ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯ ಸಾಧನೆ

ಹುಣಸೂರು, ಜೂ.23- ಕಳೆದ ಕೆಲ ದಿನಗಳ ಹಿಂದೆ ಚಿರತೆಯೊಂದು ಮರವೇರಿ ಕುಳಿತು ಅರಣ್ಯ ಇಲಾಖೆಗೆ ಸೆರೆ ಸಿಕ್ಕಿದ ಪ್ರದೇಶದ ಸನಿಹದಲ್ಲೇ ಮತ್ತೊಂದು ಮೂರು ವರ್ಷದ ಗಂಡು ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯು ಯಶಸ್ಸು ಕಂಡಿದೆ.
ತಾಲ್ಲೂಕಿನ ಕಳ್ಳಿಕೊಪ್ಪಲು ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ಹಸುವೊಂದನ್ನು ಚಿರತೆಯೂ ತಿಂದು ಜೀವ ತೆಗೆದಿದ್ದು, ಇದರಿಂದ ಬೇಸರಗೊಂಡ ಗ್ರಾಮಸ್ಥರ ದೂರಿನ ಅನ್ವಯ ಅರಣ್ಯ ಇಲಾಖೆಯು ಬೋನಿಟ್ಟಿತ್ತು.
ಚಿರತೆಯು ಎಂದಿನಂತೆ ಆಹಾರ ಹುಡುಕುತ್ತಾ ಬಂದಾಗ ಬೋನಿಗೆ ಬಂಧಿಯಾಗಿದೆ. ಚಿರತೆಯೂ ಬಂಧಿಯಾದ ತಕ್ಷಣ ಮಾಹಿತಿ ತಿಳಿದ ಗ್ರಾಮಸ್ಥರು ತಂಡೋಪ ತಂಡವಾಗಿ ಆಗಮಿಸಿ ಚಿರತೆ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಕೂಗಾಟ ಹೆಚ್ಚಿದ್ದರಿಂದ ಗ್ರಾಮಾಂತರ ಠಾಣೆಗೆ ಪ್ರಕರಣ ದಾಖಲಿಸಿ ಪಿಎಸ್‍ಐ ಆನಂದ್ ನೇತೃತ್ವದಲ್ಲಿ ಬೋನ್ ಅನ್ನು ಹುಣಸೂರು ಪ್ರಾದೇಶಿಕ ಅರಣ್ಯ ಇಲಾಖಾ ಕಛೇರಿ ಬಳಿ ತರಲಾಯಿತು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ನಾಗರಹೊಳೆ ಅರಣ್ಯಕ್ಕೆ ಬಿಡಲಾಯಿತು.
ಒಂದೇ ಪ್ರದೇಶದಲ್ಲಿ 3 ಚಿರತೆ : ಇದೇ ಪ್ರದೇಶದಲ್ಲಿ 15 ದಿನಗಳ ಹಿಂದೆ ಗ್ರಾಮಸ್ಥರು ಹಾಗೂ ಬೀದಿ ನಾಯಿಗಳಿಗೆ ಕೂಗಾಟಕ್ಕೆ ಹೆದರಿ ಮರವೇರಿದ್ದ ಚಿರತೆಯೊಂದನ್ನು ಜೀವಂತ ಸೆರೆ ಹಿಡಿದು ಅರಣ್ಯ ಇಲಾಖೆಯೂ ಅರಣ್ಯಕ್ಕೆ ಬಿಟ್ಟಿದ್ದನ್ನು ಸ್ಮರಿಸಬಹುದು. ವಿಶೇಷವೆಂದರೆ ಇದೇ ಪ್ರದೇಶದಲ್ಲಿ ಮತ್ತೊಂದು ಚಿರತೆ ಇದೆ ಎಂದು ಗ್ರಾಮಸ್ಥರು ತಿಳಿಸುತ್ತಿದ್ದು, ಅದರಂತೆ ಮತ್ತೆ ಚಿರತೆಗಾಗಿ ಬೋನಿಗೆ ಇಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ