ಮಕ್ಕಳಿಗೆ ರಕ್ಷಣೆ, ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿ

 

ಶಿರಸಿ: ಮಕ್ಕಳ ಬೆಳವಣಿಗೆಗೆ ಪೂರಕವಾದ ಸೌಲಭ್ಯವನ್ನು ಪಡೆಯಲು ಸಂವಿಧಾನಾತ್ಮಕವಾಗಿ ಹಕ್ಕುಳ್ಳವರಾಗಿರುತ್ತಾರೆ. ಮಕ್ಕಳಿಗೆ ರಕ್ಷಣೆ ಮತ್ತು ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದ್ದು ಶಿಕ್ಷಣದಿಂದ ವಂಚಿತರಾಗಿ ಬಾಲ ಕಾರ್ಮಿಕರಾಗಿರುವುದನ್ನು ತಡೆಯಬೇಕು ಎಂದು 1ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ಶಾಂತವೀರ ಶಿವಪ್ಪ ಹೇಳಿದರು.

ಅವರು ಇಂದು ಸ್ಥಳೀಯ ವಕೀಲರ ಸಂಘದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಅವರು ಮುಂದುವರೆದು ಮಾತನಾಡುತ್ತಾ ಬಾಲ ಕಾರ್ಮಿಕರನ್ನಾಗಿ ನೇಮಿಸಿಕೊಳ್ಳೂವುದು ಕಾನೂನಿನ ದೃಷ್ಟಿಯಲ್ಲಿ ಅಪರಾಧವಾಗಿದ್ದು ಬಾಲ ಕಾರ್ಮಿಕರ ನಿರ್ಮೂಲನೆಗೆ ಎಲ್ಲರ ಸಹಕಾರ ಬೇಕೆಂದು ಹೇಳಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷೆ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಸುನೀತಾ ಮಾತನಾಡುತ್ತಾ ಬಾಲಕರನ್ನು ಹಣಕ್ಕಾಗಿ ದುಡಿಸಿಕೊಳ್ಳುವುದು.ಕಾನೂನಿನಲ್ಲಿ ಅವಕಾಶ ನೀಡುವುದಿಲ್ಲ. ಮಕ್ಕಳನ್ನು ಕಾರ್ಮಿಕರನ್ನಾಗಿ ಕಾರ್ಯ ನಿರ್ವಹಿಸುವ ಕಾರ್ಯವನ್ನು ನಿಯಂತ್ರಿಸುವ ಅವಶ್ಯಕತೆ ಹೆಚ್ಚಾಗಿದ್ದು ಬಾಲ ಕಾರ್ಮಿಕರ ನಿರ್ಮೂಲನೆಗೆ ಸಾಮಾಜಿಕ ಜಾಗೃತಿ ಅವಶ್ಯ. ಬಾಲಕರನ್ನು ಕಾರ್ಮಿಕರನ್ನಾಗಿ ಕಾರ್ಯ ನಿಯೋಜಿಸುವುದು ಶಿಕ್ಷಾರ್ಹ ಅಪರಾಧ. ಕುಟುಂಬದ ಆರ್ಥಿಕ ನಿರ್ವಹಣೆ ಹಾಗೂ ಸಮಸ್ಯೆಗಳಿಂದ ಬಾಲಕರು ಕಾರ್ಮಿಕರನ್ನಾಗಿ ಹಚ್ಚಿಸುವ ಪದ್ಧತಿ ನಿರ್ಮೂಲನೆಗೊಳಿಸಿ ಬಾಲಕರ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಶೇಷ ಆಮಂತ್ರಿತರಾಗಿ ನ್ಯಾಯಾಧೀಶೆ ದಿವ್ಯಶ್ರೀ ಸಿ.ಎಮ್., ಡಿ.ಡಿ.ಪಿ.ಐ. ಸಿ.ಎಸ್. ನಾಯ್ಕ ತಹಸೀಲದಾರ ಎಮ್. ಆರ್.ಕುಲಕರ್ಣಿ ಆಗಮಿಸಿದ್ದರು.

ಕಾರ್ಮಿಕ ನಿರೀಕ್ಷಕ ಬಿ.ಎಸ್. ಬೆಟಗೇರಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಬಾಲ ಕಾರ್ಮಿಕರ ಪದ್ಧತಿ ವಿರೋಧಿ ಪ್ರತಿಜ್ಞಾವಿಧಿ ಬೋಧಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಎ.ರವೀಂದ್ರ ನಾಯ್ಕ ವಹಿಸಿದ್ದರು.

ಬಾಲ ಕಾರ್ಮಿಕತೆ ಒಂದು ಪಿಡುಗು ಎಂಬ ವಿಷಯದ ಮೇಲೆ ವಕೀಲ ಶಿವರಾಯ ದೇಸಾಯಿ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಸ್ವಾಗತ ಹಾಗೂ ವಂದನಾರ್ಪಣೆ ವಕೀಲರ ಸಂಘದ ಕಾರ್ಯದರ್ಶಿ ಆರ್.ಆರ್.ಹೆಗಡೆ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ