ನಮ್ಮನ್ನು ಬಿಟ್ಟು ಹೋಗಬೇಡಿ ಸರ್; ಶಿಕ್ಷಕನ ಸುತ್ತುವರಿದು ಕಣ್ಣೀರಿಟ್ಟ ವಿದ್ಯಾರ್ಥಿಗಳು!

ಚೆನ್ನೈ: ತಮ್ಮ ಪ್ರೀತಿಯ ಶಿಕ್ಷಕ ವರ್ಗವಾಗಿ ಬೇರೆ ಶಾಲೆಗೆ ಹೋಗುವುದು ಅವರಿಗೆ ಇಷ್ಟವಿರಲಿಲ್ಲ. ಶಾಲೆಯಿಂದ ಹೊರಟು ನಿಂತ ಆ ಶಿಕ್ಷಕನನ್ನು ವಿದ್ಯಾರ್ಥಿಗಳೆಲ್ಲರೂ ಸುತ್ತುವರಿದು, ಸರ್, ನಮ್ಮನ್ನು ಬಿಟ್ಟು ಹೋಗಬೇಡಿಎಂದು ಕಣ್ಣೀರಿಟ್ಟರು.  ವಿದ್ಯಾರ್ಥಿಗಳ ಸ್ನೇಹಬಂಧನದಲ್ಲಿ ಸಿಲುಕಿದ ಆ ಶಿಕ್ಷಕನ ಕಣ್ಣಲ್ಲಿಯೂ ನೀರು. ತಮಿಳುನಾಡಿನ ತಿರುವಳ್ಳೂರ್‍‍ನ ವೆಲಿಯಗರಂ ಸರ್ಕಾರಿ ಶಾಲೆಯಲ್ಲಿನ ವಿದ್ಯಾರ್ಥಿಗಳ ಈ ಪ್ರೀತಿಯ ಬಗ್ಗೆ ವರದಿಯಾಗಿದೆ.

ಜಿ. ಭಗವಾನ್ ಎಂಬ 28ರ ಹರೆಯದ ಇಂಗ್ಲಿಷ್ ಅಧ್ಯಾಪಕನಿಗೆ ಮುತ್ತಿಗೆ ಹಾಕಿ ವಿದ್ಯಾರ್ಥಿಗಳು ಈ ರೀತಿ ಕಣ್ಣೀರಿಟ್ಟಿದ್ದಾರೆ. ವಿದ್ಯಾರ್ಥಿಗಳ ಪ್ರೀತಿಗೆ ಭಾವುಕನಾಗಿ ಹೊರಡುತ್ತಿರುವ ಅಧ್ಯಾಪಕನನ್ನು ವಿದ್ಯಾರ್ಥಿಗಳು ಅಪ್ಪಿ ಹಿಡಿದಿರುವ ಚಿತ್ರವನ್ನು ತಮಿಳುನಾಡಿನ ಪತ್ರಿಕೆಗಳು ಮತ್ತು ಸುದ್ದಿವಾಹಿನಿ ಪುದಿಯ ತಲಮುರೈ ಪ್ರಸಾರ ಮಾಡಿತ್ತು.

ಜಿ. ಭಗವಾನ್ ಅವರಿಗೆ ತಿರುತ್ತಾಣಿ ಬಳಿಯ ಆರುಂಗುಲಮ್ ಸರ್ಕಾರಿ ಹೈಸ್ಕೂಲ್‍ಗೆ ವರ್ಗವಾಗಿದೆ. ಆದರೆ ಸದ್ಯ ಈ ಆದೇಶವನ್ನು 10 ದಿನದಳ ಕಾಲ ತಡೆಹಿಡಿದಿದ್ದು, ವರ್ಗಾವಣೆಯಾಗಿ ಹೊಸ ಶಾಲೆಗೆ ಹೋಗಬೇಕೇ ? ಬೇಡವೇ? ಎಂಬುದನ್ನು ನಿರ್ಧರಿಸಲಾಗುವುದು.

ಈ ಬಗ್ಗೆ ದ ನ್ಯೂಸ್ ಮಿನಿಟ್ ಜತೆ ಮಾತನಾಡಿದ ಭಗವಾನ್, ಇದು ನನ್ನ ಮೊದಲ ಕೆಲಸ ಆಗಿತ್ತು. 2014ರಲ್ಲಿ ನಾನು ಈ ಹೈಸ್ಕೂಲ್‍ಗೆ ಶಿಕ್ಷಕನಾಗಿ ಬಂದಿದ್ದೆ. ಇಲ್ಲಿನ ವಿದ್ಯಾರ್ಥಿ-ಶಿಕ್ಷಕರ ಅನುಪಾತ ನೋಡಿದರೆ ನಾನು ಹೆಚ್ಚುವರಿ ಅಧ್ಯಾಪಕನಾಗಿದ್ದೆ.  ಹಾಗಾಗಿ ಶಿಕ್ಷಕರ ಕೊರತೆ ಇರುವ ಶಾಲೆಗೆ ನನ್ನನ್ನು ವರ್ಗ ಮಾಡಲು ತೀರ್ಮಾನಿಸಿದ್ದು, ತಿರುತ್ತಾಣಿ ಶಾಲೆಗೆ ವರ್ಗಾವಣೆ ಆದೇಶ ಸಿಕ್ಕಿತ್ತು.

ಭಗವಾನ್ ಅವರು 6-10ನೇ ತರಗತಿಯ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಸುತ್ತಾರೆ. ಜೂನ್ 12ರಿಂದ ಜೂನ್ 21ರ ವರೆಗೆ ನಡೆದ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್‍ನಲ್ಲಿ ಭಾಗವಹಿಸಿದ್ದ ಅವರು ಆರುಂಗುಲಂ ಪ್ರದೇಶದಲ್ಲಿನ ಶಾಲೆಯನ್ನು ಆಯ್ಕೆ ಮಾಡಿದ್ದರು.

ಏತನ್ಮಧ್ಯೆ, ತಮ್ಮ ಪ್ರೀತಿಯ ಶಿಕ್ಷಕ ವರ್ಗವಾಗಿ ಹೋಗುತ್ತಿದ್ದಾರೆ ಎಂಬ ವಿಷಯ ಅರಿತ ಕೂಡಲೇ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ. ಭಗವಾನ್ ಅವರನ್ನು ವರ್ಗಾವಣೆ ಮಾಡಿರುವುದನ್ನು ಖಂಡಿಸಿ ಮಂಗಳವಾರ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗದೆ ಪ್ರತಿಭಟಿಸಿದ್ದರು. ವಿದ್ಯಾರ್ಥಿಗಳ ಪೋಷಕರೂ ಇದಕ್ಕೆ ಬೆಂಬಲ ನೀಡಿದ್ದರು.
ಇಲ್ಲಿಂದ ಹೋಗಬೇಡಿ ಎಂದು ಮಕ್ಕಳು ನನ್ನನ್ನು ಅಪ್ಪಿ ಹಿಡಿದು, ಕಾಲಿಗೆ ಬಿದ್ದು ಅತ್ತಿದ್ದರು. ಇದನ್ನು ನೋಡಿ ನಾನೂ ಭಾವುಕನಾದೆ. ಆಮೇಲೆ ಅವರೆಲ್ಲರನ್ನೂ ಹತ್ತಿರ ಕರೆದು ಕೂರಿಸಿ ಕೆಲವು ದಿನಗಳ ನಂತರ ನಾನು ವಾಪಸ್ ಬರುವುದಾಗಿ ಹೇಳಿದೆ ಅಂತಾರೆ ಭಗವಾನ್.

ಇಲ್ಲಿಯವರೆಗೆ ಹಲವಾರು ಅಧ್ಯಾಪಕರು ಇಲ್ಲಿ ಬಂದು ವರ್ಗವಾಗಿ ಹೋಗಿದ್ದಾರೆ. ಆದರೆ ಅವರು ಹೋಗುವಾಗ ನಮಗೆ ಬೇಸರವಾಗಿರಲಿಲ್ಲ ಎಂದು ಅಲ್ಲಿನ ವಿದ್ಯಾರ್ಥಿಗಳು ಹೇಳಿದ್ದಾರೆ.

ಮಕ್ಕಳಿಗೆ ನೀವೆಂದರೆ ಅಷ್ಟೊಂದು ಅಕ್ಕರೆ ಯಾಕೆ ಎಂದು ಕೇಳಿದಾಗ ಭಗವಾನ್ ಉತ್ತರಿಸಿದ್ದು ಹೀಗೆ, “ಶೈಕ್ಷಣಿಕ ವಿಷಯದಳ ಹೊರತಾಗಿಯೂ ವಿದ್ಯಾರ್ಥಿಗಳೊಂದಿಗೆ ಉತ್ತಮ ರೀತಿಯ ಸಂವಾದ ನಡೆಸಲು ನಾನು ಶ್ರಮಿಸಿದ್ದೇನೆ. ನಾನು ಅವರು ಕುಟುಂಬ ಹಿನ್ನೆಲೆ ಅರಿತು ಅವರಿಗೆ ಆಸಕ್ತಿ ಹುಟ್ಟುವಂತೆ ನಾನು ಪಾಠ ಮಾಡುತ್ತಿದ್ದೆ. ಪ್ರಾಜೆಕ್ಟರ್ ಬಳಸಿ ಪಾಠಗಳನ್ನು ವಿವರಿಸುತ್ತಿದ್ದೆ. ಈ ರೀತಿಯ ಕಲಿಕೆ ಅವರಲ್ಲಿ ಹೆಚ್ಚಿನ ಆಸಕ್ತಿ ಹುಟ್ಟಿಸಿತ್ತು. ಕ್ಲಾಸಿನಲ್ಲಿ ಅಲ್ಲ ಸಿನಿಮಾ ಹಾಲ್‍ನಲ್ಲಿ ಕುಳಿತಂತೆ ಅವರಿಗೆ ಅನಿಸುತ್ತಿತ್ತು. ನಾನು ಹೊಸ ರೀತಿಯಾಗಿ ಕಲಿಸಿದ್ದರಿಂದ ಅವರಿಗೆ ನನ್ನೊಂದಿಗಿನ ಒಡನಾಟ ಹೆಚ್ಚು ಹಿಡಿಸಿದೆ. ನಾನು ಅಧ್ಯಾಪಕ ಮಾತ್ರ ಅಲ್ಲ, ನಾನು ಅವರ ಗೆಳೆಯ, ಸಹೋದರ ಆಗಿದ್ದೆ”.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ