ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಳ್ಳುವುದು ಸರ್ಕಾರದ ಪ್ರಮುಖ ಉದ್ದೇಶ: ವಿ.ಆರ್.ವಾಲಾ

 

ಬೆಂಗಳೂರು, ಜು.2-ರಾಜ್ಯದ ರೈತರು ಇಸ್ರೇಲ್ ಮಾದರಿ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗಬೇಕು. ಅನ್ನದಾತನ ಬದುಕು ಹಸನುಗೊಳಿಸಬೇಕು, ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಳ್ಳುವುದನ್ನು ಜಾರಿಗೆ ತರುವುದು ಸರ್ಕಾರದ ಪ್ರಮುಖ ಉದ್ದೇಶ ಎಂದು ರಾಜ್ಯಪಾಲ ವಿ.ಆರ್.ವಾಲಾ ಹೇಳಿದರು.
15ನೇ ವಿಧಾನಸಭೆಯ ಮೊದಲನೆ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ಆರಂಭದಲ್ಲೇ ರೈತರ ಅಭಿವೃದ್ಧಿಯನ್ನು ಪ್ರಸ್ತಾಪಿಸಿದ್ದಾರೆ.
ಅನ್ನದಾತನ ಬದುಕನ್ನು ಹಸನುಗೊಳಿಸಲು ನಮ್ಮ ಸರ್ಕಾರ ಮಾನವೀಯ ಚೌಕಟ್ಟಿನಲ್ಲಿ ನಿರ್ಧಾರಗಳನ್ನು ಮತ್ತು ನಿಲುವುಗಳನ್ನು ತೆಗೆದುಕೊಳ್ಳಲಿದೆ. ಹಿಂದಿನ ಸರ್ಕಾರದ ಪರಿಣಾಮಕಾರಿ ಯೋಜನೆಗಳನ್ನು ಮುಂದುವರೆಸುವ ಜೊತೆಗೆ ಭವಿಷ್ಯದ ದೃಷ್ಟಿಯಲ್ಲಿ ಹೊಸ ಹೆಜ್ಜೆ ಇಡಲಿದೆ ಎಂದಿದ್ದಾರೆ.
ರೈತ ನಾಡಿನ ಬೆನ್ನೆಲುಬು. ಆತನ ರಕ್ಷಣೆಗೆ ಸದಾ ನಾವು ಚಿಂತಿಸುತ್ತೇವೆ. ಆಧುನಿಕ ಕೃಷಿ ತಂತ್ರಜ್ಞಾನಗಳನ್ನು ಕೃಷಿಯಲ್ಲಿ ಅಳವಡಿಸುವುದು ಸರ್ಕಾರದ ಆದ್ಯತೆಯಲ್ಲಿ ಪ್ರಮುಖವಾದುದು ಎಂದಿದ್ದಾರೆ.

ರಾಜ್ಯದ ರೈತರು ಇಸ್ರೇಲ್ ಮಾದರಿಯ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕೆಂಬು ದು ಸರ್ಕಾರದ ಬಯಕೆ. ನೀರು ಲಭ್ಯತೆ ಆಧರಿಸಿ ಯಾವ ಋತುಮಾನಕ್ಕೆ ಯಾವ ಬೆಳೆ ಬೆಳೆಯಬೇಕು ಎಂಬ ಬಗ್ಗೆ ಅಧಿಕಾರಿಗಳು ರೈತರ ಜಮೀನಿಗೆ ಬಂದು ಸಲಹೆ ನೀಡಬೇಕು. ಕೃಷಿ ಪದ್ಧತಿ ಮತ್ತು ಕೃಷಿ ನೀತಿಯಲ್ಲಿ ಸಮಗ್ರ ಬದಲಾವಣೆ ತರಬೇಕು. ಅನ್ನದಾತನಿಗೆ ಅಧಿಕ ಆದಾಯ ಹಾಗೂ ಹೆಚ್ಚು ಲಾಭ ದೊರಕಿಸಿಕೊಡಬೇಕಾದರೆ ತೋಟಗಾರಿಕಾ ಬೆಳೆಗಳಿಗೆ ಒತ್ತು ನೀಡಬೇಕಿದೆ. ರಫ್ತು ಆಧಾರಿತ ಮಾರುಕಟ್ಟೆ ವ್ಯವಸ್ಥೆ,ಪೆÇಟ್ಟಣೀಕರಣ ಹಾಗೂ ಸಂಗ್ರಹಣಾ ವ್ಯವಸ್ಥೆಯನ್ನು ರೂಪಿಸಬೇಕಿದೆ ಎಂದಿದ್ದಾರೆ.
ರೈತರಿಗೆ ನ್ಯಾಯಯುತ ಬೆಲೆ ಖಚಿತಪಡಿಸುವ ಮಾದರಿ ಹಾಗೂ ಪ್ರಾಯೋಗಿಕ ಯೋಜನೆಯನ್ನು ರಾಷ್ಟ್ರದಲ್ಲಿಯೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ.
ರೈತರ ಆತಂಕದ ದಿನಗಳು ದೂರವಾಗಬೇಕು, ಧ್ವನಿ ಇಲ್ಲದವರಿಗೆ ಧ್ವನಿಯಾಗಬೇಕು, ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಅವರು ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯಪಾಲರ ಭಾಷಣದಲ್ಲಿ ರೈತರ ಅಭಿವೃದ್ಧಿ ಬಗ್ಗೆ ಚರ್ಚಿಸಲಾಗಿದೆಯೇ ಹೊರತು, ಸಾಲ ಮನ್ನಾದ ಬಗ್ಗೆ ಪ್ರಸ್ತಾಪ ಮಾಡಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ