ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಸಭೆ: ಸಚಿವಾಕಾಂಕ್ಷಿಗಳು, ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವವರಿಂದÀ ಲಾಬಿ

 

ಬೆಂಗಳೂರು, ಜೂ.14- ಕಾಂಗ್ರೆಸ್‍ನಲ್ಲಿ ಸಚಿವಾಕಾಂಕ್ಷಿಗಳು, ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವವರ ಲಾಬಿ ತೀವ್ರಗೊಂಡಿದೆ.
ಇಂದು ಸಂಜೆ ನಡೆಯಲಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ ಪಕ್ಷದ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿರುವ ಕಾಂಗ್ರೆಸ್ ಶಾಸಕರು, ಸಚಿವಾಕಾಂಕ್ಷಿಗಳು ಅವರ ಮೇಲೆ ಒತ್ತಡ ತಂದಿದ್ದಾರೆ.
ಕೃಮಾರಕೃಪ ಅತಿಥಿಗೃಹದಲ್ಲಿರುವ ಅವರನ್ನು ಇಂದು ಭೇಟಿ ಮಾಡಿದ ಅನೇಕ ಹಿರಿಯ ಶಾಸಕರು ಇಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ನಮಗೆ ಅವಕಾಶ ಕೊಡಿಸಬೇಕೆಂದು ಆಗ್ರಹಿಸಿದ್ದಾರೆ.

ಅಲ್ಲದೆ, ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಸಮರ್ಥರನ್ನು ನೇಮಕ ಮಾಡಬೇಕು. ಲೋಕಸಭೆ ಚುನಾವಣೆ ಬರುತ್ತಿರುವುದರಿಂದ ಕೆಪಿಸಿಸಿ ಅಧ್ಯಕ್ಷಗಾದಿಗೆ ಸಮರ್ಥರನ್ನು ನೇಮಿಸುವ ಮೂಲಕ ಹೆಚ್ಚು ಸ್ಥಾನಗಳನ್ನು ಗೆಲ್ಲುವಂತೆ ನೋಡಿಕೊಳ್ಳಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.
ಮಾಜಿ ಸಚಿವರಾದ ತನ್ವೀರ್‍ಸೇಠ್, ಸತೀಶ್ ಜಾರಕಿಹೊಳಿ, ಪರಮೇಶ್ವರ್ ನಾಯಕ್, ವಿ.ಮುನಿಯಪ್ಪ , ಶಾಸಕ ಪಿ.ಎಸ್.ಶಿವಳ್ಳಿ ಮುಂತಾದವರು ಭೇಟಿ ಮಾಡಿ ಮಾತುಕತೆ ನಡೆಸಿದರು.

ಹಲವು ಶಾಸಕರು, ಪಕ್ಷದ ಮುಖಂಡರು ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕು, ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಶಾಸಕರಿಗೆ, ಪಕ್ಷದ ಕಾರ್ಯಕರ್ತರಿಗೆ ಅಧಿಕಾರ ನೀಡಬೇಕೆಂದು ಹಲವರು ಕೋರಿದರು.
ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ತನ್ವೀರ್‍ಸೇಠ್ ಅರ್ಹತೆ ಇಲ್ಲದವರಿಗೆ ಸಚಿವ ಸಂಪುಟದಲ್ಲಿ ಸ್ಥಾನಮಾನ ನೀಡಲಾಗಿದೆ. ರಾಜ್ಯಮಟ್ಟದ ನಮ್ಮ ಸಮುದಾಯದ ನಾಯಕತ್ವವನ್ನು ಪ್ರತಿನಿಧಿಸುವ ಗುಣಮಟ್ಟವಿಲ್ಲದ ಜಮೀರ್ ಅಹಮ್ಮದ್, ಯು.ಟಿ.ಖಾದರ್ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ನನ್ನನ್ನು ಸೋಲಿಸಲು ಪ್ರಯತ್ನ ಮಾಡಿದ ಜಮೀರ್ ಅಹಮ್ಮದ್ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನಮ್ಮ ಸಮುದಾಯವನ್ನು ಪ್ರತಿನಿಧಿಸಲು ಸಂಪುಟದಲ್ಲಿ ಇನ್ನೊಂದು ಸ್ಥಾನ ನೀಡಬೇಕೆಂದು ಹೈಕಮಾಂಡ್ ಗಮನಕ್ಕೆ ತರಲಾಗಿದೆ ಎಂದು ಅವರು ಹೇಳಿದರು.
ರಮೇಶ್ ಜಾರಕಿಹೊಳಿ ಮಾತನಾಡಿ, ಸತೀಶ ಜಾರಕಿಹೊಳಿ ಅವರು ಮೂರೂವರೆ ವರ್ಷ ಸಚಿವರಾಗಿದ್ದರು. ನಾನು ಎಂದೂ ಆಕ್ಷೇಪ ಎತ್ತಿರಲಿಲ್ಲ. ಅವರ ವಿರುದ್ಧ ಮಾತನಾಡಿರಲಿಲ್ಲ. ಅಣ್ಣ-ತಮ್ಮಂದಿರ ಸಮಸ್ಯೆಯಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್‍ಗೆ ಹಿನ್ನಡೆಯಾಗಿರಲಿಲ್ಲ. ಶಾಸಕರ ಸಂಖ್ಯೆ 6 ರಿಂದ 8ಕ್ಕೆ ಏರಿಕೆಯಾಗಿದೆ. ಲಕ್ಷ್ಮಿ ಹೆಬ್ಬಾಳ್ಕರ್ ನನ್ನ ವಿರುದ್ಧ ಲಾಬಿ ಮಾಡಿಲ್ಲ. ಅವರು ನನ್ನ ಪರವಾಗಿದ್ದಾರೆ. ಮಹಿಳೆಯರಿಗೆ ಕೊಡುವುದಾದರೆ ನನಗೆ ಕೊಡಿ. ಹಿರಿಯರಿಗೆ ಕೊಡುವುದಾದರೆ ರಮೇಶ್ ಜಾರಕಿಹೊಳಿ ಅವರಿಗೆ ಕೊಡಿ ಎಂದು ಹೇಳಿದ್ದಾರೆ. ಉಳಿದದ್ದೆಲ್ಲ ಮಾಧ್ಯಮಗಳ ಸೃಷ್ಟಿ ಎಂದು ಹೇಳಿದರು.

ಶಾಸಕ ವಿ.ಮುನಿಯಪ್ಪ ಮಾತನಾಡಿ, ನನಗೆ ಎರಡನೆ ಬಾರಿ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ ಎಂದು ಹೇಳಿದರು.
ಕುಂದಗೋಳು ಶಾಸಕ ಸಿ.ಎಸ್.ಶಿವಳ್ಳಿ ಮಾತನಾಡಿ, ನನಗೆ ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲೇ ಸ್ಥಾನ ಸಿಗಬೇಕಿತ್ತು, ಸಿಕ್ಕಿಲ್ಲ. ಮುಂದಿನ ಸಂಪುಟ ವಿಸ್ತರಣೆಯಲ್ಲಿ ಸಿಗಬೇಕು. ಈ ಸಂಬಂಧ ಉತ್ತರ ಕರ್ನಾಟಕ ಭಾಗದ ಜನ ಬೇಡಿಕೆ ಇಟ್ಟಿದ್ದಾರೆ. ನಮ್ಮ ಸಮುದಾಯಕ್ಕೆ ಅವಕಾಶ ನೀಡಿ ಎಂದು ವೇಣುಗೋಪಾಲ್ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಹೇಳಿದರು.

ಕುರುಬ ಸಮುದಾಯದಲ್ಲಿ , ಹಿಂದುಳಿದ ವರ್ಗದವರಲ್ಲಿ ಸಿದ್ದರಾಮಯ್ಯನವರು ಪ್ರಶ್ನಾತೀತ ನಾಯಕರು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಸಂಪುಟದಲ್ಲಿ ಅವಕಾಶ ಕೊಡಿ. ನಾನು ಕೆಲಸ ಮಾಡಿ ತೋರಿಸುತ್ತೇನೆ ಎಂದು ಹೇಳಿದ್ದೇನೆ ಎಂದರು.
ಮಾಜಿ ಮೇಯರ್ ಹುಚ್ಚಪ್ಪ , ನಾಗರಾಜ್ ಯಾದವ್, ಸುಧೀಂದ್ರ, ಮನೋಹರ್ ಮುಂತಾದ ಕಾಂಗ್ರೆಸ್ ಮುಖಂಡರು, ನಿಗಮ-ಮಂಡಳಿಗಳ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಪಕ್ಷಕ್ಕಾಗಿ ನಾವು ದುಡಿದಿದ್ದೇವೆ. ನಮ್ಮನ್ನು ಪರಿಗಣಿಸುವಂತೆ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ