ರೌಡಿ ಶೀಟರ್ ಸೈಕಲ್ ರವಿಯ ಕೋಟ್ಯಂತರ ಆಸ್ತಿಗೆ ಪೊಲೀಸರೇ ಪಾಲುದಾರರು!

ಬೆಂಗಳೂರು: ಬುಧವಾರ ಪೊಲೀಸರ ಗುಂಡಿನ ದಾಳಿಗೆ ಒಳಗಾಗಿರುವ ರೌಡಿ ಶೀಟರ್ ಸೈಕಲ್ ರವಿ ಅಲಿಯಾಸ್ ಎಂ ರವಿಕುಮಾರನ ಕೋಟ್ಯಂತರ ಆಸ್ತಿಗೆ ಪೊಲೀಸರೇ ಪಾಲುದಾರರು ಎಂಬ ಅಸಲಿ ಸತ್ಯ ಬಯಲಾಗಿದೆ.

ಪೊಲೀಸರು ಪ್ರತಿ ತಿಂಗಳು ಸೈಕಲ್ ರವಿ ಬಳಿ ಹಣ ಹೂಡಿಕೆ ಮಾಡುತ್ತಿದ್ದರು. ಇದೇ ಹಣವನ್ನು ಬಂಡವಾಳವಾಗಿ ರವಿ ಜೂಜಾಟದಲ್ಲಿ ತೊಡಗಿಸುತ್ತಿದ್ದನು. ಹೀಗಾಗಿ ಪೊಲೀಸರು ಮತ್ತು ರವಿ ಮಧ್ಯೆ ವ್ಯವಹಾರ ನಡೆಯುತ್ತಿತ್ತು. ಈ ಕಾರಣದಿಂದಲೇ ರವಿ ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಳ್ಳುತ್ತಿದ್ದ ಎಂಬ ಅಚ್ಚರಿಯ ವಿಷಯ ಸಿಸಿಬಿ ಪೊಲೀಸರ ತನಿಖೆಯಲ್ಲಿ ಹೊರ ಬಂದಿದೆ. ರವಿಯ ಆಸ್ತಿ ಪತ್ರಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಗುಂಡಿನ ದಾಳಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ರವಿ ಸ್ಥಿತಿ ಚಿಂತಾಜನಕವಾಗಿದೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ಮೂಲಗಳು ತಿಳಿಸಿವೆ. ರವಿ ಆರು ಕೊಲೆ ಹಾಗೂ ನಾಲ್ಕು ಕೊಲೆಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಆತನ ವಿರುದ್ಧ ಬೆಂಗಳೂರಿನ ಸುಮಾರು 13 ಕ್ಕೂ ಹೆಚ್ಚಿನ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಸೈಕಲ್ ರವಿ 20 ವರ್ಷದಿಂದ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, 1998 ರಲ್ಲಿ ಆತನ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿತ್ತು. ಈಗಲೂ ಸುಪಾರಿ ಕಿಲ್ಲರ್, ಅಪಹರಣ, ದರೋಡೆ ಮತ್ತಿತರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ