ಸಹಾನುಭೂತಿಯಿಂದ ನೋಡುವಂತಹ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕಾದರೆ ಮಾಸ್ತಿಯವರ ಕಥೆಗಳನ್ನು ಓದಬೇಕು: ಡಾ.ಚಂದ್ರಶೇಖರ ಕಂಬಾರ

 

ಬೆಂಗಳೂರು, ಜು.1-ಪ್ರತಿಯೊಬ್ಬ ವ್ಯಕ್ತಿಯನ್ನು ಸಹಾನುಭೂತಿಯಿಂದ ನೋಡುವಂತಹ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕಾದರೆ ಮಾಸ್ತಿಯವರ ಕಥೆಗಳನ್ನು ಓದಿ, ಕಲಿಯಬೇಕಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಹೇಳಿದರು.
ಭಾರತೀಯ ವಿದ್ಯಾಭವನದಲ್ಲಿಂದು ಡಾ.ಮಾಸ್ತಿ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಮಾಸ್ತಿ ಪ್ರಶಸ್ತಿ ಹಾಗೂ ಮಾಸ್ತಿ ಕಥಾ-ಕಾದಂಬರಿ ಪುರಸ್ಕಾರ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಮಾಸ್ತಿಯವರ ಕಥೆಗಳನ್ನು ಓದಿ ತಿಳಿದುಕೊಳ್ಳಬೇಕಾದ ಬಹಳ ಅಂಶಗಳಿವೆ. ಅವರ ಕೃತಿಗಳನ್ನು ಓದಿದವರು ಸಾರ್ಥಕರಾಗುತ್ತಾರೆ. ನಮ್ಮಲ್ಲಿ ವಿವೇಕ ಇರಬೇಕು. ಕಷ್ಟಗಳನ್ನು ಎದುರಿಸುವ ಧೈರ್ಯ ತಂದುಕೊಳ್ಳಲು ಮಾಸ್ತಿಯವರ ಕಥೆಗಳು ನೆರವಾಗುತ್ತವೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಮಾತನಾಡಿ, ಜ್ಞಾನಪೀಠ ಪ್ರಶಸ್ತಿ ವಿಜೇತ ಮಾಸ್ತಿಯವರು ಸಣ್ಣಕಥೆಗಳ ಜನಕ ಎಂದೇ ಪ್ರಖ್ಯಾತರಾಗಿದ್ದಾರೆ. ಮಾಸ್ತಿಯವರ ಪುಸ್ತಕಗಳನ್ನು ಓದುವ ಮೂಲಕ ಅವರ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಮಾಸ್ತಿಯವರು ಆಡಳಿತ ಸೇವೆಯಲ್ಲಿ ಇದ್ದವರು. ಅವರು ಸರ್ಕಾರಿ ಅಧಿಕಾರಿಗಳೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದರು. ಸಾಹಿತ್ಯದ ಆಸ್ತಿಯೇ ಮಾಸ್ತಿ ಎಂದು ಬಣ್ಣಿಸಿದರು.

ನಿರ್ಲಕ್ಷಿತ ಸಮುದಾಯಗಳ ಬಗ್ಗೆ ಮಾಸ್ತಿಯವರು ಬೆಳಕು ಚೆಲ್ಲಿದ್ದಾರೆ. ಸಾಮಾನ್ಯ ವ್ಯಕ್ತಿಗಳ ಜನಜೀವನದ ಬಗ್ಗೆ ಬರೆದುದು ಅವರ ಮನತಟ್ಟಿದೆ ಎಂದು ಹೇಳಿದರು.
ಮಾಸ್ತಿ ಪ್ರಶಸ್ತಿಯನ್ನು ಸಾಹಿತಿಗಳಾದ ಡಾ.ವಿ.ಕೆ.ತಿರುಮಲೇಶ್, ಡಾಸಿದ್ದಲಿಂಗಪಟ್ಟಣಶೆಟ್ಟಿ, ಡಾ.ಬಿ.ಎಲ್.ವೇಣು, ಡಾ.ನರಹಳ್ಳಿ ಸುಬ್ರಹ್ಮಣ್ಯ ಹಾಗೂ ಪೆÇ್ರ.ಎಂ.ಆರ್.ಕಮಲಾ ಅವರಿಗೆ 25 ಸಾವಿರ ನಗದು, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.
ಮಾಸ್ತಿ ಕಥಾ ಪುರಸ್ಕಾರವನ್ನು ಎಸ್.ಎನ್.ಸೇತುರಾಂ, ತೇಜಸ್ವಿನಿ ಹೆಗ್ಗಡೆ, ಚಿಮ್ಮನಹಳ್ಳಿ ರಮೇಶ್‍ಬಾಬು ಅವರಿಗೆ 10 ಸಾವಿರ ರೂ. ನಗದು, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಚಿಂತಕ ಡಾ.ಸಿ.ಎನ್.ರಾಮಚಂದ್ರನ್, ವಿಮರ್ಶಕರಾದ ಡಾ.ಎಂ.ಎಸ್.ಆಶಾದೇವಿ, ಟ್ರಸ್ಟ್‍ನ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ