ಲೋಕಸಭೆ ಚುನಾವಣೆಯನ್ನು ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಎದುರಿಸಲಿವೆ – ಸಚಿವ ಶಿವಾನಂದ ಪಾಟೀಲ್

ಬಾಗಲಕೋಟೆ,ಜು.8- ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇರುವುದರಿಂದ ಮುಂದಿನ ಲೋಕಸಭೆ ಚುನಾವಣೆಯನ್ನು ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಎದುರಿಸಲಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಸೀಟು ಹೊಂದಾಣಿಕೆಯನ್ನು ಉಭಯ ಪಕ್ಷಗಳ ಹಿರಿಯರು ನಿರ್ಧರಿಸಲಿದ್ದಾರೆ. ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ತಮಗೆ ನೋವಿದ್ದು , ಕಾಲ ಮಿತಿಯಲ್ಲಿ ನೀರಾವರಿ ಯೋಜನೆಗಳು ಮುಗಿದಿದ್ದರೆ ರಾಜ್ಯಕ್ಕೆ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದರು. ಈ ಸ್ಥಿತಿಗೆ ಬಿಜೆಪಿ,ಕಾಂಗ್ರೆಸ್, ಜೆಡಿಎಸ್ ಕಾರಣ ಎಂದು ಹೇಳುವುದಿಲ್ಲ. ನೀರಾವರಿಗೆ ಯಾವ ಸಂದರ್ಭದಲ್ಲಿ ಆದ್ಯತೆ ಕೊಡಬೇಕಿತ್ತೊ ಆ ಸಂದರ್ಭದಲ್ಲಿ ಕೊಡದೇ ಇರುವುದರಿಂದ ಇಂತಹ ಸ್ಥಿತಿ ಒದಗಿದೆ. ನೀರಾವರಿ ವಿಚಾರದಲ್ಲಿ ಮುಖ್ಯಮಂತ್ರಿಗಳು ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದರು.
ಸಮ್ಮಿಶ್ರ ಸರ್ಕಾರದ ಅಸಮಾಧಾನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಯಾರೋ ಒಬ್ಬರು ಹೇಳಿದ್ದನ್ನು 20 ಮಂದಿಗೆ ಹೋಲಿಸುವುದು ಸರಿಯಲ್ಲ. ಬಿಜೆಪಿ ಜೊತೆ ಹೊಂದಾಣಿಕೆ ಆಗುವುದಿಲ್ಲ ಎಂಬ ಕಾರಣಕ್ಕೆ ಜೆಡಿಎಸ್ ಕಾಂಗ್ರೆಸ್ ಜೊತೆ ಸೇರಿದ್ದರಿಂದ ಸಮ್ಮಿಶ್ರ ಸರ್ಕಾರ ರಚನೆಯಾಯಿತು ಎಂದರು.
ಜ್ಯೋತಿಷ್ಯದ ಬಗ್ಗೆ ನಂಬಿಕೆ ಇಲ್ಲದಿರುವುದರಿಂದ ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳು ಮತ್ತೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆ ಎಂದು ಭವಿಷ್ಯ ನುಡಿದಿರುವ ಪ್ರತಿಕ್ರಿಯಿಸುವುದಿಲ್ಲ. ಕೆಲವು ಶ್ರೀಗಳು ಬಿಎಸ್‍ವೈ ಮುಖ್ಯಮಂತ್ರಿಯಾಗುತ್ತಾರೆ ಎಂದು ನುಡಿದಿದ್ದಾರೆ. ಇನ್ನು ಕೆಲವರು ಮುಖ್ಯಮಂತ್ರಿಯಾಗುವುದಿಲ್ಲ ಎಂದಿದ್ದಾರೆ. ಇಂತಹ ವಿಚಾರಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಅವರು ಮುಖ್ಯಮಂತ್ರಿಯಾಗುವುದಿದ್ದರೆ ಎಂದೋ ಆಗುತ್ತಿದ್ದರು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ