2017-18ರಲ್ಲಿ ರಾಜ್ಯದ ಜಿಡಿಪಿ ಶೇ.8.5ಕ್ಕೆ ಏರಿಕೆ

 

ಬೆಂಗಳೂರು, ಜು.3-ಹಿಂದಿನ ಸರ್ಕಾರದಲ್ಲಿ ಬೊಕ್ಕಸಕ್ಕೆ ಹೊರೆಯಾಗದಂತೆ ಎಲ್ಲಾ ಯೋಜನೆಗಳನ್ನು ನಿಭಾಯಿಸಿ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳಲಾಗಿದೆ. ತಲಾ ಆದಾಯ ಮತ್ತು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ ಎಂದು ಆಡಳಿತ ಪಕ್ಷದ ಶಾಸಕ ಈಶ್ವರ್ ಖಂಡ್ರೆ ಹೇಳಿದರು.
ವಿಧಾನಸಭೆಯಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಮಾತನಾಡಿದ ಅವರು, 2016-17ರಲ್ಲಿ ರಾಜ್ಯದ ಜಿಡಿಪಿ ಶೇ.7.5ರಷ್ಟಿತ್ತು. 2017-18ರಲ್ಲಿ ಶೇ.8.5 ರಷ್ಟಾಗಿದೆ. ರಾಷ್ಟ್ರೀಯ ಸರಾಸರಿಗಿಂತ ರಾಜ್ಯದ ಆತಂರಿಕ ಉತ್ಪನ್ನದಲ್ಲಿ ಹೆಚ್ಚಳವಾಗಿದೆ. ಇನ್ನು ತಲಾವಾರು ಆದಾಯ ರಾಷ್ಟ್ರೀಯ ಮಟ್ಟದಲ್ಲಿ 59 ರೂ.ಗಳಿದ್ದರೆ, ರಾಜ್ಯದಲ್ಲಿ 125 ರೂ. ಇದೆ. ವಿವಿಧ ಭಾಗ್ಯ ಸರಣಿಯ ಯೋಜನೆಗಳಿಂದ ಸಿದ್ದರಾಮಯ್ಯ ಸರ್ಕಾರ 5 ಕೋಟಿ ಜನರಿಗೆ ಸೌಲಭ್ಯಗಳನ್ನು ಒದಗಿಸಿತ್ತು. ಹಸಿವು ಮುಕ್ತ ರಾಜ್ಯಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಲಾಗಿತ್ತು. ರೈತರ ಆದಾಯವನ್ನು ಹೆಚ್ಚಿಸಲಾಗಿದೆ. 50ಲಕ್ಷ ಉದ್ಯೋಗ ಸೃಷ್ಟಿಸಲಾಗಿದೆ. ಕೌಶಲ್ಯಾಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ತೋಟಗಾರಿಕೆ ಬೆಳೆಗಳನ್ನು ವಿಸ್ತರಿಸಲಾಗಿದೆ. ಇ- ಮಾರುಕಟ್ಟೆ ಮೂಲಕ ರೈತರಿಗೆ ಒಳ್ಳೆಯ ಆದಾಯ ಸಿಗುವಂತೆ ಮಾಡಲಾಗಿದೆ. ವಿದ್ಯಾಸಿರಿ, ಕ್ಷೀರಭಾಗ್ಯ ಯೋಜನೆಗಳು, ಶಾಲೆಯನ್ನು ಸದೃಢಗೊಳಿಸುವ ಕಾರ್ಯಕ್ರಮಗಳು ಉತ್ತಮ ಪರಿಣಾಮ ಬೀರಿವೆ. ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪಿಸುವ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ 1.40ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಿದೆ ಎಂದು ವಿವರಿಸಿದರು.
ಹನಿನೀರಾವರಿ ಯೋಜನೆಯನ್ನು ರಾಜ್ಯಾದ್ಯಂತ ಸಮಗ್ರವಾಗಿ ಜಾರಿಗೊಳಿಸಬೇಕಿದೆ. ರೈತರನ್ನು ಋಣಮುಕ್ತರನ್ನಾಗಿಸಲು ಸಮ್ಮಿಶ್ರ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ