ಅಂತರ್ಜಲ ಪುನಶ್ಚೇತ£ಕ್ಕೆ ವಿಶೇಷ ಕಾರ್ಯಕ್ರಮ: ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು

 

ಬೆಂಗಳೂರು, ಜೂ.16- ರಾಜ್ಯದಲ್ಲಿ ಕುಸಿಯುತ್ತಿರುವ ಅಂತರ್ಜಲವನ್ನು ಪುನಶ್ಚೇತನಗೊಳಿಸಲು ವಿಶೇಷ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತರ್ಜಲ ಹೆಚ್ಚಳ ಮಾಡಲು ರಾಜ್ಯಾದ್ಯಂತ ಹೊಸ ರೂಪದ ಕಾರ್ಯಕ್ರಮವನ್ನು ಜಾರಿಗೆ ತರುವ ಉದ್ದೇಶವಿದೆ ಎಂದರು.

ರಾಜಸ್ಥಾನದಲ್ಲಿ ಅಂತರ್ಜಲ ಹೆಚ್ಚಳಕ್ಕೆ ಅತ್ಯುತ್ತಮ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಇದೇ ರೀತಿ ಇತರೆ ಹಲವು ರಾಜ್ಯಗಳಲ್ಲಿ ಅನುಷ್ಠಾನದಲ್ಲಿರುವ ಅಂತರ್ಜಲ ಪುನಶ್ಚೇತನದ ಕಾರ್ಯಕ್ರಮಗಳ ಬಗ್ಗೆ ರಾಜ್ಯ ಮಟ್ಟದ ಅಧಿಕಾರಿಗಳ ತಂಡವನ್ನು ಅಧ್ಯಯನಕ್ಕಾಗಿ ಕಳುಹಿಸಲಾಗುವುದು. ಅಧ್ಯಯನ ತಂಡದ ವರದಿಯನ್ನು ಆಧರಿಸಿ ಅಂತರ್ಜಲ ಹೆಚ್ಚಳಕ್ಕೆ ಪೂರಕವಾದ ಕಾರ್ಯಕ್ರಮ ರೂಪಿಸಲಾಗುವುದು ಎಂದು ತಿಳಿಸಿದರು.
ರೈತಪರವಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸಣ್ಣ ನೀರಾವರಿ ಉತ್ತಮವಾದ ಇಲಾಖೆಯಾಗಿದೆ. ಇಡೀ ರಾಜ್ಯದಲ್ಲಿ ನೀರಿನ ಬವಣೆ ಹೆಚ್ಚಾಗಿದ್ದು, ಅಂತರ್ಜಲ ಮಟ್ಟವೂ ಕುಸಿದಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವಂತಹ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುವುದು ಎಂದರು.

ಚುನಾವಣಾ ಪೂರ್ವದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ತಾವು ಅಲ್ಲಿನ ನೀರು ನಿರ್ವಹಣೆ, ಬೆಳೆ ಪದ್ಧತಿಗಳ ಬಗ್ಗೆ ಅಧ್ಯಯನ ಮಾಡಿದ್ದೇವೆ. ನೀರಿನ ಮಿತ ಬಳಕೆ, ಹನಿ ನೀರಾವರಿ ಸೇರಿದಂತೆ ಹಲವು ಪದ್ದತಿಗಳನ್ನು ಇಸ್ರೇಲ್‍ನಲ್ಲಿ ಬಳಸಲಾಗುತ್ತಿದೆ. ಅಲ್ಲಿನ ತಂತ್ರಜ್ಞಾನವನ್ನು ನಮ್ಮ ರಾಜ್ಯದಲ್ಲೂ ಅಳವಡಿಸಿಕೊಳ್ಳುವ ಬಗ್ಗೆ ಪೂರಕವಾದ ಯೋಜನೆಗಳನ್ನು ರೂಪಿಸಲಾಗುವುದು ಎಂದು ಹೇಳಿದರು.
ಕೆರೆಗಳ ಹೂಳೆತ್ತುವುದು, ಹೊಸ ಕೆರೆ ನಿರ್ಮಾಣ, ಬ್ಯಾರೇಜ್ ನಿರ್ಮಾಣಗಳಿಗೂ ಒತ್ತು ನೀಡಲಾಗುವುದು ಎಂದ ಸಚಿವರು, ರಾಜ್ಯದಲ್ಲಿರುವ 400 ಏತ ನೀರಾವರಿ ಯೋಜನೆಗಳಲ್ಲಿ 183 ಯೋಜನೆಗಳು ಸ್ಥಗಿತಗೊಂಡಿವೆ. ಸ್ಥಗಿತವಾಗಿರುವ ಏತ ನೀರಾವರಿ ಯೋಜನೆಗಳನ್ನು ತಕ್ಷಣವೇ ಸರಿ ಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 29ಸಾವಿರ ಕೆರೆಗಳಿದ್ದು, ಕಳೆದ ಸರ್ಕಾರ ಕೆರೆ ಅಭಿವೃದ್ಧಿ ಪ್ರಾಧಿಕಾರವನ್ನು ಅಸ್ತಿತ್ವಕ್ಕೆ ತಂದಿದೆ. ಪ್ರಾಧಿಕಾರದ ಮೂಲಕ ಕೆರೆಗಳ ಪುನಶ್ಚೇತನಕ್ಕೂ ಒತ್ತು ನೀಡಲಾಗುವುದು ಎಂದು ಪುಟ್ಟರಾಜು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ