ಕಾಶ್ಮೀರದಲ್ಲಿ ಉಗ್ರರ ಮಟ್ಟ ಹಾಕಲು ಸುಲಭವಾಯಿತು ಎಂದ ಪೊಲೀಸ್ ವರಿಷ್ಠರು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿನ ರಾಜಕೀಯ ಬಿಕ್ಕಟ್ಟಿನಿಂದಾಗಿ ರಾಷ್ಟ್ರಪತಿ ಆಡಳಿತ ಹೇರಲಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಶ್ಮೀರ ಪೊಲೀಸ್ ವರಿಷ್ಠಾಧಿಕಾರಿ ಎಸ್ ಪೈ ವೈದ್ ಅವರು, ನಮ್ಮ ಕಾರ್ಯಾಚರಣೆ ಸುಲಭವಾಯಿತು ಎಂದು ಹೇಳಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು, ಕಣಿವೆ ರಾಜ್ಯದಲ್ಲಿ ಇನ್ನು ಯಾವುದೇ ಕಾರಣಕ್ಕೂ ಉಗ್ರ ನಿಗ್ರಹ ಕಾರ್ಯಾಚರಣೆ ನಿಲ್ಲುವುದಿಲ್ಲ. ರಾಜ್ಯದ ಪೊಲೀಸರು ನಿರಾತಂಕವಾಗಿ ಕೆಲಸ ಮಾಡಲಿದ್ದಾರೆ ಎಂದು ಹೇಳುವ ಮೂಲಕ ಕಾಶ್ಮೀರ ಪೊಲೀಸ್ ವರಿಷ್ಠಾಧಿಕಾರಿ ಎಸ್ ವೈದ್ ಮುಫ್ತಿ ಸರ್ಕಾರದ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉಗ್ರರ ವಿರುದ್ಧದ ಕಾರ್ಯಾಚರಣೆ ಇನ್ನು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ, ರಂಜಾನ್ ನಿಮಿತ್ತ ಕದನ ವಿರಾಮ ಘೋಷಣೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಯಾವುದೇ ರೀತಿಯ ಕಾರ್ಯಾಚರಣೆ ಕೈಗೊಳ್ಳದಂತೆ ನಮಗೆ ಸರ್ಕಾರದಿಂದ ಸೂಚನೆ ಇತ್ತು. ಆದರೆ ಈಗ ರಂಜಾನ್ ಮುಕ್ತಾಯವಾಗಿದ್ದು, ಇನ್ನು ಯಾವುದೇ ಕಾರಣಕ್ಕೂ ಉಗ್ರ ನಿಗ್ರಹ ಕಾರ್ಯಾಚರಣೆ ನಿಲ್ಲುವುದಿಲ್ಲ. ಬದಲಿಗೆ ಮತ್ತಷ್ಟು ಗಂಭೀರವಾಗಿ ಕಾರ್ಯಾಚರಣೆ ನಡೆಸಲಾಗುತ್ತದೆ. ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆ ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.

ರಾಷ್ಟ್ರಪತಿ ಆಡಳಿತ ಖಂಡಿತಾ ಕಣಿವೆ ರಾಜ್ಯದಲ್ಲಿ ಪರಿಣಾಮ ಬೀರಲಿದೆ. ಪೊಲೀಸರು ಮತ್ತು ಸೇನೆ ಪರಿಣಾಮಕಾರಿಯಾಗಿ ಕೆಲಸ ಮಾಡಲಿದ್ದಾರೆ. ಕಾಶ್ಮೀರದಲ್ಲಿನ ಭದ್ರತಾ ಪರಿಸ್ಛಿತಿ ಖಂಡಿತಾ ಮುಂದಿನ ದಿನಗಳಲ್ಲಿ ಸುಧಾರಣೆಯಾಗಲಿದೆ ಎಂದು ವೈದ್ ಅಭಿಪ್ರಾಯಪಟ್ಟಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ