ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಆಟಗಾರರಿಗೆ ಎನ್‌ಸಿಎನಲ್ಲಿ ಯೋ ಯೋ ಫಿಟ್‌ನೆಸ್‌ ಟೆಸ್ಟ್‌ ವಿರಾಟ್ ಪಾಸ್; ಅಂಬಟಿ ರಾಯುಡು ಫೇಲ್

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಶುಕ್ರವಾರ ಇಲ್ಲಿಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ನಡೆದ ಫಿಟ್‌ನೆಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಇದೇ ತಿಂಗಳು ಇಂಗ್ಲೆಂಡ್‌ ಪ್ರವಾಸಕ್ಕೆ ತೆರಳಲಿರುವ ಭಾರತ ತಂಡವನ್ನು ಅವರು ಮುನ್ನಡೆಸುವುದು ಖಚಿತವಾಗಿದೆ. ಆದರೆ, ಬ್ಯಾಟ್ಸ್‌ಮನ್ ಅಂಬಟಿ ರಾಯುಡು ಫಿಟ್‌ನೆಸ್‌ ಟೆಸ್ಟ್‌ ನಲ್ಲಿ ಅನುತ್ತೀರ್ಣರಾಗಿದ್ದಾರೆ.
‘ಅಂಬಟಿ ರಾಯುಡು ಅವರನ್ನು ಬಿಟ್ಟರೆ ಯೋ ಯೋ ಟೆಸ್ಟ್‌ಗೆ ಹಾಜರಾದ ಎಲ್ಲ ಆಟಗಾರರೂ ಪಾಸಾಗಿದ್ದಾರೆ. ಇಂಗ್ಲೆಂಡ್‌ನಿಂದ ಬಂದಿರುವ ಪರಿಣತರ ತಂಡವು ಪರೀಕ್ಷೆಯನ್ನು ನಡೆಸಿತು. ಅವರು ನಿಗದಿಪಡಿಸಿದ್ದ ಅರ್ಹತಾ ಮಟ್ಟವನ್ನು ಮುಟ್ಟುವಲ್ಲಿ ಅಂಬಟಿ ವಿಫಲರಾದರು.
ಭಾರತ ಮತ್ತು ಭಾರತ ‘ಎ’ ತಂಡಗಳಿಗೆ ಅರ್ಹತೆ ಗಳಿಸಲು 16.1 ಪಾಯಿಂಟ್‌ಗಳನ್ನು ಗಳಿಸಬೇಕಿತ್ತು. ಆದರೆ ಅಂಬಟಿ ಅವರಿಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಅವರನ್ನು ತಂಡದಿಂದ ಕೈಬಿಡಲಾಗಿದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂಬಟಿ ಅವರು ಒಂದೂವರೆ ವರ್ಷದ ನಂತರ ಏಕದಿನ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಈಚೆಗೆ ನಡೆದಿದ್ದ ಐಪಿಎಲ್ ಟೂರ್ನಿಯಲ್ಲಿ ಅವರು ಸಿಎಸ್‌ಕೆ ತಂಡದ ಪರ ಉತ್ತಮ ವಾಗಿ ಆಡಿದ್ದರು. ತಂಡವು ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ವಿರಾಟ್ ಕೊಹ್ಲಿ ಅವರು ಐಪಿಎಲ್‌ ನಲ್ಲಿ ಕತ್ತುನೋವಿನಿಂದ ಬಳಲಿದ್ದರು. ನಂತರ ಅವರು ಇಂಗ್ಲಿಷ್ ಕೌಂಟಿ ಕ್ರಿಕೆಟ್ ಟೂರ್ನಿಗೆ ಹೋಗುವುದನ್ನು ರದ್ದುಗೊಳಿಸಿದ್ದರು. ಬೆಂಗಳೂರಿನಲ್ಲಿ ಅಫ್ಗಾನಿಸ್ತಾನ ಎದುರು ನಡೆದ ಟೆಸ್ಟ್‌ ಪಂದ್ಯದಲ್ಲಿಯೂ ಅವರು ಆಡಿರಲಿಲ್ಲ.
ಮಹೇಂದ್ರಸಿಂಗ್ ದೋನಿ, ಭುವ ನೇಶ್ವರ್ ಕುಮಾರ್, ಕೇದಾರ್ ಜಾಧವ್, ಸುರೇಶ್ ರೈನಾ ಅವರೂ ಯೋ ಯೋ ಟೆಸ್ಟ್‌ನಲ್ಲಿ ಪಾಸಾದರು. ಹೋದ ವರ್ಷ ರೈನಾ ಮತ್ತು ಯುವರಾಜ್ ಸಿಂಗ್ ಅವರು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ ದ್ದರು.
ಜಸ್‌ಪ್ರೀತ್ ಬೂಮ್ರಾ, ಸಿದ್ಧಾರ್ಥ್ ಕೌಲ್, ವಾಷಿಂಗ್ಟನ್ ಸುಂದರ್,  ಯಜುವೇಂದ್ರ ಚಾಹಲ್, ಮನೀಷ್ ಪಾಂಡೆ ಅವರೂ ಪರೀಕ್ಷೆ ನೀಡಿದರು.
ಭಾರತ ತಂಡದ ಟ್ರೇನರ್ ಶಂಕರ್ ಬಸು ಕೂಡ ಈ ಸಂದರ್ಭದಲ್ಲಿ ಹಾಜರಿ ದ್ದರು. ಜೂನ್ 27ರಿಂದ 29ರವರೆಗೆ ಐರ್ಲೆಂಡ್‌ನಲ್ಲಿ ಟ್ವೆಂಟಿ–20 ಟೂರ್ನಿ, ಜುಲೈ ಮೂರರಿಂದ ಇಂಗ್ಲೆಂಡ್‌ನಲ್ಲಿ ಮೂರು ಟ್ವೆಂಟಿ–20, ಮೂರು ಏಕದಿನ ಮತ್ತು ಐದು ಟೆಸ್ಟ್‌ ಪಂದ್ಯಗಳನ್ನು ತಂಡವು ಆಡಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ