ಡಿಸಿಎಂ ಪರಮೇಶ್ವರ್ ಧರ್ಮಸ್ಥಳ ಭೇಟಿ ಹಿಂದಿನ ರಹಸ್ಯವೇನು?

ಬೆಂಗಳೂರು: ಮುಖ್ಯಮಂತ್ರಿ ಕುಮಾರ ಸ್ವಾಮಿ ಹೊಸ ಬಜೆಟ್ ಮಂಡಿಸುತ್ತಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರೊಂದಿಗೆ ಆಕ್ಷೇಪ ವ್ಯಕ್ತ ಪಡಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಉಂಟಾಗಿದ್ದು, ಸಿದ್ದು ಮನವೋಲಿಕೆಗೆ ಖುದ್ದಾಗಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಧರ್ಮಸ್ಥಳಕ್ಕೆ ದಿಢೀರ್ ಭೇಟಿ ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಆಯುರ್ವೇದ ಚಿಕಿತ್ಸೆಯೊಂದಿಗೆ ವಿಶ್ರಾಂತಿ ಪಡೆಯುತ್ತಿರುವ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಪರಮೇಶ್ವರ್ ಭಾನುವಾರ ಮಧ್ಯಾಹ್ನ ದಿಢೀರ್ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳೆಸಿದರು.

ಧರ್ಮಸ್ಥಳಕ್ಕೆ ಆಗಮಿಸಿದ ಪರಮೇಶ್ವರ ಅವರು ಶ್ರೀಕ್ಷೇತ್ರದಲ್ಲಿ ದೇವರ ದರ್ಶನ ಪಡೆದು, ನಂತರ ನೇರ ಸಿದ್ದರಾಮಯ ಅವರನ್ನು ಭೇಟಿ ಮಾಡಿದರು. ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರಿಗೆ ಸಂಪುಟ ದರ್ಜೆಯ ಸಚಿವರ ಸ್ಥಾನಮಾನ ನೀಡುವ ಸರಕಾರದ ನಿರ್ಧಾರವನ್ನು ಪರಮೇಶ್ವರ ವಿವರಿಸಿದ್ದಾರೆ.

ಚುನಾವಣೆಯಲ್ಲಿ ನಿರಂತರವಾಗಿ ಪ್ರಯಾಣ ಮಾಡಿ ದಣಿರಿರುವ ಸಿದ್ದರಾಮಯ್ಯ ಅವರು 11 ದಿನಗಳ ವಿಶ್ರಾಂತಿಗಾಗಿ ಧರ್ಮಸ್ಥಳದಲ್ಲಿ ನೆಲಸಿದ್ದಾರೆ. ಅಲ್ಲಿಗೆ ತೆರಳುವ ಮೊದಲು ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಅವರು ಹೊಸದಾಗಿ ಬಜೆಟ್ ಮಂಡಿಸುವ ಅಗತ್ಯ ಇಲ್ಲ. ತಮ್ಮ ಹೊಸ ಯೋಜನೆಗಳಿದ್ದರೆ ಅದನ್ನು ಪೂರಕ ಬಜೆಟ್‌ನಲ್ಲಿ ಸೇರಿಸಬಹುದು ಎಂದಿದ್ದರು. ಇದಕ್ಕೆ ತಿರುಗೇಟು ನೀಡುವಂತೆ ಕುಮಾರಸ್ವಾಮಿ ಅವರು ನೇರವಾಗಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಬಜೆಟ್ ಮಂಡನೆಗೆ ಅನುಮತಿ ಪಡೆದುಕೊಂಡು ಬಂದಿದ್ದರು.

ಇದು ಸಿದ್ದರಾಮಯ್ಯ ಅವರ ಸಿಡಿಮಿಡಿಯನ್ನು ಹೆಚ್ಚಿಸಿತ್ತು. ಕುಮಾರ ಸ್ವಾಮಿ ಬಜೆಟ್ ತಯಾರಿಯ ಪೂರ್ವಭಾವಿ ತಯಾರಿ ಸಭೆಗಳನ್ನು ಆರಂಭಿಸಿ, ಬಜೆಟ್ ಮಂಡನೆಯ ದಿನಾಂಕವನ್ನು ಘೋಷಿಸುತ್ತಿದ್ದಂತೆ ಸಿದ್ದರಾಮಯ್ಯ ನೇರವಾಗಿ ಅಖಾಡಕ್ಕೆ ಇಳಿದಿದ್ದರು.

ಶಾಸಕರಾದ ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ಮುನಿರತ್ನ ಆರೋಗ್ಯ ವಿಚಾರಿಸುವ ನೆಪದಲ್ಲಿ ಧರ್ಮಸ್ಥಳಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು. ಜೆಡಿಎಸ್‌ಗೆ ಬಹುಮತ ಬಂದು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರೆ ಹೊಸದಾಗಿ ಬಜೆಟ್ ಮಂಡಿಸಿಕೊಳ್ಳಲಿ, ಕಾಂಗ್ರೆಸ್ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿದ್ದಾರೆ ಅಂದ ಮೇಲೆ, ಹಿಂದೆ ನಮ್ಮ ಸರ್ಕಾರ ಮಂಡಿಸಿದ ಬಜೆಟ್‌ನ್ನು ಬದಿಗಿಟ್ಟು ಹೊಸ ಬಜೆಟ್ ಮಂಡಿಸುತ್ತಿರುವುದು ಸರಿಯಲ್ಲ. ಕುಮಾರ ಸ್ವಾಮಿಗೆ ಕಾಂಗ್ರೆಸ್‌ನವರೆ ಆದ ಪರಮೇಶ್ವರ್, ಡಿ.ಕೆ.ಶಿವಕುಮಾರ್ ಬೆಂಬಲ ವ್ಯಕ್ತ ಪಡಿಸಿದ್ದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತ ಪಡಿಸಿದರು.

ಇದು ಮೈತ್ರಿ ಸರ್ಕಾರದ ಬುಡವನ್ನು ಅಲ್ಲಾಡಿಸಿತ್ತು. ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಶಾಸಕರು ಹಿಂದೆಲ್ಲಾ ರೆಸಾರ್ಟ್ ರಾಜಕೀಯದಲ್ಲಿ ಪಳಗಿದವವರು. ಹಾಗಾಗಿ ಪರಮೇಶ್ವರ್ ಆತಂಕಕ್ಕೆ ಒಳಗಾಗಿದ್ದರು. ಇಂದು ಕೂಡಲೇ ಧರ್ಮಸ್ಥಳಕ್ಕೆ ತೆರಳಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ನಿಗಮ ಮಂಡಳಿಗಳ ನೇಮಕಾತಿಯಲ್ಲಿ ಕಾಂಗ್ರೆಸ್ ಪಾಲಿಗೆ ಸುಮಾರು 50 ಸ್ಥಾನಗಳು ಬಂದಿವೆ. ಅವುಗಳಿಗೆ ಯಾರನ್ನು ನೇಮಿಸಬೇಕು ಎಂಬ ಸಂಭವನೀಯ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಪರಮೇಶ್ವರ್ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.

ಹಲವಾರು ರಾಜಕೀಯ ಬೆಳವಣಿಗೆಗಳ ಕುರಿತು ಇಬ್ಬರು ನಾಯಕರು ಸುದೀರ್ಘ ಚರ್ಚೆ ನಡೆಸಿದರು. ಸಿದ್ದರಾಮಯ್ಯ ಪರಮೇಶ್ವರ್ ಬಳಿ ತಮ್ಮ ಅಸಮಾಧಾನವನ್ನು ಹೊರ ಹಾಕಿದರು ಎಂದು ಹೇಳಲಾಗಿದೆ.

ವಿಮಾನ ನಿಲ್ದಾಣಕ್ಕೆ ಬಂದಿಳಿದ ಪರಮೇಶ್ವರ್ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ನಮ್ಮ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರು. ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಲು ಬಂದಿದ್ದೇನೆ. ಇದರಲ್ಲಿ ಯಾವ ರಾಜಕೀಯವೂ ಇಲ್ಲ. ಇದೊಂದು ಸೌಜನ್ಯದ ಭೇಟಿಯಷ್ಟೇ ಎಂದು ಹೇಳಿದರು.

ಸಾಲಮನ್ನಾ, ಬಜೆಟ್ ಮಂಡನೆ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಯಾವುದೇ ವಿವಾದಾತ್ಮಕ ಹೇಳಿಕೆ ನೀಡಿಲ್ಲ. ಶನಿವಾರ ಬೆಳಗ್ಗೆ ನನ್ನ ಜೊತೆ ಚೆನ್ನಾಗಿಯೇ ಮಾತನಾಡಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ