ನವದೆಹಲಿ;ಜೂ-24: ಇಡೀ ವಿಶ್ವದಾದ್ಯಂತ ಯೋಗ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗಿದ್ದು, ‘ವಸುದೈವ ಕುಟುಂಬಕಂ’ ಚೈತನ್ಯವನ್ನು ಅರ್ಥ ಮಾಡಿಕೊಳ್ಳಲು ಯೋಗ ನೆರವಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಜನಪ್ರಿಯ ರೆಡಿಯೋ ಕಾರ್ಯಕ್ರಮ 45ನೇ ಆವೃತ್ತಿಯ ಮನ್ ಕಿ ಬಾತ್ ನಲ್ಲಿ ಮಾತನಾಡಿದ ಪ್ರಧಾನಿ, ಅಂತರಾಷ್ಟ್ರೀಯ ಯೋಗ ದಿನಾಚರಣೆವೇಳೆ ವಿಶ್ವದ ವಿವಿಧ ಭಾಗಗಳಲ್ಲಿ ಯೋಗಾಭ್ಯಾಸ ನಡೆದ ರೀತಿ ಬಹಳ ಸಂತಸವನ್ನು ತಂದಿದೆ. ಪ್ರಸಕ್ತ ಸಾಲಿನ ಯೋಗದಿನಾಚರಣೆ ಸಂಭ್ರಮವನ್ನು ಮೂಡಿಸಿತ್ತು. ಯೋಗ ಆರೋಗ್ಯಕರ ಜೀವನ ಶೈಲಿಯ ಕ್ರಾಂತಿಯಾಗಿದೆ. ವಿಶ್ವದೆಲ್ಲೆಡೆ ನಡೆದ ಯೋಗಭ್ಯಾಸದ ರೀತಿಗಳು ಭಾರತೀಯರನ್ನು ಹೆಮ್ಮೆ ಪಡುವಂತೆ ಮಾಡಿದೆ ಎಂದು ಹೇಳಿದರು.
ಐಪಿಲ್ ಹಾಗೂ ಟೆಸ್ಟ್ ಪಂದ್ಯ ಕುರಿತು ಮಾತನಾಡಿಡ ಪ್ರಧಾನಿ ಮೋದಿ, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಭಾರತ ಮತ್ತು ಆಫ್ಘಾನಿಸ್ತಾನದ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯದ ಕುರಿತು ಮಾತನಾಡಿದರು. ಕೆಲ ದಿನಗಳ ಹಿಂದಷ್ಟೇ ಬೆಂಗಳೂರು ನಗರದಲ್ಲಿ ಐತಿಹಾಸಿಕ ಪಂದ್ಯವೊಂದು ನಡೆದಿತ್ತು. ಭಾರತ-ಅಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯ ಕುರಿತಂತೆ ನಾನು ಮಾತನಾಡುತ್ತಿದ್ದೇನೆ. ಭಾರತದ ವಿರುದ್ಧ ಅಫ್ಘಾನಿಸ್ತಾನ ಮೊದಲ ಕ್ರಿಕೆಟ್ ಪಂದ್ಯವನ್ನು ಆಡಿದ್ದಕ್ಕೆ ನಾವು ಹೆಮ್ಮೆ ಪಡಬೇಕಿದೆ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೇ ಮೈದಾನದಲ್ಲಿ ಭಾರತೀಯ ತಂಡದ ಕ್ರಿಕೆಟ್ ಆಟಗಾರರು ಆಟದಲ್ಲಿ ತೋರಿಸಿದ ಉತ್ಸಾಹವನ್ನು ಮೋದಿ ಶ್ಲಾಘಿಸಿದ್ದಾರೆ. ಭಾರತೀಯ ಆಟಗಾರರು ಗೆಲುವಿನ ನಗೆ ಬೀರಿ, ಸಂಭ್ರಮಿಸುವಾಗ ಆಫ್ಘಾನಿಸ್ತಾನದ ಆಟಗಾರರನ್ನು ಸೇರಿಸಿಕೊಂಡು ಫೋಟೋ ತೆಗೆದುಕೊಂಡಿರುವುದನ್ನು ಮೋದಿ ಶ್ಲಾಘಿಸಿದ್ದಾರೆ.
ಇದೇ ವೇಳೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 11ನೇ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಅಫ್ಘಾನಿಸ್ತಾನದ ತಂಡದ ಆಟಗಾರ ರಶೀದ್ ಖಾನ್ ಅವರನ್ನು ಕೊಂಡಾಡಿರುವ ಅವರು, ಕ್ರಿಕೆಟ್ ಜಗತ್ತಿಗೆ ರಶೀದ್ ಖಾನ್ ಅವರು ಆಸ್ತಿಯಾಗಿದ್ದಾರೆ. ರಶೀದ್ ಅತ್ಯುತ್ತಮ ಕ್ರಿಕೆಟಿಗ. ಐಪಿಎಲ್ ನಲ್ಲಿಯೂ ಉತ್ತಮವಾಗಿ ಆಡಿದ್ದಾರೆಂದು ಹೇಳಿದ್ದಾರೆ.
ಜು.1 ರಂದು ವೈದ್ಯರ ದಿನ ಆಚರಣೆ ಮಾಡಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಮಾತನಾಡಿರುವ ಮೋದಿಯವರು, ವೈದ್ಯರು ಮಾಡುತ್ತಿರುವ ಸೇವೆಯನ್ನು ಶ್ಲಾಘಿಸಿದ್ದಾರೆ. ಇದೇ ವೇಳೆ ವೈದ್ಯರಿಕೆ ಶುಭಾಶಯಗಳನ್ನು ಕೋರಿದ್ದಾರೆ.
ಸಂತ ಕಬೀರರ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಮಗಧ್ ನಲ್ಲಿ ಸಾಯುವವರು ಸ್ವರ್ಗಕ್ಕೆ ಹೋಗುವುದಲ್ಲ ಎಂಬ ನಂಬಿಕೆಗಳಿತ್ತು. ಆದರೆ, ಅಂತಹ ಮೂಢನಂಬಿಕೆಗಳನ್ನು ತೊಡೆದುಹಾಕಲು ಸಂತ ಕಬೀರರು ಶ್ರಮಪಟ್ಟಿದ್ದರು ಎಂದಿದ್ದಾರೆ.
ಮತ್ತೊಬ್ಬರು ಗುರು ನಾನಕ್ ನಮ್ಮ ಜತೆಗಿದ್ದರು. ಜಾತಿವಾದಗಳನ್ನು ತೊಡೆದು ಹಾಕಲು ಗುರುನಾನಕ್ ಅವರು ಕೆಲಸ ಮಾಡಿದ್ದರು. ಬಡವರಿಗೆ ಸೇವೆ ಮಾಡಿದರೆ, ದೇವರಿಗೆ ಸೇವೆ ಮಾಡಿದಂತೆ ಎಂದು ಹೇಳುತ್ತಿದ್ದರು. ಅನ್ನದಾನ ಸೇವೆಗಳನ್ನು ಆರಂಭಿಸಿದ್ದರು.
2019ರಲ್ಲಿ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಶತಮಾನೋತ್ಸವ ನಡೆಯಲಿದೆ. ಶಾಂತಿ, ತ್ಯಾಗ ಹಾಗೂ ಅಹಿಂಸೆ ಎಂದಿಗೂ ವಿಜಯ ಸಾಧಿಸಲಿದೆ. ಇಡೀ ಮನುಕುಲವೇ ಬೆಚ್ಚಿಬೀಳಿಸುವ ಕ್ರೂರ ಘಟನೆಯಿಂದ ನಮಗೆ ತಿಳಿಯುವ ಸಂದೇಶ- ಹಿಂಸೆಗಳಿಂದ ಎಂದಿಗೂ ಸಮಸ್ಯೆ ಬಗೆಹರಿಯುವುದಿಲ್ಲ ಎಂಬುದು ಎಂದು ಹೇಳಿದ್ದಾರೆ.
ಇದೇ ವೇಳೆ ಜನ ಸಂಘದ ಸ್ಥಾಪಕ ಶ್ಯಾಮ ಪ್ರಸಾದ ಮುಖರ್ಜಿಯವರನ್ನು ನೆನೆದ ಮೋದಿಯವರು, ದೇಶದ ಶೈಕ್ಷಣಿಕ ಹಾಗೂ ಕೈಗಾರಿಕಾ ವಲಯಕ್ಕೆ ಮುಖರ್ಜಿಯವರ ಕೊಡುಗೆಯನ್ನು ಸ್ಮರಿಸಿದ್ದಾರೆ.
ಕೆಲ ದಿನಗಳ ಹಿಂದೆ ನಾನು ಸಾಕಷ್ಟು ಜನರೊಂದಿಗೆ ವಿಡಿಯೋ ಕಾಲ್ ಮೂಲಕ ಮಾತುಕತೆ ನಡೆಸಿದ್ದೆ. ಅವರ ಜೀವನಗಳ ಬಗ್ಗೆ ಸಾಕಷ್ಟು ತಿಳಿದುಕೊಂಡೆ. ಜಾರ್ಖಾಂಡ್ ನಲ್ಲಿರುವ ಅಂಜನ್ ಕುಮಾರ್ ಎಂಬುವವರು ಕಡಿಮೆ ಬೆಲೆಯಲ್ಲಿ ಗ್ರಾಮಸ್ಥರಿಗೆ ಔಷಧಿಗಳನ್ನು ನೀಡುತ್ತಿದ್ದಾರೆ. ಪಶ್ಚಿಮ ಬಂಗಾಳದಿಂದ ತಮಿಳುನಾಡು ರಾಜ್ಯದವರೆಗೂ ಇಂತಹದ್ದೇ ನಮ್ಮ ದೇಶದಲ್ಲಿ ಸಾಕಷ್ಟು ಕಥೆಗಳಿವೆ ಎಂದು ತಿಳಿಸಿದ್ದಾರೆ.
ಇಡೀ ದೇಶಕ್ಕೆ ಒಂದೇ ತೆರಿಗೆ ಹೊಂದುವುದು ಬಹಳ ದಿನಗಳ ಕನಸಾಗಿತ್ತು. ಈ ನಿಟ್ಟಿನಲ್ಲಿ ಜಾರಿಗೆ ತರಲಾದ ಜಿಎಸ್’ಟಿಯಿಂದಾಗಿ ಸಾಕಷ್ಟು ಚೆಕ್’ಪೋಸ್ಟ್ ಗಳನ್ನು ತೆರವುಗೊಳಿಸಿದ್ದು, ಸರಕು ಸಾಗಾಟಕ್ಕೆ ಇನ್ನಷ್ಟು ವೇಗವನ್ನು ನೀಡಲಾಗಿದೆ. ಸರಕು ಮತ್ತು ಸೇವಾ ತೆರಿಗೆ ಜಗತ್ತಿನ ಅತೀದೊಡ್ಡ ತೆರಿಗೆ ಸುಧಾರಣೆಯಾಗಿದೆ. ಸಹಕಾರೀ ಒಕ್ಕೂಟ ವ್ಯವಸ್ಥೆಗೆ ಜಿಎಸ್’ಟಿ ಜ್ವಲಂತ ನಿದರ್ಶನವಾಗಿದೆ. ಜಿಎಸ್’ಟಿ ಪ್ರಾಮಾಣಿಕತೆಯ ಆಚರಣೆಯಾಗಿದೆ ಎಂದು ತಿಳಿಸಿದ್ದಾರೆ.
PM Modi, Mann ki Baat, yoga Day,IPL,GST