
ಲಂಡನ್: ಟೆನಿಸ್ ಮಾಂತ್ರಿಕ ಸ್ವಿಜರ್ಲೆಂಡ್ ನ ರೋಜರ್ ಫೆಡರರ್ 20ನೇ ವಿಂಬಲ್ಡನ್ ಟೂರ್ನಿಯಲ್ಲಿ ಕಣಕ್ಕಳಿದಿದ್ದು ಮೊದಲ ಸುತ್ತಿನ ಪಂದ್ಯದಲ್ಲಿ ಅಪರೂಪದ ಘಟನೆಯಿಂದ ಸುದ್ದಿಯಲ್ಲಿದ್ದಾರೆ.
ಲಂಡನ್ ನಲ್ಲಿ ನಡೆಯುತ್ತಿರುವ ವಿಂಬಲ್ಡನ್ ಟೂರ್ನಿಯಲ್ಲಿ ಸೆರ್ಬಿಯದ ದುಸಾನ್ ಲಾಜೊವಿಕ್ ವಿರುದ್ಧ 6-1, 6-3, 6-4 ಅಂತರದ ಗೆಲುವು ಸಾಧಿಸಿದ್ದಾರೆ. ಆದರೆ ಇದಕ್ಕಿಂತಲೂ ಫೆಡರರ್ ನ ಮತ್ತೊಂದು ಸುದ್ದಿ ಎಲ್ಲರ ಗಮನ ಸೆಳೆಯುತ್ತಿದ್ದು, ಮನಗಳನ್ನು ಗೆಲ್ಲುತ್ತಿದೆ. ಅದೇನೆಂದರೆ ರೋಜರ್ ಫೆಡರರ್ ತಮ್ಮ ಭಾರತೀಯ ಅಭಿಮಾನಿಗೆ ಎಂದಿಗೂ ನೆನಪಿನಲಿಡುವ ಅಪರೂಪದ ಗಿಫ್ಟ್ ನ್ನು ನೀಡಿದ್ದಾರೆ.
ಪಂದ್ಯ ಮುಕ್ತಾಯಗೊಳ್ಳುತ್ತಿದ್ದಂತೆಯೇ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡುತ್ತಿದ್ದ ವೇಳೆ, ಭಾರತದ ಯುವತಿಯೊಬ್ಬಳು ರೋಜರ್ ಫೆಡರರ್ ನ ಮುಂದೆ ನಿಂತು “ರೋಜರ್ ನಿಮ್ಮ ಹೆಡ್ ಬ್ಯಾಂಡ್ ನನಗೆ ಸಿಗಬಹುದೇ, ಪ್ಲೀಸ್….?” ಎಂಬ ಬರಹವಿದ್ದ ಬ್ಯಾನರ್ ನ್ನು ಪ್ರದರ್ಶಿಸಿದ್ದಾರೆ.
ಅಭಿಮಾನಿಯ ಬೇಡಿಕೆಯನ್ನು ನಿರಾಕರಿಸದ ರೋಜರ್ ಫೆಡರರ್ ತಕ್ಷಣವೇ ಹೆಡ್ ಬ್ಯಾಂಡ್ ನ್ನು ಯುವತಿಯ ಕೈಗಿತ್ತಿದ್ದಾರೆ. ರೋಜರ್ ಫೆಡರರ್ ತಮ್ಮ ಹೆಡ್ ಬ್ಯಾಂಡ್ ನ್ನು ತಮ್ಮ ಅಭಿಮಾನಿಗೆ ನೀಡುತ್ತಿರುವ ವಿಡಿಯೊವನ್ನು ವಿಂಬಲ್ಡನ್ ನ ಅಧಿಕೃತ ಯುಟ್ಯೂಪ್ ಖಾತೆಯಲ್ಲಿ ಅಪ್ ಲೋಡ್ ಮಾಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಈ ವಿಡಿಯೋ ವೈರಲ್ ಆಗಿ ಎಲ್ಲರ ಮನಗೆಲ್ಲುತ್ತಿದೆ.