ಇತ್ತೀಚೆಗೆ ನಿಧನರಾದ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರಿಗೆ ಉಭಯ ಸದನಗಳಲ್ಲಿ ಸಂತಾಪ

 

ಬೆಂಗಳೂರು, ಜು.2- ಇತ್ತೀಚೆಗೆ ನಿಧನರಾದ ಹಾಲಿ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು ಸೇರಿದಂತೆ ಮತ್ತಿತರರಿಗೆ ವಿಧಾನಮಂಡಲದ ಉಭಯ ಸದನಗಳಲ್ಲಿ ಸಂತಾಪ ಸೂಚಿಸಲಾಯಿತು.
ರಾಜ್ಯಪಾಲರ ಭಾಷಣ ಮುಗಿದ ನಂತರ ಕಲಾಪ ಸಮಾವೇಶಗೊಂಡಾಗ ವಿಧಾನಸಭೆಯಲ್ಲಿ ಸ್ಪೀಕರ್ ರಮೇಶ್‍ಕುಮಾರ್ ಅವರು ಸಂತಾಪ ಸೂಚನೆ ನಿರ್ಣಯವನ್ನು ಮಂಡಿಸಿದರು.

ರಸ್ತೆ ಅಪಘಾತದಲ್ಲಿ ಇತ್ತೀಚೆಗೆ ನಿಧನರಾದ ಬಾಗಲಕೋಟೆ ಜಿಲ್ಲೆ ಜಮಖಂಡಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿದ್ದುನ್ಯಾಮೆಗೌಡ, ಮಾಜಿ ಶಾಸಕರಾದ ಬಿ.ಎನ್.ವಿಜಯ್‍ಕುಮಾರ್, ವೈ.ಎನ್.ರುದ್ರೇಶ್‍ಗೌಡ, ಎಚ್.ಡಿ.ದ್ಯಾವೀರಪ್ಪ, ಮಹದೇವಪ್ಪ ಶಿವಬಸಪ್ಪ ಪಟ್ಟಣ್, ಡಿ.ಮುನಿಯಪ್ಪ, ಸದಾಶಿವ ಪಾಟೀಲ ಜೋಳದ ಹೆಡ್ಗೆ, ಕೆ.ಎಚ್.ಹನುಮೇಗೌಡ, ಡಾ.ವೈ.ಸಿ.ವಿಶ್ವನಾಥ್, ಎಚ್.ಗಂಗಾಧರನ್ ಮತ್ತು ಮಾಜಿ ಸಚಿವ ಬಿ.ಎಸ್.ಪಾಟೀಲ್ ಸಾಸನೂರು ಅವರ ನಿಧನಕ್ಕೆ ಸಭೆಯಲ್ಲಿ ಸಂತಾಪ ವ್ಯಕ್ತಪಡಿಸಲಾಯಿತು.

ಸಂತಾಪ ಸೂಚನೆ ನಿರ್ಣಯದ ಮೇಲೆ ಮಾತನಾಡಿದ ಸ್ಪೀಕರ್ ರಮೇಶ್‍ಕುಮಾರ್ ಅವರು, ಸಿದ್ದು ಡಿ.ನ್ಯಾಮೇಗೌಡ ಅವರು ಕೃಷ್ಣಾ ನದಿಗೆ ಸರ್ಕಾರದ ಆರ್ಥಿಕ ನೆರವು ಇಲ್ಲದೆ ಬ್ಯಾರೆಜ್ ನಿರ್ಮಿಸಿ ಬ್ಯಾರೆಜ್ ಸಿದ್ದು ಎಂದೇ ಹೆಸರಾಗಿದ್ದರು. ಅವರ ಸಾವು ಸದನಕ್ಕೆ ತುಂಬಲಾರದ ನಷ್ಟ ಎಂದು ವಿಷಾದಿಸಿದರು.
ವೈ.ಎನ್.ರುದ್ರೇಶ್‍ಗೌಡ, ಬಿ.ಎನ್.ವಿಜಯ್‍ಕುಮಾರ್ ಅದೇ ರೀತಿ ಮಹದೇವಪ್ಪ ಶಿವಬಸಪ್ಪ ಪಟ್ಟಣ್ ಅವರು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಸಾವು ತುಂಬಲಾರದ ನಷ್ಟ ಎಂದು ವಿಷಾದಿಸಿದರು.

ಸಂತಾಪ ಸೂಚನೆ ನಿರ್ಣಯದ ಮೇಲೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಮತ್ತಿತರರು ಮಾತನಾಡಿ, ಮೃತರ ಸಮಾಜ ಸೇವೆಯನ್ನು ಬಣ್ಣಿಸಿದರು.
ಮೃತರ ಗೌರವಾರ್ಥವಾಗಿ ಸದನದಲ್ಲಿ ಒಂದು ನಿಮಿಷ ಮೌನಾಚರಣೆ ಸಲ್ಲಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ