ಗೌರಿ ಲಂಕೇಶ್ ಹತ್ಯೆಗೈದ ಸಂಘಟನೆಯಿಂದ ನಾಲ್ವರು ಪ್ರಗತಿಪರರ ಕೊಲೆಗೆ ಸಂಚು: ಭದ್ರತೆ ನೀಡಲು ಗೃಹ ಇಲಾಖೆಗೆ ಪತ್ರ

 

ಬೆಂಗಳೂರು, ಜೂ.19- ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆಗೈದ ಸಂಘಟನೆಯು ನಾಲ್ವರು ಪ್ರಗತಿಪರರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದು ತಕ್ಷಣವೇ ಅವರಿಗೆ ಹೆಚ್ಚಿನ ಭದ್ರತೆ ನೀಡಬೇಕೆಂದು ವಿಶೇಷ ತನಿಖಾ ದಳ (ಎಸ್‍ಐಟಿ) ಗೃಹ ಇಲಾಖೆಗೆ ಪತ್ರ ಬರೆದಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಹಾಗೂ ನಟ ಗಿರೀಶ್ ಕಾರ್ನಾಡ್ , ಸಾಹಿತಿಗಳಾದ ಕೆ.ಎಸ್.ಭಗವಾನ್, ನರೇಂದ್ರ ನಾಯಕ್ ಹಾಗೂ ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅವರುಗಳನ್ನು ಹತ್ಯೆಗೈಯಲು ಸಂಚು ರೂಪಿಸಿರುವುದನ್ನು ಎಸ್‍ಐಟಿ ಪತ್ತೆ ಹಚ್ಚಿದೆ.
ಈ ನಾಲ್ವರಿಗೆ ತಕ್ಷಣವೇ ಗೃಹ ಇಲಾಖೆಯು ಪ್ರತಿಯೊಬ್ಬರಿಗೂ ನಾಲ್ವರು ಶಸ್ತ್ರಸಜ್ಜಿತ ಭದ್ರತಾ ಪಡೆಯವರನ್ನು ಒದಗಿಸುವುದು ಹಾಗೂ ಇವರ ಕಚೇರಿ ಮತ್ತು ನಿವಾಸಗಳಿಗೆ ಸಿಸಿ ಟಿವಿ ಅಳವಡಿಕೆ, ಹೋಗಿ ಬರುವ ಸ್ಥಳಗಳಿಗೆ ಎಸ್ಕಾರ್ಟ್ (ಬೆಂಗಾವಲು ರಕ್ಷಣೆ) ನೀಡುವಂತೆಯೂ ಗೃಹ ಇಲಾಖೆಗೆ ಎಸ್‍ಐಟಿ ಮನವಿ ಮಾಡಿದೆ.

ಹಿಂದೂ ಧರ್ಮದ ವಿರೋಧಿಗಳಾದ ನಾಲ್ವರನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು ಎಂದು ಗೌರಿ ಲಂಕೇಶ್ ಹತ್ಯೆಯ ಪ್ರಮುಖ ರೂವಾರಿ ಎನ್ನಲಾದ ಪರಶುರಾಮ್ ವಾಗ್ಮೋರೆ ಎಸ್‍ಐಟಿ ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದಾನೆ ಎಂದು ತಿಳಿದು ಬಂದಿದೆ.
ಎಸ್‍ಐಟಿ ಬರೆದಿರುವ ಪತ್ರವನ್ನು ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು , ದುಷ್ಕರ್ಮಿಗಳ ಹಿಟ್‍ಲಿಸ್ಟ್‍ನಲ್ಲಿರುವ ನಾಲ್ವರಿಗೆ ಭದ್ರತೆ ಹೆಚ್ಚಿಸಲು ಮುಂದಾಗಿದೆ.
2017 ಸೆಪ್ಟೆಂಬರ್ 5ರಂದು ಗೌರಿ ಹತ್ಯೆ ಮಾಡಿದ ಬಳಿಕ ಗಿರೀಶ್ ಕಾರ್ನಾಡ್, ಕೆ.ಎಸ್.ಭಗವಾನ್, ನರೇಂದ್ರ ನಾಯಕ್ ಮತ್ತು ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅವರನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು. ಮೊದಲು ಗೌರಿಯನ್ನು ಮುಗಿಸಿದ ಬಳಿಕ ಈ ನಾಲ್ವರ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲಾಗಿತ್ತು ಎಂದು ಬಾಯಿ ಬಿಟ್ಟಿದ್ದಾನೆ.
ಮಹಾರಾಷ್ಟ್ರ ತಂಡ ಕರ್ನಾಟಕಕ್ಕೆ?: ಇನ್ನು ಮಹಾರಾಷ್ಟ್ರದಲ್ಲಿ ಕೊಲೆಯಾದ ಚಿಂತಕ ನರೇಂದ್ರ ದಾವೋಲ್ಕರ್ ಹಾಗೂ ಪನ್ಸಾರಿ ಅವರ ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಮಹಾರಾಷ್ಟ್ರದ ಎಸ್‍ಐಟಿ ತಂಡ ಪರಶುರಾಮ್ ವಾಗ್ಮೋರೆಯನ್ನು ವಶಕ್ಕೆ ಪಡೆಯಲು ಬೆಂಗಳೂರಿಗೆ ಆಗಮಿಸಲಿದೆ ಎಂದು ತಿಳಿದು ಬಂದಿದೆ.
ಗೌರಿ ಲಂಕೇಶ್, ಎಂ.ಎಂ.ಕಲ್ಬುರ್ಗಿ, ನರೇಂದ್ರ ದಾಬೋಲ್ಕರ್ ಹಾಗೂ ಗೋವಿಂದ ಪನ್ಸಾರೆ ಹತ್ಯೆಗಳು ಒಂದಕ್ಕೊಂದು ಸಾಮ್ಯತೆ ಪಡೆಯುತ್ತಿರುವುದರಿಂದ ನಿರ್ದಿಷ್ಟ ಸಂಘಟನೆಯವರೇ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಹೀಗಾಗಿ ಮಹಾರಾಷ್ಟ್ರದ ಪುಣೆಯ ಕಾನೂನು ಸುವ್ಯವಸ್ಥೆ ವಿಭಾಗದ ಮುಖ್ಯಸ್ಥರೂ ಹಾಗೂ ದಾವೋಲ್ಕರ್ ಮತ್ತು ಪನ್ಸಾರೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‍ಐಟಿ ಮುಖ್ಯಸ್ಥರು ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಇದೊಂದು ಅಂತರಾಜ್ಯ ಪ್ರಕರಣವಾಗಿರುವುದರಿಂದ ಪರಶುರಾಮ್ ವಾಗ್ಮೋರೆಯಿಂದ ಹೆಚ್ಚಿನ ಮಾಹಿತಿ ಕಲೆ ಹಾಕಬೇಕಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಎಸ್‍ಐಟಿ ತಂಡ ವಶಕ್ಕೆ ಪಡೆಯಲು ಮುಂದಾಗಿದೆ.
ಆದರೆ ಎಸ್‍ಐಟಿ ವಶದಲ್ಲಿರುವ ಪರಶುರಾಮ್ ವಾಗ್ಮೋರೆಯಿಂದ ಹೆಚ್ಚಿನ ಮಾಹಿತಿ ಕಲೆ ಹಾಕಿ ತನಿಖೆ ಪೂರ್ಣಗೊಳ್ಳುವವರೆಗೂ ಆತನನ್ನು ಬೇರೆ ಯಾವ ತನಿಖಾ ಸಂಸ್ಥೆಗೂ ವಹಿಸದಂತೆ ಆದೇಶ ನೀಡಬೇಕೆಂದು ಎಸ್‍ಐಟಿ ನ್ಯಾಯಾಲಯಕ್ಕೆ ಮನವಿ ಮಾಡಲು ಮುಂದಾಗಿದೆ.
ಪರಶುರಾಮ್ ವಾಗ್ಮೋರೆ ಬೇರೊಂದು ರಾಜ್ಯದ ತನಿಖಾ ತಂಡಕ್ಕೆ ನೀಡಿದರೆ ಇಡೀ ತನಿಖೆಯೇ ದಿಕ್ಕು ತಪ್ಪುತ್ತದೆ. ಹಾಗಾಗಿ ಯಾರೊಬ್ಬರಿಗೂ ನೀಡಬಾರದೆಂದು ಎಸ್‍ಐಟಿ ಮುಖ್ಯಸ್ಥರು ಮನವಿ ಮಾಡಿಕೊಳ್ಳಲಿದ್ದಾರೆ.
ಮತ್ತೊಂದೆಡೆ ಮಹಾರಾಷ್ಟ್ರದ ಸಿಬಿಐ ತಂಡವು ಪರಶುರಾಮ್ ವಾಗ್ಮೋರೆಯನ್ನು ವಶಕೆ ಪಡೆಯಲು ಈಗಾಗಲೇ ಬೆಂಗಳೂರಿನಲ್ಲಿ ಬೀಡು ಬಿಟ್ಟಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ