ಉಚಿತವಾಗಿ ಬಸ್‍ಪಾಸ್ ನೀಡುವಂತೆ ಒತ್ತಾಯಿಸಿ ಬಂದ್‍ಗೆ ಕರೆ

 

ಬೆಂಗಳೂರು,ಜು.16- ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್‍ಪಾಸ್ ನೀಡಲು ಮೀನಾಮೇಷ ಎಣಿಸುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಇದೇ 21ರಂದು ವಿದ್ಯಾರ್ಥಿ ಸಂಘಟನೆಗಳು ರಾಜ್ಯಾದ್ಯಂತ ಶಾಲಾಕಾಲೇಜುಗಳ ಬಂದ್‍ಗೆ ಕರೆ ನೀಡಿದೆ.
ಎಬಿವಿಪಿ ಸೇರಿದಂತೆ ಹಲವು ವಿದ್ಯಾರ್ಥಿ ಸಂಘಟನೆಗಳು 21ರಂದು ರಾಜ್ಯಾದ್ಯಂತ ಬಂದ್‍ಗೆ ಕರೆ ನೀಡಿದ್ದು, ಅಂದು ಖಾಸಗಿ, ಸರ್ಕಾರಿ ಅನುದಾನ, ಅನುದಾನರಹಿತ ಶಾಲಾಕಾಲೇಜುಗಳು ಸ್ವಯಂಪ್ರೇರಿತವಾಗಿ ಬಂದ್ ಮಾಡಬೇಕೆಂದು ಕರೆ ನೀಡಲಾಗಿದೆ.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಂದು ಹಣಕಾಸು ಖಾತೆಯನ್ನು ಹೊಂದಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ನೀಡುವ ಯೋಜನೆಯನ್ನು ಘೋಷಣೆ ಮಾಡಿದ್ದರು.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿ ಎರಡು ತಿಂಗಳು ಕಳೆದರೂ ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡುವ ಬಗ್ಗೆ ಸರ್ಕಾರ ಗಮನಹರಿಸಿಲ್ಲ.
ಕೇವಲ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ಬಸ್ ಪಾಸ್ ನೀಡಲಾಗುತ್ತಿದೆ. ಇತ್ತೀಚೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕಾದರೆ ವಿದ್ಯಾರ್ಥಿಗಳು ಶೇ.25ರಷ್ಟು ಹಣ ತುಂಬಬೇಕು. ಉಳಿದ 75ರಷ್ಟು ಹಣವನ್ನು ಸರ್ಕಾರ ಭರಿಸಲಿದೆ ಎಂದು ಹೇಳಿದ್ದರು.
ಸಾರಿಗೆ ಸಂಸ್ಥೆ ನಷ್ಟದಲ್ಲಿರುವ ಕಾರಣ ಉಚಿತವಾಗಿ ಬಸ್ ಪಾಸ್ ನೀಡಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಸಂಸ್ಥೆಯು 500 ಕೋಟಿ ನಷ್ಟದಲ್ಲಿದೆ. ಈಗ ಉಚಿತವಾಗಿ ಬಸ್ ಪಾಸ್ ನೀಡಿದರೆ ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತದೆ. ಹೀಗಾಗಿ ಸರ್ಕಾರ ಶೇ.75ರಷ್ಟು ಹಣ ತುಂಬಲು ಸಿದ್ಧವಿದೆ. ಉಳಿದಿದ್ದನ್ನು ವಿದ್ಯಾರ್ಥಿಗಳು ನೀಡಬೇಕೆಂದು ಸ್ಪಷ್ಟಪಡಿಸಿದ್ದರು.
ಸರ್ಕಾರದ ಈ ಕ್ರಮಕ್ಕೆ ವಿದ್ಯಾರ್ಥಿಗಳು ಹಾಗೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ನೀಡಿದಂತೆ ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡಬೇಕೆಂಬುದು ಹಲವರ ಒತ್ತಾಯ.
ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ನೀಡಿರುವಂತೆ ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗೂ ಬಸ್ ಪಾಸ್ ನೀಡಬೇಕು. ಈಗಾಗಲೇ ಶಾಲಾ ಕಾಲೇಜುಗಳು ಆರಂಭವಾಗಿ ಎರಡು ತಿಂಗಳಾದರೂ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಸಿಗದ ಕಾರಣ ಪರದಾಡುವಂತಾಗಿದೆ.
ಈ ಬಗ್ಗೆ ನಾವು ಸರ್ಕಾರದ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗದ ಕಾರಣ ಅನಿವಾರ್ಯವಾಗಿ ಇದೇ 21ರಂದು ರಾಜ್ಯಾದ್ಯಂತ ಶಾಲಾಕಾಲೇಜುಗಳನ್ನು ಬಂದ್ ಮಾಡುವುದಾಗಿ ಎಬಿವಿಪಿ ಮುಖಂಡರು ಹೇಳಿದ್ದಾರೆ.
ಕಳೆದ ಒಂದು ವಾರದಿಂದ ನಾವು ಪ್ರತಿಭಟನೆ ನಡೆಸದಿದ್ದರೂ ಸರ್ಕಾರ ನಮ್ಮ ಹೋರಾಟಕ್ಕೆ ಬೆಲೆ ಕೊಟ್ಟಿಲ್ಲ. ರಾಜ್ಯದ ನಾನಾ ಕಡೆ ವಿದ್ಯಾರ್ಥಿಗಳು ಬಸ್ ಪಾಸ್‍ಗಾಗಿ ಶಾಲಾ ಕಾಲೇಜುಗಳನ್ನು ಬಿಟ್ಟು ಪಾಸ್ ಪಡೆಯಬೇಕಾದ ಪರಿಸ್ಥಿತಿ ಇದೆ.
ಹೀಗಾಗಿ ಸ್ವಯಂಪ್ರೇರಿತರಾಗಿ ಬಂದ್‍ಗೆ ಕರೆ ನೀಡಿದ್ದೇವೆ. ನಮ್ಮ ಈ ಹೋರಾಟಕ್ಕೆ ಎಲ್ಲ ಸಂಘಟನೆಗಳು ಬೆಂಬಲ ನೀಡಬೇಕೆಂದು ಎಬಿವಿಪಿ ಮುಖಂಡರು ಮನವಿ ಮಾಡಿದ್ದಾರೆ.
ಅಂದು ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಗುವುದು. ಯಾವುದೇ ರೀತಿಯ ಅಹಿತಕರ ಘಟನೆ ಇಲ್ಲವೇ ಹಿಂಸಾಚಾರ ನಡೆಯಲು ಅವಕಾಶವಿರುವುದಿಲ್ಲ. ಒಂದು ವೇಳೆ ಯಾರಾದರೂ ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸಿದರೆ ಅವರ ವಿರುದ್ಧ ಪೆÇಲೀಸರಿಗೆ ಮಾಹಿತಿ ನೀಡುವುದಾಗಿ ಸಂಘಟನೆ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ