ಚಿಕ್ಕೋಡಿ ಶಾಸಕ ಗಣೇಶ್ ಬಿ.ಹುಕ್ಕೇರಿ ಸಮ್ಮಿಶ್ರ ಸರ್ಕಾರದ ಮುಖ್ಯ ಸಚೇತಕ

 

ಬೆಂಗಳೂರು, ಜು.4- ಚಿಕ್ಕೋಡಿ ಶಾಸಕ ಗಣೇಶ್ ಬಿ.ಹುಕ್ಕೇರಿ ಅವರನ್ನು ಸಮ್ಮಿಶ್ರ ಸರ್ಕಾರದ ಮುಖ್ಯ ಸಚೇತಕರನ್ನಾಗಿ ನೇಮಿಸಲಾಗಿದೆ.
ವಿಧಾನಸಭೆಯಲ್ಲಿಂದು ಸಭಾಧ್ಯಕ್ಷ ರಮೇಶ್‍ಕುಮಾರ್ ಅವರು ನೂತನ ಸಚೇತಕರ ನೇಮಕವನ್ನು ಪ್ರಕಟಿಸಿದರು.
ಸಂಸದ ಪ್ರಕಾಶ್ ಹುಕ್ಕೇರಿ ಅವರ ಪುತ್ರರಾಗಿರುವ ಗಣೇಶ್ ಹುಕ್ಕೇರಿ ಅವರು ಎರಡನೆ ಬಾರಿಗೆ ಶಾಸಕರಾಗಿದ್ದಾರೆ. ಎಂಬಿಎ ಪದವೀಧರರಾಗಿರುವ ಗಣೇಶ್ ಅವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಅವರನ್ನು ಮುಖ್ಯ ಸಚೇತಕರನ್ನಾಗಿ ನೇಮಿಸುವ ಮೂಲಕ ಸಮಾಧಾನಪಡಿಸಲಾಗಿದೆ. ಈ ಮೂಲಕ ಸರ್ಕಾರಿ ಮುಖ್ಯ ಸಚೇತಕರ ಹುದ್ದೆ ಎರಡನೆ ಬಾರಿಯೂ ಬೆಳಗಾವಿ ಪಾಲಾಗಿದೆ.
ಈ ಹಿಂದೆ ಶಾಸಕರಾಗಿದ್ದ ಪಿ.ಎಂ.ಅಶೋಕ್ ಅವರು ಐದು ವರ್ಷಕಾಲ ಸರ್ಕಾರಿ ಮುಖ್ಯ ಸಚೇತಕರಾಗಿ ಕೆಲಸ ಮಾಡಿದ್ದರು.
ಈ ಬಾರಿ ಸಮ್ಮಿಶ್ರ ಸರ್ಕಾರದಲ್ಲಿ ಎರಡೂ ಪಕ್ಷಗಳಿಗೂ ಒಬ್ಬರನ್ನೇ ಸಚೇತಕರಾಗಿ ನೇಮಿಸಲು ನಿರ್ಧರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಗಣೇಶ್ ಹುಕ್ಕೇರಿ ಅವರ ನೇಮಕ ಗಮನ ಸೆಳೆದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ