ನಾಡಿಗೇ ಮಾದರಿ ಹುಳಗೋಳ ಸಹಕಾರ ಸಂಘ. ಗ್ರಾಮಾಭಿವೃದ್ಧಿಯ ಸಹಕಾರೀ ಮಾಡೆಲ್ ಇಲ್ಲಿದೆ !

 

ಉ. ಕ ಜಿಲ್ಲೆಯ ಶಿರಸಿ ತಾಲೂಕ ಭೈರುಂಬೆಯ ಹುಳಗೋಳ ಸೇವಾ ಸಹಕಾರೀ ಸಂಘ ನಮ್ಮ ರಾಜ್ಯಕ್ಕಷ್ಟೇ ಅಲ್ಲ. ದೇಶಕ್ಕೇ ಮಾದರಿ ಆಗಿದೆ. ಮಲೆನಾಡಿನ ಬೆಟ್ಟ ಗುಡ್ಡಗಳ ಮಧ್ಯೆ ಇರುವ ಹಳ್ಳಿಗಳ ರೈತರ ಜೀವನ ಮಟ್ಟ ಸುಧಾರಿಸಲು ಬಹು ವೈವಿಧ್ಯಮಯ ಪ್ರಯೋಗಗಳು, ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದೆ. ಶಿರಸಿ/ಯಲ್ಲಾಪುರ ರಸ್ತೆಯಲ್ಲಿ ಶಿರಸಿಯಿಂದ 11 ಕಿ.ಮೀ ದೂರದಲ್ಲಿ ಈ ಸಹಕಾರ ಸಂಘ ಇದೆ. 99 ವರ್ಷಗಳ ಹಿಂದೆ ಹುಟ್ಟಿರುವ ರೈತರ ಸಹಕಾರಿ ಸಂಘ ಸಹಕಾರೀ ಆಂದೋಲನಕ್ಕೆ ಮೇಲ್ಪಂಕ್ತಿ ಆಗಿದೆ. ಭೈರುಂಬೆ ಸುತ್ತಲಿನ 2 ಪಂಚಾಯತ ವ್ಯಾಪ್ತಿಯ ಅಗಸಾಲ ಬೊಮ್ಮನಳ್ಳಿ, ತಾರಗೋಡ, ಬೆಳಲೆ, ನಡಗೋಡ, ಗೋಳಿಕೊಪ್ಪ ಮುಂತಾದ 10 ಗ್ರಾಮಗಳ ಸಮಗ್ರ ಗ್ರಾಮವಿಕಾಸಕ್ಕೆ ಸಹಕಾರೀ ಸಂಘ ಕಾರಣವಾಗಿದೆ. ರಾಜಕೀಯದ ಸೋಂಕು ಇಲ್ಲದೇ ದಕ್ಷತೆ, ಸೇವೆಗೆ ಇನ್ನೊಂದು ಹೆಸರು ಭೈರುಂಬೆಯ ಈ ಸೊಸೈಟಿ.

ಎಷ್ಟೆಲ್ಲ ಸೌಲಭ್ಯ :

ಇಲ್ಲಿ ರೈತರ ಕೃಷಿ-ತೋಟಗಾರಿಕಾ ಉತ್ಪನ್ನಗಳಿಗೆ ಮಾರಾಟ ವ್ಯವಸ್ಥೆಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಜೊತೆಗೆ ರೈತನಿಗೆ ಬೇಕಾದ ಎಲ್ಲ ಸಲಕರಣೆ, ಗೊಬ್ಬರ, ಯಂತ್ರಗಳು, ಕಿರಾಣಿ ಸೌಲಭ್ಯ ಕಲ್ಪಿಸಿದೆ. ಇಲ್ಲಿ ಸಹಕಾರೀ ಡೈರಿ ಇದೆ. ಪಶು ಆಹಾರವಿದೆ. ಎಲ್ಲ ರೀತಿಯ ಕೃಷಿ ಸಾಲವಿದೆ. 25 ವರ್ಷಗಳಿಂದ ಇಲ್ಲಿ ಕ್ಯಾಶ್ಲೆಸ್ ವ್ಯವಹಾರ ನಡೆಯುತ್ತಿದೆ ಎಂದರೆ ಆಶ್ಚರ್ಯ ಪಡಬಹುದಾಗಿದೆ. ಅಡಿಕೆ – ಸಾಂಬಾರು ಬೆಳೆಗಳ ಸಂಸ್ಕರಣೆ, ಸಾಂಬಾರು ಗಿಡಗಳು ಇಲ್ಲಿ ಲಭ್ಯ. ವಾಹನ ವ್ಯವಸ್ಥೆ, ಔಷಧಿ ಸಿಂಪಡಿಕೆ ಯಂತ್ರ, ಅಡಿಕೆ ಸುಲಿಯುವ ಯಂತ್ರ ಎಲ್ಲ ಇಲ್ಲಿವೆ. ಷಾಮಿಯಾನವೂ ಇದೆ.

ರೈತರ ತೋಟಗಳಿಗೆ ಭೇಟಿ :

ಸಹಕಾರೀ ಸಂಘದ ಪದಾಧಿಕಾರಿಗಳೂ ಹಳ್ಳಿಗಳಿಗೆ ಭೇಟಿ ನೀಡಿ ತಜ್ಞ ಸಲಹೆ ನೀಡುತ್ತಾರೆ. ಇಲ್ಲಿ ಪ್ರತಿ ರೈತನೂ ಹಣ ಉಳಿತಾಯ ಮಾಡುತ್ತಾನೆ. ಆರೋಗ್ಯ ಸೇವಾ ನಿಧಿ ಸ್ಥಾಪನೆ ಮಾಡಲಾಗಿದೆ.

ರೈತನ ನೆರವಿಗೆ ಸದಾ ಸಿದ್ಧ:

ಇಲ್ಲಿ ರೈತರ ಆತ್ಮಹತ್ಯೆ ಇಲ್ಲ, ಕಾರಣ ಮಧ್ಯಮ ವರ್ಗದ ರೈತರು ಆರ್ಥಿಕವಾಗಿ ಸಶಕ್ತರು. ಯಕ್ಷಗಾನ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಪರಿಸರ ಸಂರಕ್ಷಣೆಯಂಥ ಕಾರ್ಯಗಳಲ್ಲಿ ಜನ ತೊಡಗುವಂತೆ ಸಹಕಾರ ಸಂಘ ಬೆಂಬಲ ನೀಡುತ್ತದೆ. ದೈನಂದಿನ ಬದುಕಿಗೆ ಬೇಕಾದ ಬಟ್ಟೆ ಅಂಗಡಿ ಸಹಕಾರೀ ಸಂಘದಲ್ಲಿದೆ. 5 ಸಾವಿರ ಸಂಖ್ಯೆಯ ರೈತ ಮಹಿಳೆ, ಕೃಷಿ ಕಾರ್ಮಿಕ ಸದಸ್ಯರಿದ್ದಾರೆ. ಭೈರುಂಬೆಯ ಸಹಕಾರ ಸಂಘವನ್ನು ಇವರು ಸದಾ ಕೃತಜ್ಞತೆಯಿಂದ ನೆನೆಯುತ್ತಾರೆ. ರಾಜ್ಯ ಪರರಾಜ್ಯಗಳ ಸಹಕಾರೀ ಕ್ಷೇತ್ರದ ಕಾರ್ಯಕರ್ತರು ಹುಳಗೋಳ ಸಹಕಾರೀ ಸಂಘದ ಮಾದರಿ ನೋಡಲು ಬರುತ್ತಾರೆ. ಈ ಪ್ರದೇಶದ 95% ರೈತರು ಸಹಕಾರೀ ಸಂಘದಲ್ಲಿದ್ದಾರೆ.

ದಕ್ಷ ಆಡಳಿತ ಮಂಡಳಿ:

ಸಹಕಾರೀ ಕ್ಷೇತ್ರದ ಹಿರಿಯ ಗಣ್ಯ ಶ್ರೀ ಗಜಾನನ. ಎಂ. ಹೆಗಡೆ ಹುಳಗೋಳ ಅವರು ಕಳೆದ 60 ವರ್ಷಗಳಿಂದ ಹುಳಗೋಳ ಸಂಘದ ಮುನ್ನಡೆಗೆ , ಈ ಮೂಲಕ ರೈತರ ಏಳ್ಗೆಗೆ ಕಾರಣರಾಗಿದ್ದಾರೆ. ಆಡಳಿತ ನಡೆಸುವ ಮಂಡಳಿ ಒಂದು ಉತ್ತಮ ತಂಡವಾಗಿ ಸದಾ ಕ್ರಿಯಾಶೀಲವಾಗಿ ಇರುತ್ತದೆ. ಸಿಬ್ಬಂಧಿಗಳೆಲ್ಲರೂ ಇಲ್ಲಿಯ ಹಳ್ಳಿಯವರೇ ಆಗಿದ್ದಾರೆ. ಉ.ಕ ಜಿಲ್ಲೆಯಲ್ಲಿ ಮೊದಲ ಹಾಲಿನ ಡೈರಿ ಭೈರುಂಬೆಯಲ್ಲಿ 70 ರ ದಶಕದಲ್ಲಿ ಸ್ಥಾಪನೆ ಆಗಿದೆ. ಇಲ್ಲಿನ ರೈತರು ಮಲೆನಾಡಿನ ಇತರ ಪ್ರದೇಶಗಳಿಗಿಂತ 50 ವರ್ಷ ಮುಂದೆ ಇದ್ದಾರೆ ಎಂದು ನಾಡಿನ ಸಹಕಾರೀ ಕಾರ್ಯಕರ್ತರು ಉದ್ಗಾರ ತೆಗೆಯುತ್ತಾರೆ.

ಅಂಕಿ ಸಂಖ್ಯೆ:

ಈ ಸಹಕಾರ ಸಂಘದಲ್ಲಿ 34 ಕೋಟಿ ರೂ. ಠೇವು (ಡಿಪಾಸಿಟ್) ರೈತರದ್ದಿದೆ. ಮಲೆನಾಡಿನ ಬಡರೈತರು ಈಗ ಸಮೃದ್ಧಿ ಕಂಡಿದ್ದಾರೆ. ಇಡೀ ರಾಜ್ಯ ಸಾಲಮನ್ನಾ ಬಗ್ಗೆ ಚರ್ಚೆ ಮಾಡುತ್ತಿದೆ. ಆದರೆ ಇಲ್ಲಿ 99% ರೈತರು ಸಾಲ ಮರುಪಾವತಿ ಮಾಡಿದ್ದಾರೆ ಅಷ್ಟೆ. 10 ಹಳ್ಳಿಗಳ ರೈತರ ಆದಾಯ 20 ಕೋಟಿ ಮೀರಿದೆ!! ಹಳ್ಳಿಯ ಸಹಕಾರ ಸಂಘದ ಒಟ್ಟೂ ಶೇರು 50 ಲಕ್ಷ ರೂ. ಇಲ್ಲಿ ಕಟಬಾಕಿ ಇಲ್ಲ. ಸಾಲತುಂಬದೇ ಇರುವ ಪ್ರಕರಣಗಳಿಗೆ ಕಟುಬಾಕಿ ಎಂಬ ಹೆಸರಿದೆ. ಇಲ್ಲಿ 1% ಕಟಬಾಕಿ ಪ್ರಕರಣ ಇದೆ!

ಏನೆಲ್ಲ ಸೇವೆ ಇದೆ :

ಇಲ್ಲಿ ವಿಮಾ ಸೇವೆ ಇದೆ. ಪಂಚಾಯತ ಕರ ಕಟ್ಟುವ ವ್ಯವಸ್ಥೆ , ಫೋನ್ ಬಿಲ್, ವಿದ್ಯುತ್ಬಿಲ್, ತುಂಬಲು ವ್ಯವಸ್ಥೆ ಇದೆ. ಇಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಧುಶ್ರೀ ಕ್ಯಾಶ್ ಸರ್ಟಿಫಿಕೇಟ್ ಇದೆ. ಸಂಕಷ್ಟ ಪರಿಹಾರ ನಿಧಿ ಇದೆ. ವೈಜ್ಞಾನಿಕವಾದ ಜಲಸಂವರ್ಧನಾ ಯೋಜನೆಯನ್ನು ಹಳ್ಳಿಗಳಲ್ಲಿ ರೂಪಿಸಲು ಪ್ರಯತ್ನ ಆರಂಭವಾಗಿದೆ. ಬೆಟ್ಟ ಅಭಿವೃದ್ಧಿ ಯೋಜನೆ ನಡೆದಿದೆ. ಸಹಕಾರೀ ಕೇತ್ರದ 16 ಪ್ರಶಸ್ತಿಗಳನ್ನು ಭೈರುಂಬೆಯ ಸಹಕಾರ ಸಂಘ ಪಡೆದಿದೆ. ಈ ಸಂಘ ಈವರೆಗೆ 5 ಶಾಖೆಗಳನ್ನು ಹೊಂದಿದೆ. ಅಮುಲ್ ಆನಂದ್ ಮಾದರಿ ಬಗ್ಗೆ ದೇಶದಲ್ಲಿ ಕೇಳಿದ್ದೇವೆ. 10 ಗ್ರಾಮಗಳ ಆರ್ಥಿಕ , ಸಾಮಾಜಿಕ, ಶೈಕ್ಷಣಿಕ ವಿಕಾಸಕ್ಕೆ ಕಾರಣವಾದ ಮಲೆನಾಡಿನ ಹಳ್ಳಿಯ ಸಹಕಾರೀ ಮಾಡೆಲ್ ಕರ್ನಾಟಕದಲ್ಲಿದೆ ಎನ್ನುವುದು ಹಲವರಿಗೆ ಗೊತ್ತಿಲ್ಲ. ಇಲ್ಲಿ ರೈತರು ಫೋನ್ ಮಾಡಿದರೆ ಸೊಸೈಟಿ ವಾಹನ ಬರುತ್ತದೆ. ರೈತರ ಉತ್ಪನ್ನವನ್ನು ತಾಲೂಕಾ ಕೃಷಿ ಮಾರುಕಟ್ಟೆಯ ಮಾರಾಟ ಸಹಕಾರ ಸಂಘಕ್ಕೆ ಒಯ್ದು ಮಾರಾಟ ಅಥವಾ ಶಿಲ್ಕು ಮಾಡುತ್ತಾರೆ. ಎಲ್ಲ ಆನ್ ಲೈನ್’ ಇಲ್ಲಿ .

ಹಳ್ಳಿಯಲ್ಲಿ ಸಹಕಾರೀ ಸಂಘದಿಂದಲೇ ಬ್ಯಾಂಕ್ ಸೇವೆ:

ಹೌದು, ಭೈರುಂಬೆಯಲ್ಲಿ ಬ್ಯಾಂಕ್ ಇರಲೇ ಇಲ್ಲ. ಸೊಸೈಟಿ ಮೂಲಕ ಆರ್ಥಿಕ ವ್ಯವಹಾರ ನಡೆಯುತ್ತದೆ. (ಈಗ 2 ವರ್ಷದಿಂದ ಗ್ರಾಮೀಣ ಬ್ಯಾಂಕ್ ಇದೆ) ಅಡಿಕೆ, ಮೆಣಸು, ಯಾಲಕ್ಕಿ , ಬಾಳೆಕಾಯಿ, ಕೊಕ್ಕೊ, ತೆಂಗು ಈ ಎಲ್ಲ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹವಿದೆ. ಯೋಜನೆ ಇದೆ. ಆರ್ಥಿಕ ಸ್ವಾವಲಂಬನೆ ಇಲ್ಲಿದೆ. ಸಂಸ್ಕರಣೆ- ಮಾರಾಟ, ತರಬೇತಿ, ಎಲ್ಲವೂ ಲಭ್ಯ. ಭೈರುಂಬೆಯ ಶಾರದಾಂಬಾ ಶಿಕ್ಷಣ ಸಂಸ್ಥೆ ಈ ಸಹಕಾರ ಸಂಘದ ಸಹೋದರ ಸಂಸ್ಥೆ ಇದ್ದಂತೆ ಇದೆ. ಶಿಕ್ಷಣ ಸಂಸ್ಥೆಗೂ ಸಹಕಾರ ಸಂಘ ಎಲ್ಲ ಬೆಂಬಲ ನೀಡಿದೆ. ಭೈರುಂಬೆ ಸುತ್ತಲಿನ ಹಳ್ಳಿಗಳಿಗೆ ಮಲೆನಾಡಿನ ಇತರ ಹಳ್ಳಿಗಳ ಜನ ಅಮೇರಿಕಾ ಎಂದು ಕರೆಯುವ ರೂಢಿ ಇದೆ. ಕಾರಣ ಇಲ್ಲಿನ ಸಮೃದ್ಧಿ, ಪ್ರಜ್ಞಾವಂತ ರೈತರು ಹಾಗೂ ಸಹಕಾರಿ ಸಂಘ .

ವಿಶೇಷಗಳು:

ಸಹಕಾರಿ ಸಂಘದ ರೈತ ಸದಸ್ಯರು ನಿಧನರಾದರೆ ಸಂಘ ತಕ್ಷಣ 10000 ರೂ. ಮೊತ್ತವನ್ನು ರೈತನ ಮನೆಗೆ ನೀಡುತ್ತದೆ. ರೈತ ಬರಗಾಲ, ಅನಾವೃಷ್ಠಿಗೆ ಒಳಗಾಗಿ ಬೆಳೆನಷ್ಟ, ಅಪಾರ ಹಾನಿಗೆ ಒಳಗಾದರೆ ಅದಕ್ಕೂ ನೆರವಾಗುವ , ಸಂಕಷ್ಟ ನಿಧಿ ಸ್ಥಾಪನೆ ಮಾಡಿದೆ. ಹಳ್ಳಿಯಲ್ಲೇ ಸಹಕಾರ ಸಂಘದ ಕಟ್ಟಡಗಳು, ವ್ಯಾಪಾರ ಮಳಿಗೆ, ಸಂಸ್ಕರಣಾ ಘಟಕ ಯಂತ್ರ ನರ್ಸರಿ, ವಾಹನ ಸೌಲಭ್ಯ, ಕಿರಾಣಿ, ಕೃಷಿ, ಬಟ್ಟೆ ಅಂಗಡಿ ಎಲ್ಲ ಲಭ್ಯ.

ಶತಮಾನೋತ್ಸವ ವರ್ಷಪೂರ್ತಿ ನಡೆಯಲಿದೆ:

ಇದೀಗ 100ನೇ ವರ್ಷಕ್ಕೆ ಹುಳಗೋಳ ಸೊಸೈಟಿ ಪಾದಾರ್ಪಣೆ ಮಾಡುತ್ತಿದೆ. ಜುಲೈ 9 ರಂದು ಶಿರಸಿ ತಾಲೂಕ ಭೈರುಂಬೆಯಲ್ಲಿ ಹುಳಗೋಳ ಸಹಕಾರ ಸಂಘದ ಶತಮಾನೋತ್ಸವ ಸಮಾರಂಭ ಏಪರ್ಾಡಾಗಿದೆ. ಒಂದು ವರ್ಷ ಪೂರ್ತಿ ರೈತರವಿಕಾಸಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಜುಲೈನಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜಮೆಂಟ್ನ ಪ್ರೊ|| ಶ್ರೀ ರಾಮ್ ಅವರನ್ನು ಆಹ್ವಾನಿಸಿ ದೇಶದಲ್ಲಿ ನಡೆದಿರುವ ಸಹಕಾರೀ ಪ್ರಯೋಗಗಳ ಪರಿಚಯ ಮಾಡಿಕೊಡುವ ಕಾರ್ಯಕ್ರಮ ಇದೆ. ಸಾಂಬಾರು ಬೆಳೆ ತಜ್ಞ ಡಾ|| ವೇಣುಗೋಪಾಲ ಅವರ ಜೊತೆ ಸಂವಾದ ಅಗಸ್ಟ್ ತಿಂಗಳಲ್ಲಿ ಇದೆ. ನಂತರದ ತಿಂಗಳಲ್ಲಿ ಮಹಿಳೆಯ ಆರ್ಥಿಕ ಚಟುವಟಿಕೆ , ಹಿತ್ತಲು ಅಭಿವೃದ್ಧಿ ಬಗ್ಗೆ ಕಾರ್ಯಕ್ರಮ ಇದೆ. ಮಲೆನಾಡಿನ ಸಹಕಾರ ಸಂಘಗಳ ಜೊತೆ ಅನುಭವ ವಿನಿಮಯ ಹಾಗೂ ಸಮಸ್ಯೆಗಳು ಪರಿಹಾರ ಸಮಾವೇಶ ನವೆಂಬರನದಲ್ಲಿದೆ. ಸಂಘದ ನೂತನ ಸಭಾಭವನ ಉದ್ಘಾಟನೆ, ಹಾಲು ಉತ್ಪಾದಕರ ಸಮಾವೇಶ, ಬೆಟ್ಟ ಅಭಿವೃದ್ಧಿ, ಜಲಸಂರಕ್ಷಣೆ ಗೋಷ್ಠಿಗಳು, ಆರೋಗ್ಯ ಶಿಬಿರಗಳು, ಮಣ್ಣಿನ ಪರೀಕ್ಷೆ ಶಿಬಿರ, ಸಹಕಾರಿ ಸಂಘದ ಭವಿಷ್ಯ ಚಿಂತನೆ. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಗ್ರಾಮ ವಿಕಾಸದ ಮಾದರಿ:

ವಿಕೇಂದ್ರೀಕರಣ, ಗ್ರಾಮ ಸ್ವರಾಜ್ಯ, ಸ್ವಾವಲಂಬನೆ, ಸುಸ್ಥಿರ ಕೃಷಿ, ಸೋಲಾರ್, ಗೋಬರ್ ಗ್ಯಾಸ್, ಕಿರುನೀರಾವರಿ, ನರ್ಸರಿ, ಹಳ್ಳಿಯಲ್ಲೇ ಸಹಕಾರೀ ಸಾಲ, ಉಳಿತಾಯ, ಮಾದರಿ ಕೃಷಿಕರು, ವಸತಿ ಶಾಲೆ ಇವೆಲ್ಲವನ್ನೂ ನೋಡಲು ಒಮ್ಮೆ ಶಿರಸಿ ತಾಲೂಕಾ ಭೈರುಂಬೆಗೆ ಬನ್ನಿ.

ಸಂಪರ್ಕ: ಶ್ರೀ ಜಿ. ಎಮ್, ಹೆಗಡೆ, ಮಾತನಳ್ಳಿ, ಸಿ.ಇ.ಓ ಹುಳಗೋಳ ಸಹಕಾರ ಸಂಘ,

ಮೊ: 9480526801

500 Internal Server Error

Internal Server Error

The server encountered an internal error or misconfiguration and was unable to complete your request.

Please contact the server administrator, webmaster@push.vartamitra.com and inform them of the time the error occurred, and anything you might have done that may have caused the error.

More information about this error may be available in the server error log.

Additionally, a 500 Internal Server Error error was encountered while trying to use an ErrorDocument to handle the request.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ