ಅಧಿವೇಶನದಲ್ಲಿ ಕಡ್ಡಾಯ ಹಾಜರಿಗೆ ಶಾಸಕರಿಗೆ ವಿಪ್ ಜಾರಿ

 

ಬೆಂಗಳೂರು, ಜು.12- ಪ್ರಸಕ್ತ ಸಾಲಿನ ಆಯವ್ಯಯದ ಮೇಲೆ ನಡೆದ ಚರ್ಚೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ಉತ್ತರ ನೀಡುವ ಹಿನ್ನೆಲೆಯಲ್ಲಿ ಸದನದ ಕಲಾಪ ಆರಂಭವಾದಾಗಿನಿಂದ ಸಭಾಧ್ಯಕ್ಷರು ಕಾರ್ಯಕಲಾಪವನ್ನು ಮುಂದೂಡವವರೆಗೂ ಕಡ್ಡಾಯವಾಗಿ ಹಾಜರಿರುವಂತೆ ಆಡಳಿತ ಮತ್ತು ಪ್ರತಿಪಕ್ಷದ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದೆ.
ಸರ್ಕಾರದ ಮುಖ್ಯ ಸಚೇತಕ ಗಣೇಶ್ ಪ್ರಕಾಶ್ ಹುಕ್ಕೇರಿ ಅವರು ಆಡಳಿತ ಪಕ್ಷದ ಎಲ್ಲಾ ಶಾಸಕರಿಗೆ ಇಂದು ಸದನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ವಿಪ್ ಜಾರಿ ಮಾಡಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೂ ವಿಪ್ ಜಾರಿ ಮಾಡಲಾಗಿದ್ದು, ಸದನದಲ್ಲಿ ವಿತ್ತೀಯ ವಿಧೇಯಕ, ಇತರೆ ಇಲಾಖೆಗಳ ವಿಧೇಯಕಗಳು ಹಾಗೂ 2018-19ನೇ ಸಾಲಿನ ಆಯವ್ಯಯ ಅನುಮೋದನೆಗೊಳ್ಳಬೇಕಾಗಿರುವುದರಿಂದ ಆಡಳಿತ ಪಕ್ಷದ ಎಲ್ಲಾ ಸದಸ್ಯರು ಕಡ್ಡಾಯವಾಗಿ ಹಾಜರಿದ್ದು, ಸರ್ಕಾರದ ಪರವಾಗಿ ಮತ ಚಲಾಯಿಸಬೇಕೆಂದು ವಿಪ್ ನೀಡಿದ್ದಾರೆ.
ಇದೇ ರೀತಿ ವಿರೋಧ ಪಕ್ಷವಾದ ಬಿಜೆಪಿ ಕೂಡ ಸದನ ಆರಂಭವಾದಾಗಿನಿಂದ ಮುಂದೂಡುವವರೆಗೂ ಕಡ್ಡಾಯವಾಗಿ ಹಾಜರಿರುವಂತೆ ವಿಪ್ ನೀಡಿದೆ. ವಿರೋಧ ಪಕ್ಷದ ಮುಖ್ಯ ಸಚೇತಕ ವಿ.ಸುನೀಲ್‍ಕುಮಾರ್ ಅವರು ಬಿಜೆಪಿಯ ಎಲ್ಲಾ ಶಾಸಕರಿಗೆ ವಿಪ್ ಜಾರಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ