ಅನಗತ್ಯ ಯೋಜನೆಗಳ ವೆಚ್ಚವನ್ನು ಕಡಿತಕ್ಕೆ ಮುಂದಾದ ರಾಜ್ಯ ಸರ್ಕಾರ

 

ಬೆಂಗಳೂರು, ಜು.3-ರೈತರ ಸಾಲ ಮನಾ ಮಾಡಲು ನಿರ್ಧಾರಿಸಿರುವ ರಾಜ್ಯ ಸರ್ಕಾರ ಅನಗತ್ಯ ಯೋಜನೆಗಳ ವೆಚ್ಚವನ್ನು ಕಡಿತ ಮಾಡಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಲು ಮುಂದಾಗಿದ್ದು, ಈವರೆಗೂ 1200 ಕೋಟಿ ಹೆಚ್ಚುವರಿ ಹಣಕಾಸು ಮೂಲವನ್ನು ಗುರುತಿಸಿದೆ.
ರೈತರ ಸಾಲ ಮನ್ನಾ ವಿಷಯವಾಗಿ ಇತ್ತೀಚೆಗೆ ಮಹತ್ವದ ಸಭೆ ನಡೆಸಿದ ಬಳಿಕ ರಾಜ್ಯದ 30 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೂ ಪತ್ರ ಬರೆದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಹೆಚ್ಚುವರಿ ಮತ್ತು ಅನಗತ್ಯ ಅನುದಾನವನ್ನು ಗುರುತಿಸಿ ವರದಿ ನೀಡುವಂತೆ ಸೂಚಿಸಿದ್ದರು.
ಅದರಂತೆ ಶಾಸಕರ ನಿಧಿಯಲ್ಲಿ ಕೈಗೆತ್ತಿಕೊಂಡ ಕಾಮಗಾರಿಗಳ ಪೈಕಿ ಆರಂಭವಾಗದೆ ಇರುವ ಕಾಮಗಾರಿಗಳು, ಆರಂಭವಾಗಿಯೂ ಪೂರ್ಣಗೊಳ್ಳದೆ ನೆನೆಗುದಿಗೆ ಬಿದ್ದ ಯೋಜನೆಗಳು ಮತ್ತು ಮುಂದೆ ತೆಗೆದುಕೊಳ್ಳಬೇಕೆಂದು ನಿರ್ಧರಿಸಿರುವ ಯೋಜನೆಗಳಲ್ಲಿ ತುರ್ತು ಅಲ್ಲದೆ ಇರುವ ಕಾಮಗಾರಿಗಳನ್ನು ಗುರುತಿಸಲಾಗಿದೆ.

ಅದೇ ರೀತಿ ಶಿಕ್ಷಣ, ರಸ್ತೆ, ಕುಡಿಯುವ ನೀರು ಸೇರಿದಂತೆ ವಿವಿಧ ಯೋಜನೆಗಳಲ್ಲಿ ಬಳಕೆಯಾಗದೆ ಇರುವ ಅನುದಾನವನ್ನು ಗುರುತಿಸಲಾಗಿದ್ದು, ಮೊದಲ ಹಂತದಲ್ಲಿ ಇದರ ಪ್ರಮಾಣ ಸುಮಾರು 1200 ಕೋಟಿಗಳು ಎಂದು ಅಂದಾಜಿಸಲಾಗಿದೆ.
ಮೂಲಗಳ ಪ್ರಕಾರ ಸುಮಾರು ಎರಡೂವರೆ ಸಾವಿರ ಕೋಟಿ ಈ ರೀತಿ ಹೆಚ್ಚುವರಿ ಅನುದಾನ ಇರುವುದಾಗಿ ತಿಳಿದುಬಂದಿದೆ. ರಾಜ್ಯಾದ್ಯಂತ ಸಮೃದ್ಧಿಯಾಗಿ ಮಳೆಯಾಗಿದ್ದು, ಬಹುತೇಕ ಕಡೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಿದೆ. ಹಾಗಾಗಿ ಅದಕ್ಕಾಗಿ ಮೀಸಲಿಟ್ಟಿರುವ ಅನುದಾನವನ್ನು ಹೆಚ್ಚುವರಿ ಎಂದು ಗುರುತಿಸಲಾಗಿದೆ.

ಶಾಸಕರ ಅನುದಾನದಲ್ಲಿ ಬಳಕೆ ಮಾಡದೆ ಉಳಿದಿರುವ ಅನುದಾನವನ್ನು ಗುರುತಿಸಿದ್ದು, ಒಂದು ವೇಳೆ ತುರ್ತು ಕಾಮಗಾರಿಗಳಿದ್ದು, ಜರೂರಾಗಿ ತೆಗೆದುಕೊಳ್ಳಬೇಕಾದಂತವುಗಳಿದ್ದರೆ ಕಾಮಗಾರಿಗಳಿದ್ದರೆ ಅವುಗಳನ್ನು ಗುರುತಿಸಿ ಶಾಸಕರ ಪತ್ರ ಪಡೆದು ಆ ಯೋಜನೆಗಳನ್ನು ಕೈಗೆತ್ತಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಜಿಲ್ಲಾಧಿಕಾರಿಗಳ ವೈಯಕ್ತಿಕ ಖಾತೆಯಲ್ಲಿ ಹೆಚ್ಚುವರಿಯಾಗಿ ಕಾಯ್ದಿರಿಸಿರುವ ಅನುದಾನವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅನಗತ್ಯವಾಗಿ ಸರ್ಕಾರದ ವಿವಿಧ ಇಲಾಖೆಗಳ ಅನುದಾನವನ್ನು ಬ್ಯಾಂಕ್‍ನಲ್ಲಿ ಠೇವಣಿಯಿಟ್ಟು ಖಾಸಗಿ ಬ್ಯಾಂಕ್‍ಗಳಿಗೆ ಲಾಭ ಮಾಡಿಕೊಡುವ ಬದಲು ಅದನ್ನು ರೈತರ ಸಾಲ ಮನ್ನಾಕ್ಕೆ ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.
ಈ ಮೂಲಕ ಕುಮಾರಸ್ವಾಮಿ ಸರ್ಕಾರ ನಾನಾ ಮೂಲಗಳಿಂದ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಿ ರೈತರ ಸಾಲ ಮನ್ನಾ ಮಾಡಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಮುಂದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ