ಪ್ರತಿಪಕ್ಷಗಳು ಮಂಡಿಸಿರುವ ಗೊತ್ತುವಳಿ ಕುರಿತು ಬೆಳಗ್ಗಿನಿಂದಲೂ ಬಿಸಿ ಬಿಸಿ ಚರ್ಚೆ ನಡೆಯಿತು.
No-Confidence Motion,PM Narendra Modi,reply,Parliament

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ