ಸಜ್ಜನಗಡ : ನಿಸರ್ಗ ಸಂಪತ್ತಿನ ದೈವೀ ಕ್ಷೇತ್ರ

-ಗುರುಪ್ರಸಾದ ಕಾನ್ಲೆ (೮೧೪೭೬೮೮೮೯೮)

 

‘ಗುರು’ ಶಬ್ದವು ಗು ಮತ್ತು ರು ಅಕ್ಷರಗಳಿಂದ ರಚಿತವಾಗಲ್ಪಟ್ಟಿದೆ. “ಗುಕಾರೋಂಧಕಾರತ್ವಾತ್ ರುಕಾರೋ ತನ್ನಿವಾರಕಃ” ’ಗು’ ಎಂದರೆ ’ಅಂಧಕಾರ’ ’ರು’ ಎಂದರೆ ’ನಾಶಪಡಿಸುವವನು’ ಎಂದರ್ಥವಿದೆ. ಗುರು ಎಂದರೆ ಆತ್ಮಾಂಧಕಾರವನ್ನು ಆಧ್ಯಾತ್ಮಿಕ ಬೆಳಕಿನಿಂದ ತೊಲಗಿಸುವ ವ್ಯಕ್ತಿ ಎಂದು ನಿರೂಪಿಸಲ್ಪಡುತ್ತಾನೆ. ಇಂತಹ ಗುರುವನ್ನು ವರ್ಣನೆ ಮಾಡಲು ಶ್ರುತಿಗೆ ಕೂಡಾ ಸಾಧ್ಯವಾಗದೇ “ನೇತಿ ನೇತಿ” ಎಂದು ನಿಲ್ಲಿಸುತ್ತಾಳೆ. ಅಂದರೆ ಇದಲ್ಲ, ಇದಲ್ಲ ಎಂದರ್ಥ. ಶಬ್ಧಗಳಲ್ಲಿ ವರ್ಣಿಸಲಾಗದಷ್ಟು ಮಹತ್ತನ್ನು ಗುರುವು ಹೊಂದಿದ್ದಾನೆ ಎಂಬುದು ತಾತ್ಪರ್ಯ. ಹರ ಮುನಿಯಲು ಗುರು ಕಾಯ್ವನು ಗುರು ಮುನಿಯಲು ಹರ ಕಾಯನು ಎಂದು, ಗುರುವಿನ ಮಹತ್ವವನ್ನು ಅನಾದಿಕಾಲದಲ್ಲಿಯೇ ಹಿರಿಯರು ಕೊಂಡಾಡಿದ್ದಾರೆ.

ಇಂತಹ ಮಹಾನ್ ಗುರುಗಳಲ್ಲಿ ಕ್ರಿ.ಶ. ೧೫೯೮ ರಲ್ಲಿ ಜನಿಸಿದ ಸ್ವಾಮಿ ಸಮರ್ಥ ರಾಮದಾಸರು ಮೇರುಪರ್ವತದೋಪಾಧಿಯಲ್ಲಿ ನಿಲ್ಲುತ್ತಾರೆ. ಮಹಾಮಹಿಮ ಆಂಜನೇಯನ ಅವತಾರವೇ ಶ್ರೀ ಸಮರ್ಥ ರಾಮದಾಸರಾಗಿದ್ದಾರೆ. ಹದಿನಾರನೆಯ ಶತಮಾನದಲ್ಲಿ , ಸಜ್ಜನರು ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ಇವರ ಅವತಾರವಾಯಿತು. ಧರ್ಮ ರಕ್ಷಣೆಗಾಗಿ ಅವತರಿಸಿದ ಇವರು , ಪಟ್ಟಶಿಷ್ಯ ಶಿವಾಜಿ ಮಹಾರಾಜನಿಗೆ ಸೂಕ್ತ ಮಾರ್ಗದರ್ಶನ ಮಾಡಿ , ಆ ಮೂಲಕ ಧರ್ಮವುಳಿಯಲು ಕಾರಣರಾದವರು. ಇವರ ಶಿಷ್ಯಂದಿರು ಕೂಡಾ ತಮ್ಮತಮ್ಮ ವಿಭಾಗಗಳಲ್ಲಿ ಅದ್ವಿತೀಯರಾಗಿದ್ದಾರೆ. ಅದು ಶಿವಾಜಿ ಮಹಾರಾಜನೇ ಇರಲಿ, ಕಲ್ಯಾಣಸ್ವಾಮಿಯೇ ಇರಲಿ ಅಥವಾ ಪರಮಗುರು ಶ್ರೀಧರಸ್ವಾಮಿಗಳೇ ಇರಲಿ , ಇವರು ತಮ್ಮ ಸಾಧನೆಯಿಂದ ಗುರುಗಳ ನಾಮವನ್ನು ಸಹ ಉಜ್ವಲಗೊಳಿಸಿದ್ದಾರೆ.

ಇತ್ತೀಚೆಗೆ ಸಮರ್ಥ ರಾಮದಾಸರು ಬ್ರಹ್ಮೀಭೂತರಾಗಿ, ಸಮಾಧಿಸ್ಥಿತಿಯಲ್ಲಿ ನೆಲೆಸಿರುವ ಕ್ಷೇತ್ರ ಸಜ್ಜನಗಡಕ್ಕೆ ನಾವು ಗೆಳೆಯರು ಹೋಗಿದ್ದೆವು. ಮಹಾರಾಷ್ಟ್ರದ ಸತಾರ ಜಿಲ್ಲಾ ಕೇಂದ್ರದಿಂದ ಕೇವಲ ಹದಿನೆಂಟು ಕಿಲೊಮೀಟರ್ ದೂರದಲ್ಲಿ, ಪರಳಿಯ ಬಳಿ , ಅಂಬರಚುಂಬಿತವಾಗಿದೆ ಈ ಮಹಾಗಿರಿ. ಭೂಗರ್ಭಶಾಸ್ತ್ರದಲ್ಲಿ ಟೇಬಲ್ ಟಾಪ್ ಮೌಂಟನ್ ಎಂದು ಈ ಪರ್ವತಗಳನ್ನು ಹೆಸರಿಸಲಾಗಿದೆ. ಇಂತಹ ಹಲವು ಗಿರಿಗಳ ಸಮೂಹವೇ ಸುತ್ತಮುತ್ತಲೂ ಇದೆ. ಭೂಮಿಯ ಕೆಲವು ಭಾಗಗಳಲ್ಲಿ ಪರ್ವತ ರಚನೆಯಾಗಿ ಆ ಪರ್ವತದ ತುದಿಭಾಗ ಮಾತ್ರ ಮೇಜಿನಂತೆ ಎತ್ತರವಾಗಿ, ಮೇಲ್ಬಾಗ ಸಮತಟ್ಟಾಗಿರುವಂತಹ, ರಚನೆಯೇ ಟೇಬಲ್ ಟಾಪ್ ಮೌಂಟನ್. ಸಮತಟ್ಟಾದ ಭಾಗ ಮಾತ್ರ ಎತ್ತರವಾಗಿ, ಉಳಿದ ಇಳಿಜಾರು ಪರ್ವತಭಾಗ ತಗ್ಗಿನಲ್ಲಿಯೇ ಇರುವ ಕಾರಣ ಗಡದ ಸುತ್ತಲೂ ಎತ್ತರದ ಗೋಡೆ ಕಟ್ಟಿದಂತೆ ಕಾಣುವ ಇದು , ಅದೇ ಕಾರಣಕ್ಕೆ ಅಭೇದ್ಯವಾಗಿಯೂ ಇದೆ.

ಇಂತಹ ಒಂದು ರಚನೆಯೇ ಸಜ್ಜನಗಡ. ಯವನನಾಶಕ ಶಿವಾಜಿ ಮಹಾರಾಜನ ಮೆಚ್ಚಿನ ತಾಣವಾದ ಇದನ್ನು , ಅವನು ತನ್ನ ಗುರುಗಳಾದ ಸಮರ್ಥ ರಾಮದಾಸ ಸ್ವಾಮಿಗಳಿಗೆ ಅರ್ಪಿಸಿದ್ದಾನೆ. ತಪೋಭೂಮಿಯಾದ ಇದು ಸಮರ್ಥರು ದೇಹದಿಂದಿರುವವರೆಗೂ ಅವರ ಕರ್ಮಭೂಮಿಯಾಗಿದ್ದು , ಅವರ ಮಹಾಸಮಾಧಿಯ ನಂತರ ಲೋಕಕ್ಕೆಲ್ಲ ಒಳಿತನ್ನುಂಟುಮಾಡುವ ಕಲ್ಯಾಣ ಭೂಮಿಯಾಗಿದೆ.

ಸಮರ್ಥರು ಆರ್ಥರಾಗಿ ತಮ್ಮ ಬಳಿ ಬಂದು, ಭಕ್ತಿಯಿಂದ ಪ್ರಾರ್ಥನೆ ಮಾಡಿದಂತಹ ಜನರೆಲ್ಲರಿಗೂ ಅವರ ಮನೋಕಾಮನೆ ಪೂರ್ತಿಯಾಗುವಂತೆ ವರ ನೀಡಬಲ್ಲಂತ ಮಹಾಮಹಿಮರು ಎಂಬುದು ಲೋಕವಿದಿತ. ಅವರ ಬಾಲ್ಯದಿಂದಲೂ ಅವರ ಈ ಗುಣವನ್ನು ನೋಡಿದ ಭಕ್ತರು ಅವರನ್ನು ಕೊಂಡಾಡುತ್ತಾರೆ. ಭಗವಂತನ ಹಾಗೂ ಮಹಾತ್ಮರ ಅನುಗ್ರಹಕ್ಕೆ, ದೇಹದಂಡನೆ, ಪ್ರಾರ್ಥನೆ, ಪ್ರಯತ್ನ, ಸಾಧನೆ , ಸಿದ್ದಿ , ಪೂರ್ವತಯಾರಿ, ದರ್ಶನ ಇತ್ಯಾದಿಗಳು ಸಹಕಾರಿ. ಸಜ್ಜನಗಡಗ ಮೆಟ್ಟಿಲುಗಳನ್ನು ಹತ್ತುವಾಗ ಇವುಗಳೆಲ್ಲವೂ ಆದಂತೆನಿಸುತ್ತದೆ. ಎತ್ತರೆತ್ತರಕ್ಕೇರುತ್ತಾ ನಮ್ಮ ಮನದ ಚಿಂತೆ, ದುಗುಡ ದುಮ್ಮಾನಗಳು, ಕೆಟ್ಟ ಯೋಚನೆಗಳು, ಎಲ್ಲವೂ ಹಗುರಾಗುತ್ತಾ ಕಳೆಯುತ್ತಿರುವ ಭಾವನೆ ನಮ್ಮನ್ನಾವರಿಸುತ್ತದೆ.

ಮೆಟ್ಟಿಲುಗಳನ್ನು ಹತ್ತಿ ಬರುತ್ತಾ, ಗಡದ ಮಹಾದ್ವಾರದ ಬಳಿ, ಸಂಪೂರ್ಣ ಗಡದ ನಕ್ಷೆಯನ್ನು ಹಾಕಿರುವುದು ಕಂಡು ಬರುತ್ತದೆ.ಶಿವಾಜಿಯ ಕಾಲದಲ್ಲಿ , ಮಹಾದ್ವಾರವನ್ನು ಹಾಕಿದ ನಂತರ ಯಾರಿಗೂ ಗಡದ ಒಳಗೆ ಪ್ರವೇಶವಿರಲಿಲ್ಲ. ಆ ದ್ವಾರವನ್ನುಳಿದು ಬೇರಾವ ದಾರಿಯೂ ಗಡಕ್ಕಿಲ್ಲ. ಹಾಗೇ ಮೇಲೆ ಬಂದರೆ ಎಡಬಾಗದಲ್ಲಿ ಸಮರ್ಥ ಸೇವಾ ಮಂಡಳದ ಕಾರ್ಯಾಲಯ ಸಿಗುತ್ತದೆ. ಅದರ ಪಕ್ಕದಲ್ಲಿಯೇ ಶ್ರೀಧರ ಕುಟಿ ಇದೆ. ನೇರವಾಗಿ ಮುಂದೆ ಸಾಗಿದರೆ ಶ್ರೀ ಸಮರ್ಥ ರಾಮದಾಸ ಮಠ ಇದೆ. ಬಲಪಕ್ಕದಲ್ಲಿ ಸಮರ್ಥರ ಸಮಾಧಿ ಮಂದಿರ, ಗುಹೆ ಇದೆ. ಮಠದಲ್ಲಿ , ಸಮರ್ಥರು ಬಳಸುತ್ತಿದ್ದ ವಸ್ತುಗಳ ಸಂಗ್ರಹಾಲಯವಿದೆ. ಅಲ್ಲಿ ಸಮರ್ಥರ ಹಾಸಿಗೆ, ಅವರ ಯೋಗದಂಡಗಳು, ಕಲ್ಯಾಣಸ್ವಾಮಿಯವರು ಗಡದ ಕೆಳಬಾಗದಿಂದ ನೀರು ತರುತ್ತಿದ್ದ ಹಂಡೆಯ ಗಾತ್ರದ ಕೊಡಗಳು, ಅಷ್ಟಲ್ಲದೇ ಸಮರ್ಥರಿಗೆ ಆಂಜನೇಯನಿಂದ ಪ್ರಸಾದಿತವಾದ ಶ್ರೀರಾಮದೇವರು ಉಟ್ಟ ವಲ್ಕಲಗಳನ್ನೂ ಕಾಣಬಹುದಾಗಿದೆ.

ಗಡದ ಮೇಲೆ ನಿಂತು ಸುತ್ತಲೂ ನೋಡಿದರೆ ಹಲವಾರು ಪರ್ವತಶಿಖರಗಳು ಕಾಣುತ್ತವೆ. ಒಂದು ಬದಿಯಲ್ಲಿ ಊರ್ಮಡಿ ನದಿಗೆ ಅಡ್ಡವಾಗಿ ಕಟ್ಟಿರುವ ಆಣೆಕಟ್ಟು , ಮೊತ್ತೊಂದು ಬದಿಯಲ್ಲಿ ಪರ್ವತಾಗ್ರದಲ್ಲಿ ಅಳವಡಿಸಿದ ಬೃಹತ್ ಪವನವಿದ್ಯುತ್ ಯಂತ್ರಗಳು, ಸುತ್ತಲೂ ಸುಮಾರು ಇಪ್ಪತ್ತು – ಇಪ್ಪತೈದು ಕಿಲೋಮೀಟರ್ ಗಳ ವರೆಗೂ ಕಾಣುವ ಊರುಗಳು, ಸದಾಕಾಲ ಬರ್ರೆಂದು ಬೀಸುವ ಸಿಹಿತಂಗಾಳಿ, ಕೋಟೆಯ ಅವಶೇಷಗಳು, ಅಷ್ಟೆತ್ತರದ ಗಡದ ತುದಿಯಲ್ಲಿ ಇರುವ ನೀರಿನ ಎರಡು ಕೊಳಗಳು, ಚೇತೋಹಾರಿ ಮನೋಜ್ಞ ದೃಶ್ಯಗಳು , ಒಂದೇ ಎರಡೇ. ದಾಸನವಮಿಯ ಸಂದರ್ಭದಲ್ಲಂತೂ ಹೆಸರಿಗೆ ತಕ್ಕಂತೇ ಸಜ್ಜನರಿಂದಲೇ ತುಂಬಿಹೋಗುತ್ತದೆ ಈ ಗಡ.

ರಾಜಧಾನಿ ಬೆಂಗಳೂರಿನಿಂದ ಸುಮಾರು ಏಳುನೂರ ಐವತ್ತು ಕಿಲೋಮೀಟರ್, ಎರಡನೆಯ ರಾಜಧಾನಿ ಬೆಳಗಾವಿಯಿಂದ ಸುಮಾರು ಎರಡುನೂರಾ ಐವತ್ತು ಕಿಲೋಮೀಟರ್ ದೂರವಿರುವ ಇದು ಹುಬ್ಬಳ್ಳಿಯಿಂದ ಸುಮಾರು ಮುನ್ನೂರ ನಲವತ್ತು ಕಿಲೋಮೀಟರ್ ದೂರವಿದೆ. ಸತಾರದ ವರೆಗೆ ರೈಲು ಹಾಗೂ ಬಸ್ಸಿನ ಸಂಪರ್ಕವಿದ್ದು , ಅಲ್ಲಿಂದ ಮುಂದಿನ ಹದಿನೆಂಟು ಕಿಲೊಮೀಟರ್ ದೂರವನ್ನು ಬಸ್ಸಿನಲ್ಲಿ ಅಥವಾ ಆಟೋರಿಕ್ಷಾದಲ್ಲಿ ಕ್ರಮಿಸಬಹುದಾಗಿದೆ. ಸತಾರದಿಂದ ಸಜ್ಜನಗಡಕ್ಕೆ ಪ್ರತೀ ತಾಸಿಗೊಂದು ಬಸ್ ಸಂಚರಿಸುತ್ತದೆ.

ಗಡದ ಮಧ್ಯದಲ್ಲಿಯವರೆಗೆ ಮಾತ್ರ ವಾಹನಗಳು ಹೋಗುವಂತಹ ರಸ್ತೆ ಇದ್ದು, ನಂತರದ ಸುಮಾರು ಎರಡು ಕಿಲೋಮೀಟರ್ ದೂರವನ್ನು ಮೆಟ್ಟಿಲುಗಳನ್ನು ಹತ್ತಿ ಕ್ರಮಿಸಬೇಕಾಗುತ್ತದೆ. ದೈಹಿಕವಾಗಿ ಅಸಮರ್ಥರಾದವರನ್ನು , ವಯೋವೃದ್ಧರನ್ನು ಗಡದ ಮೇಲೆ ಕರೆದೊಯ್ಯಲು , ನಾಲ್ಕು ಜನರು ಹೊತ್ತೊಯ್ಯುವಂತ ಡೋಲಿ ಅಥವಾ ದಂಡಿಯ ವ್ಯವಸ್ಥೆಯೂ ಇದೆ. ಸ್ವಂತ ವಾಹನ ತೆಗೆದುಕೊಂಡು ಹೋಗುವವರು ಅಲ್ಲಿಯ ವಾಹನ ನಿಲ್ದಾಣದಲ್ಲಿ ವಾಹನ ನಿಲ್ಲಿಸಿ ಹೋಗಬಹುದಾಗಿದೆ. ಜೀವನದಲ್ಲೊಮ್ಮೆ ನೋಡಲೇಬೇಕಾದ ಕ್ಷೇತ್ರ ಇದೆಂದರೂ ತಪ್ಪಾಗಲಾರದು. ಹಿರಿಯರು, ವಯೋವೃದ್ದರನ್ನು  ಜೊತೆಗೆ ಕರೆದೊಯ್ಯುವುದಾದರೆ  ಸ್ವಂತ ವಾಹನದಲ್ಲಿ ಹೋಗುವುದು ಒಳ್ಳೆಯದು.

 

 

 

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ