192/ಎ ಕಾಯ್ದೆ ತಿದ್ದುಪಡಿ ರದ್ದು ಪಡಿಸಲು ಶೃಂಗೇರಿ ಶಾಸಕ ರಾಜೇಗೌಡ ಆಗ್ರಹ

 

ಬೆಂಗಳೂರು, ಜು.5- ಮಲೆನಾಡು ಭಾಗದ ರೈತರಿಗೆ ಕಂಟಕಪ್ರಾಯವಾಗಿರುವ 192/ಎ ಕಾಯ್ದೆ ತಿದ್ದುಪಡಿ ಕ್ರಮವನ್ನು ರದ್ದುಪಡಿಸಬೇಕೆಂದು ಶೃಂಗೇರಿ ಶಾಸಕ ರಾಜೇಗೌಡ ಆಗ್ರಹಿಸಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಬಡವರಿಗೆ, ವಸತಿ ಹೀನರಿಗೆ ಆಶ್ರಯ ಒದಗಿಸಲು ಸರ್ಕಾರ ಹಲವು ವಸತಿ ಯೋಜನೆಗಳನ್ನು ಜಾರಿಗೆ ತಂದಿದೆ. ಜನರಿಗೆ ನಿವೇಶನ ನೀಡಲು ಮಲೆನಾಡು ಭಾಗದಲ್ಲಿ ಭೂಮಿಯ ಲಭ್ಯತೆ ಕಷ್ಟವಾಗಿರುವ ಕಾರಣ 192/ಎ ಕಾಯ್ದೆ ತಿದ್ದುಪಡಿ ತಂದಿರುವುದು ಯೋಜನೆ ಜಾರಿಗೆ ತರಲು ದೊಡ್ಡ ಅಡಚಣೆಯಾಗಿದೆ. ಕೂಡಲೇ ಈ ಯೋಜನೆಯನ್ನು ರದ್ದುಗೊಳಿಸಬೇಕೆಂದು ಅವರು ಆಗ್ರಹಿಸಿದರು.
ಸರ್ಕಾರ ಈ ಕಾಯ್ದೆಗೆ ತಿದ್ದುಪಡಿ ತಂದು ಬಡವರಿಗೆ ಸೂರು ಒದಗಿಸಲು ಅನುವು ಮಾಡಿಕೊಡಬೇಕು. ಮಲೆನಾಡಿನಲ್ಲಿ ಫಾರಂ-50, 53, 94ಸಿ, 94ಸಿಸಿ ಮತ್ತು ಕಾಫಿ ಬೆಳೆಗಾರರಿಗೆ 10 ಎಕರೆ ಒಳಗೆ ಲೀಜ್ ಮೇಲೆ ನೀಡಲು ಉದ್ದೇಶಿಸಿರುವ ರೈತಪರ, ಬಡವರ ಪರ ಯೋಜನೆಗೆ ಒಂದಿಂಚೂ ಸ್ಥಳ ಇಲ್ಲವಾಗಿದೆ.
4-1 ನೋಟಿಫಿಕೇಷನ್, ಡೀಮ್ಡ್ ಫಾರೆಸ್ಟ್, ಕಿರು ಅರಣ್ಯ ಎಂದು ಎಲ್ಲ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಯ ಭೂಮಿ ಎಂದು ಹೇಳಲಾಗಿರುವುದರಿಂದ ಯಾವುದೇ ಜನಪರ ಯೋಜನೆ ಜಾರಿಗೆ ಅವಕಾಶ ಸಿಗುತ್ತಿಲ್ಲ. ಈ ಬಗ್ಗೆ ಸಮಗ್ರವಾಗಿ ಚರ್ಚೆ ಮಾಡಲು ಅಧಿವೇಶನದಲ್ಲಿ ಒಂದು ದಿನ ಅವಕಾಶ ನೀಡಬೇಕೆಂದು ಅವರು ಒತ್ತಾಯಿಸಿದರು.
ತಮ್ಮ ಚೊಚ್ಚಲ ಭಾಷಣದಲ್ಲಿಯೇ ರಾಜೇಗೌಡರು 192ಎ ಕಾಯ್ದೆ ಬಗ್ಗೆ ಎಳೆ ಎಳೆಯಾಗಿ ಬಿಡಿಸಿಟ್ಟರು. ರಾಜ್ಯಪಾಲರ ಭಾಷಣ ವಿರೋಧಿಸಿ ವಿರೋಧ ಪಕ್ಷಗಳು ಮಾಡಿದ ಟೀಕೆ ಬಗ್ಗೆ ಸಮರ್ಥ ಉತ್ತರ ನೀಡಿದ ರಾಜೇಗೌಡರು, ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಒಳಗೊಂಡಂತೆ ಯಾವುದೇ ಸರ್ಕಾರ ತಮ್ಮ ಚುನಾವಣಾ ಪ್ರಣಾಳಿಕೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿರುವುದಿಲ್ಲ. ಆದರೆ, ಕಳೆದ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ತಾವು ನೀಡಿದ ಚುನಾವಣಾ ಭರವಸೆಯನ್ನು ಬಹುತೇಕ ಈಡೇರಿಸಿದ್ದಾರೆ. ಇದು ಅತ್ಯಂತ ಹೆಮ್ಮೆಯ ವಿಷಯ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ