ಮಂತ್ರಿಮಂಡಲ ರಚನೆಯಲ್ಲಿ ಸಮತೋಲನ ಕಾಪಾಡಿಲ್ಲ – ಒಕ್ಕಗಲಿರ ರಾಜಕೀಯ ವೇದಿಕೆ

 

ಬೆಂಗಳೂರು,ಜೂ.20-ಬಸವರಾಜ ಹೊರಟ್ಟಿ ಅವರನ್ನು ಸಚಿವರನ್ನಾಗಿಸದೆ ಅವರ ಹಿರಿತನ ಮತ್ತು ಅನುಭವವನ್ನು ಬಳಸಿಕೊಂಡು ಮಂತ್ರಿ ಮಂಡಲದ ಘನತೆಯನ್ನು ಹೆಚ್ಚಿಸಿಕೊಳ್ಳುವ ಅವಕಾಶದಿಂದ ಸರ್ಕಾರ ವಂಚಿತವಾಗಿದೆ ಎಂದು ರಾಜ್ಯ ಒಕ್ಕಗಲಿರ ರಾಜಕೀಯ ವೇದಿಕೆ ಸಂಚಾಲಕ ಬಿ.ಎನ್.ಮುನಿಯಪ್ಪ ಅಭಿಪ್ರಾಯಪಟ್ಟಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಆಡಳಿತ ನಡೆಸುತ್ತಿರುವ ಸಮ್ಮಿಶ್ರ ಸರ್ಕಾರದಲ್ಲಿನ ಮಂತ್ರಿ ಮಂಡಲದ ಸದಸ್ಯರನ್ನು ಗಮನಿಸಿದಾಗ ಮಂತ್ರಿಮಂಡಲ ರಚನೆಯಲ್ಲಿ ಸಮತೋಲನ ಕಾಪಾಡಿಲ್ಲ ಎಂಬುದು ತಿಳಿದುಬರುತ್ತದೆ. ಏಳು ಬಾರಿ ವಿಧಾನಪರಿಷತ್ ಸದಸ್ಯರಾಗಿ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಹೊರಟ್ಟಿ ಅವರು, ನಾಲ್ಕು ದಶಕಗಳ ಕಾಲ ಪರಿಷತ್‍ನಲ್ಲಿ ತಮ್ಮದೇ ಆದ ಹೋರಾಟ ಮಾಡುತ್ತಾ ಸಕಾರಾತ್ಮಕವಾಗಿ ವಿಷಯಗಳನ್ನು ಪ್ರಸ್ತಾಪಿಸಿ ಸಾರ್ವಜನಿಕ ಕ್ಷೇತ್ರದಲ್ಲಿ ಗೌರವಕ್ಕೆ ಪಾತ್ರರಾಗಿದ್ದಾರೆ. ಅಂತಹವರನ್ನು ಮಂತ್ರಿಮಂಡಲಕ್ಕೆ ತೆಗೆದುಕೊಳ್ಳದಿರುವುದು ಅವರ ಹಿರಿತನ ಮತ್ತು ಅನುಭವಕ್ಕೆ ಮಾಡಿದ ಅಪಮಾನ ಎನ್ನುವುದಕ್ಕಿಂತ ತಮ್ಮ ಮಂತ್ರಿಮಂಡಲದ ಘನತೆ ಹೆಚ್ಚಿಸಿಕೊಳ್ಳುವ ಅವಕಾಶವನ್ನು ಸರ್ಕಾರವೇ ಬಳಸಿಕೊಂಡಿಲ್ಲ ಎಂದು ಹೇಳಿದರು.
ಇನ್ನು ಮುಂದಾದರೂ ಆಗಿರುವ ತಪ್ಪನ್ನು ಸರಿಪಡಿಸುವ ಸಲುವಾಗಿ ಹೊರಟ್ಟಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಅವರ ಅನುಭವವನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ