ಐಎಸ್‍ಸಿ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ, ಮೋದಿ ಪ್ರೇರಣೆ

ನವದೆಹಲಿ,ಜು.19- ಜೀವನದಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಪ್ರೇರಣೆ ಸಿಗುತ್ತದೆ. ಇಲ್ಲೊಬ್ಬ ವಿದ್ಯಾರ್ಥಿಗೆ ಪ್ರಧಾನಿ ನರೇಂದ್ರ ಮೋದಿ ಪ್ರೇರಣೆಯಾಗಿ ಐಎಸ್‍ಸಿ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದಾನೆ. ಉತ್ತರ ಪ್ರದೇಶದ ರಾಜಧಾನಿ ಲಖ್ನೋದ ವಿದ್ಯಾರ್ಥಿ ಸಾಕ್ಷಿ ಪ್ರದ್ಯುಮ್ನ ಐಎಸ್‍ಸಿ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ ರ್ಯಾಂಕ್ ಬಂದಿದ್ದು, ಇವನಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬರೆದ ಪುಸ್ತಕವೇ ಪ್ರೇರಣೆಯಾಗಿದೆಯಂತೆ. ತಾನೂ ಐಎಸ್‍ಸಿಯಲ್ಲಿ ಶೇ.99.5ರಷ್ಟು ಅಂಕ ಪಡೆದು ಪ್ರಧಾನಿಗೆ ಧನ್ಯವಾದ ಅರ್ಪಿಸಿದ್ದಾನೆ. ವಿದ್ಯಾರ್ಥಿಯ ಟ್ವೀಟ್‍ಗೆ ಸಂತಸಗೊಂಡಿರುವ ಮೋದಿ, ಧನ್ಯವಾದ ಹೇಳಿದ್ದಾರಲ್ಲದೆ ಈತನ ಸಾಧನೆ ಎಲ್ಲರಿಗೂ ಆದರ್ಶವಾಗಲಿ ಎಂದು ಹಾರೈಸಿದ್ದಾರೆ.
ಪ್ರಧಾನಿ ಟ್ವೀಟ್‍ಗೆ ಇನ್ನಷ್ಟು ಸಂತಸಗೊಂಡಿರುವ ಸಾಕ್ಷಿ ಪ್ರದ್ನುಮ್ನ , ನನಗೆ ಪ್ರಧಾನಿಯವರು ಟ್ವೀಟ್ ಮಾಡುತ್ತಾರೆಂದು ನಿರೀಕ್ಷೆ ಮಾಡಿರಲಿಲ್ಲ. ದೇಶದ ಪ್ರಧಾನಿಯೇ ನನಗೆ ಟ್ವೀಟ್ ಮಾಡಿ ನಿಮಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸಿರುವುದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಹೇಳಿಕೊಂಡಿದ್ದಾನೆ.
ಪ್ರಧಾನಿಯವರು ಬರೆದಿರುವ ಎಕ್ಸಾಮ್ ವಾರಿಯರ್ ಪುಸ್ತಕ ನನ್ನಲ್ಲಿರುವ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಪರೀಕ್ಷೆಗೆ ಯಾವ ರೀತಿ ಸಿದ್ಧತೆ ನಡೆಸಬೇಕು, ಪರೀಕ್ಷೆ ಬರೆಯುವ ಕ್ರಮ, ತರಗತಿಯಲ್ಲಿ ಪಾಠಪ್ರವಚನ ಆಲಿಸುವುದು, ಸೇರಿದಂತೆ ಹಲವು ರೀತಿಯ ಉಪಯುಕ್ತ ಸಲಹೆಗಳನ್ನು ನೀಡಲಾಗಿದೆ.
ಈ ಪುಸ್ತಕವನ್ನು ಶ್ರದ್ಧೆಯಿಂದ ಓದಿ, ಅದರಲ್ಲಿರುವ ಅಂಶಗಳನ್ನು ಅಳವಡಿಸಿಕೊಂಡಿದ್ದರಿಂದ ಇಂದು ನಾನು ಐಎಸ್‍ಸಿಯಲ್ಲಿ ಮೊದಲ ರ್ಯಾಂಕ್ ಪಡೆದಿದ್ದೇನೆ. ನಾನು ರ್ಯಾಂಕ್ ಪಡೆಯಲು ಮೋದಿಯವರ ಪುಸ್ತಕವೇ ಕಾರಣ ಎಂದು ಹೇಳಿದ್ದಾನೆ. ಪರೀಕ್ಷೆ ಶುರುವಾಗುವ ಮುನ್ನ ನೀವು ಬರೆದ ಎಕ್ಸಾಂ ವಾರಿಯರ್ ಪುಸ್ತಕ ನನಗೆ ಸಿಕ್ಕಿತ್ತು. ಓದಲು ಕುಳಿತಾಗ ಏಕಾಗ್ರತೆ ಸಾಧಿಸಲು, ಪರೀಕ್ಷೆಯ ಒತ್ತಡ ನಿವಾರಿಸಲು ಮತ್ತು ಧೈರ್ಯ ಹಾಗೂ ಉತ್ಸಾಹದಿಂದ ಪರೀಕ್ಷೆಯಲು ಸಾಧ್ಯವಾಯಿತು. ಪರೀಕ್ಷೆ ಬರೆಯಲು ಸರಳ ಸೂತ್ರಗಳು ನಿಮ್ಮ ಪುಸ್ತಕದಲ್ಲಿದೆ. ಸಮಯದ ಸದುಪಯೋಗ, ವಿಷಯವನ್ನು ಪ್ರಸ್ತುತಪಡಿಸುವಿಕೆ ನನ್ನ ಧನಾತ್ಮಕ ಯೋಚನೆಗಳನ್ನು ಮೂಡಿಸಿದ್ದರಿಂದ 12ನೇ ತರಗತಿಯಲ್ಲಿ ಮೊದಲ ರ್ಯಾಂಕ್ ಪಡೆದಿದಿದ್ದೇನೆ.
ಇಂಥ ಅದ್ಭುತವಾಗಿರುವ ಪುಸ್ತಕ ಬರೆದುದಕ್ಕೆ ತಮಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಪ್ರದ್ಯುಮ್ನ ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾನೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ