ಹಜ್‍ಘರ್‍ಗೆ ಟಿಪ್ಪು ಸುಲ್ತಾನ್ ಹೆಸರಿಡಬೇಕೆಂದು ತೀರ್ಮಾನವೂ ಆಗಿಲ್ಲ. ಆದೇಶವೂ ಆಗಿಲ್ಲ: ವಕ್ಫ್ ಮತ್ತು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಜಮೀರ್ ಅಹಮ್ಮದ್‍ಖಾನ್

 

ಬೆಂಗಳೂರು, ಜೂ.26- ಹಜ್‍ಘರ್‍ಗೆ ಟಿಪ್ಪು ಸುಲ್ತಾನ್ ಹೆಸರಿಡಬೇಕೆಂದು ತೀರ್ಮಾನವೂ ಆಗಿಲ್ಲ. ಆದೇಶವೂ ಆಗಿಲ್ಲ. ಅದಿನ್ನೂ ಪ್ರಸ್ತಾವನೆಯ ಹಂತದಲ್ಲಿದೆ ಎಂದು ಹಜ್, ವಕ್ಫ್ ಮತ್ತು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಜಮೀರ್ ಅಹಮ್ಮದ್‍ಖಾನ್ ಹೇಳಿದರು.

ವಿಕಾಸಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯ ಕುರಿತು ರಾಜ್ಯದ ವಿವಿಧೆಡೆಗಳಿಂದ ಪ್ರಸ್ತಾವನೆಗಳು ಬಂದಿದ್ದವು. ಅದರಲ್ಲಿ ಹಜ್‍ಘರ್‍ಗೆ ಟಿಪ್ಪು ಸುಲ್ತಾನ್ ಹೆÉಸರಿಡಬೇಕೆಂಬ ಒತ್ತಾಯ ಕೇಳಿ ಬಂದಿದ್ದವು. ಅದರ ಬಗ್ಗೆ ನಾನು ಪ್ರಸ್ತಾಪಿಸಿದ್ದೇನೆ. ಆ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ, ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಪರಮೇಶ್ವರ್, ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್ ಅವರ ಜತೆ ಚರ್ಚೆ ಮಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ ಅದಕ್ಕೂ ಮೊದಲ ಬಿಜೆಪಿ ರಾಜ್ಯಾಧ್ಯಕ್ಷರಾದ ಯಡಿಯೂರಪ್ಪ ಅವರ ಜತೆಯೂ ಚರ್ಚೆ ಮಾಡುತ್ತೇನೆ ಎಂದರು.
40 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಹಜ್‍ಘರ್ ನಿರ್ಮಾಣದಲ್ಲಿ ಯಡಿಯೂರಪ್ಪ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಅಭಿಪ್ರಾಯವೂ ಬಹಳ ಮುಖ್ಯ ಎಂದು ಹೇಳಿದರು.

ಸಣ್ಣಗಾಡಿಯಲ್ಲಿ ಓಡಾಡಲು ಆಗುವುದಿಲ್ಲ. ನನಗೆ ದೊಡ್ಡ ಗಾಡಿ ಬೇಕೆಂದು ನಾನು ಯಾರನ್ನು ಕೇಳಿಲ್ಲ. ಇಲಾಖೆಯಲ್ಲಿ ಫಾರ್ಚೂನರ್ ಕಾರನ್ನು ಕೇಳಿದ್ದೇನೆ. ಅದನ್ನು ತಪ್ಪಾಗಿ ಬಿಂಬಿಸಲಾಗಿದೆ. ಒಂದೂವರೆ ಕೋಟಿ ರೂ. ಮೌಲ್ಯದ ಲೆಕ್ಸಾಸ್, ಬೆನ್ಜ್‍ಕಾರ್, ಎರಡೂ ಕೋಟಿ ರೂ. ಮೌಲ್ಯದ ಬಿಎಂಡಬ್ಲ್ಯೂ ಕಾರನ್ನು ಖರೀದಿ ಮಾಡಿ ಕೊಡಿ ಎಂದು ಬೇಡಿಕೆ ಇಟ್ಟಿಲ್ಲ ಎಂದರು.
ಅಗತ್ಯ ಬಿದ್ದರೆ ರೈತರಿಗಾಗಿ ಈಗ ಇರುವ ಇನೋವಾ ಕಾರನ್ನು ಬಿಟ್ಟುಕೊಡಲು ಸಿದ್ದ. ನಮಗೆ ರೈತರ ಹಿತ ಮುಖ್ಯ. ಅವರ ಸಾಲ ಮನ್ನಾ ಆಗಬೇಕು ಎಂದು ಹೇಳಿದರು.

ಬಜೆಟ್ ಮಂಡನೆಗೆ ಕಾಂಗ್ರೆಸ್ ಹೈಕಮಾಂಡ್‍ನ ರಾಹುಲ್‍ಗಾಂಧಿ ಅನುಮತಿ ನೀಡಿದ್ದಾರೆ. ಹಾಗಾಗಿ ಕುಮಾರಸ್ವಾಮಿ ಅವರು ಬಜೆಟ್ ಮಂಡನೆ ಮಾಡುತ್ತಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆಗೆ ವಿರೋಧ ವ್ಯಕ್ತಪಡಿಸಿಲ್ಲ ಎಂದರು.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಲ್ಲಿ ಸುಮಾರು ಎರಡು ಸಾವಿರ ಕೋಟಿ ರೂ.ಗಳ ಖರ್ಚಿನಷ್ಟು ಯೋಜನೆಗಳಿವೆ. ಸದ್ಯಕ್ಕೆ ನಾನು ಅದನ್ನು ಈಡೇರಿಸುವಂತೆ ಒತ್ತಡ ಹಾಕುವುದಿಲ್ಲ ಎಂದು ತಿಳಿಸಿದರು.
ಹಿಂದಿನ ವರ್ಷಕ್ಕಿಂತ ಶೇ.10ರಷ್ಟು ಅನುದಾನವನ್ನು ಹೆಚ್ಚಿಸಿದರೆ ಸಾಕು. ನನಗೆ ರೈತರ ಕಷ್ಟ ಪರಿಹಾರವಾಗುವುದು ಮುಖ್ಯವಾಗಿದೆ. ಹಾಗಾಗಿ ಇಲಾಖೆಯ ಬೇಡಿಕೆಗಳಿಗೆ ಹೆಚ್ಚು ಒತ್ತಡ ಹೇರುವುದಿಲ್ಲ ಎಂದು ಜಮೀರ್ ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ