ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರ ವಿರುದ್ಧ ರಾಜ್ಯಾದ್ಯಂತ ಆಂದೋಲನ

ಬೆಂಗಳೂರು, ಜು.18-ದಲಿತರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದರು ಎಂದು ಆರೋಪಿಸಿ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರ ವಿರುದ್ಧ ರಾಜ್ಯಾದ್ಯಂತ ಆಂದೋಲನ ನಡೆಸಲು ಕರ್ನಾಟಕ ನವಜಾಗೃತಿ ವೇದಿಕೆ ಸಜ್ಜಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಅನಂತರಾಯಪ್ಪ, ರಾಹುಲ್‍ಗಾಂಧಿಯವರ ಕುತಂತ್ರ ಖಂಡಿಸಲು ರಾಜ್ಯವ್ಯಾಪಿ ಆಂದೋಲನವನ್ನೇ ಹಮ್ಮಿಕೊಂಡಿದ್ದು, ಅದರ ಅಂಗವಾಗಿ ಇದೇ 21 ರಂದು ನಗರದ ಮೌರ್ಯ ಹೊಟೇಲ್ ಸಮೀಪದ ಗಾಂಧಿ ಪ್ರತಿಮೆ ಬಳಿ ಆಂದೋಲನಕ್ಕೆ ಚಾಲನೆ ದೊರೆಯಲಿದೆ.
ನಂತರ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಸ್ಥಳೀಯ ದಲಿತ ಸಂಘಟನೆಗಳ ಸಹಯೋಗದಲ್ಲಿ ಬೇರೆ ಬೇರೆ ದಿನಗಳಂದು ಆಂದೋಲನ ನಡೆಯಲಿದೆ. 21 ರಂದು ದಲಿತ ಸಂಘಟನೆಗಳ ಹಿರಿಯ ಮುಖಂಡರು, ಪ್ರಗತಿಪರ ಚಿಂತಕರು ಆಂದೋಲನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ದಲಿತ ನಾಯಕರು ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತಿನ ಸಿಪಾಯಿಗಳಂತೆ ಸಾಕಷ್ಟು ದುಡಿದಿದ್ದಾರೆ. ಯಾವುದೇ ಸ್ಥಾನಮಾನಕ್ಕೂ ತಕರಾರು ಮಾಡಿಲ್ಲ. ಬೇರೆಯವರ ಏಳಿಗೆಗೆ ಮಾರಕವಾಗುವಂತಹ ಆಕ್ರಮಣಕಾರಿ ರಾಜಕಾರಣವನ್ನೂ ಮಾಡಿಲ್ಲ. ತಮ್ಮ ಭವಿಷ್ಯವನ್ನು ಹೈಕಮಾಂಡ್ ಕೈಗೆ ಕೊಟ್ಟು ರಾಜಕೀಯ ಮಾಡಿಕೊಂಡು ಬಂದಿದ್ದಾರೆ. ಹಾಗಿದ್ದೂ ದಲಿತರಿಗೆ ಅನ್ಯಾಯವಾಗಿದೆ.

ಒಕ್ಕಲಿಗ, ಲಿಂಗಾಯತ, ಹಿಂದುಳಿದವರಿಗೆ ಅನೇಕ ಬಾರಿ ಮುಖ್ಯಮಂತ್ರಿ ಪದವಿ ನೀಡಿರುವ ಕಾಂಗ್ರೆಸ್ ಕಳೆದ 76 ವರ್ಷಗಳಿಂದ ನಿರಂತರ ಬೆಂಬಲ ನೀಡುತ್ತಿರುವ ದಲಿತರನ್ನು ನಿರ್ಲಕ್ಷಿಸಿದೆ. ಈ ಬಾರಿ ಸಹ ರಾಹುಲ್‍ಗಾಂಧಿ ದಲಿತರಿಗೆ ಅವಕಾಶ ತಪ್ಪಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತರಿಗೆ ಸಿಎಂ ಪದವಿ ತಪ್ಪಿಸುವ ದುರುದ್ದೇಶದಿಂದಲೇ ಜೆಡಿಎಸ್‍ಗೆ ಈ ಬಾರಿ ಸಮ್ಮಿಶ್ರ ಸರ್ಕಾರದಲ್ಲಿ ಆ ಪದವಿ ನೀಡಲಾಗಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಉಪಾಧ್ಯಕ್ಷ ಎಂ.ಶ್ರೀನಿವಾಸ್, ಉಪಾಧ್ಯಕ್ಷರಾದ ಆರ್.ಕೆಂಡಯ್ಯ, ಎನ್.ಜಯರಾಮ್ ಮತ್ತಿತರರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ