ಗಂಗಾವತಿ ಕೆವಿಎಸ್ ಕಾರ್ಯಾರಂಭ: ಕೇಂದ್ರ ಸರ್ಕಾರದ ಎಂಎಚ್‌ಆರ್‌ಡಿ ಇಂದ ಸೂಚನೆ

ಕೊಪ್ಪಳ ಜೂನ್ 13: ಇದೇ ಶೈಕ್ಷಣಿಕ ವರ್ಷದಿಂದ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿನ ಎಂಎನ್‌ಎಂ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಕೇಂದ್ರ ಸರ್ಕಾರದಿಂದ ನಡೆಯುವ ಕೇಂದ್ರೀಯ ವಿದ್ಯಾಲಯ ಕಾರ್ಯಾರಂಭವಾಗಲಿದೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯಿಂದ ವಿದ್ಯಾಲಯ ದೊರೆತಿದ್ದು, ಇದೇ ಶೈಕ್ಷಣಿಕ ವರ್ಷದಿಂದ ೧ನೇ ತರಗತಿಯಿಂದ ೫ನೇ ತರಗತಿ ವರೆಗೆ ಪ್ರವೇಶ ಪಡೆಯುವಂತೆ ಇಲಾಖೆಯ ಜಂಟಿ ಕಾರ್ಯದರ್ಶಿ ಡಾ. ಶಚಿ ಕಾಂತ್ ಅವರು ಜೂ. ೧೧ರಂದು ಆದೇಶ ಹೊರಡಿಸಿದ್ದಾರೆ.

ಗಂಗಾವತಿ ಕೇಂದ್ರೀಯ ವಿದ್ಯಾಲಯಕ್ಕೆ ತಾಲೂಕಿನ ವಿರುಪಾಪುರದಲ್ಲಿ ೮ ಎಕರೆ ಜಾಗೆ ನಿಗದಿ ಮಾಡಲಾಗಿದೆ. ಸಂಬಂಧಪಟ್ಟ ಜಮೀನನ್ನು ಕಂದಾಯ ಇಲಾಖೆ ಈಗಾಗಲೆ ಕೇಂದ್ರೀಯ ವಿದ್ಯಾಲಯಕ್ಕೆ ಹಸ್ತಾಂತರಿಸಿದೆ. ಈ ಎಲ್ಲ ಪ್ರಕ್ರಿಯೆಗಳು ನಡೆದ ಹಿನ್ನೆಲೆಯಲ್ಲಿ ೨೦೧೮-೧೯ನೇ ಸಾಲಿನಿಂದಲೇ ವಿದ್ಯಾಲಯ ಆರಂಭಿಸುವಂತೆ ಜಂಟಿ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ದೇಶದ ೫೦ ಕಡೆಗೆ ಕೇಂದ್ರಿಯ ವಿದ್ಯಾಲಯಗಳು ಈ ವರ್ಷದಿಂದಲೇ ಕಾರ್ಯಾರಂಭ ಮಾಡಲಿದ್ದು, ೧ನೇ ತರಗತಿಯಿಂದ ೫ನೇ ತರಗತಿವರೆಗೆ ಒಂದೇ ಕ್ಲಾಸ್‌ನಂತೆ ಪ್ರವೇಶ ಪಡೆಯಲು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಆದೇಶ ಹೊರಡಿಸಿ ೩೦ ದಿನಗಳ ಒಳಗಾಗಿ ಪ್ರವೇಶ ಪ್ರಕ್ರಿಯೆ ಮುಗಿಸಬೇಕು ಎಂದೂ ತಿಳಿಸಿದ್ದಾರೆ.

ವಿದ್ಯಾಲಯಕ್ಕೆ ಬೇಕಾದ ಸಂಪನ್ಮೂಲಗಳನ್ನು ಹಂತ ಹಂತವಾಗಿ ಒದಗಿಸಲಾಗುವುದು. ಗಂಗಾವತಿ ವಿದ್ಯಾಲಯದ ಕಟ್ಟಡ ಇನ್ನೂ ನಿರ್ಮಾಣವಾಗಬೇಕಿರುವ ಹಿನ್ನೆಲೆಯಲ್ಲಿ ಈ ವರ್ಷದಿಂದ ಸಧ್ಯ ಗಂಗಾವತಿ ನಗರದಲ್ಲಿನ ಎಂಎನ್‌ಎಂ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲೇ ಕಾರ್ಯಾರಭ ಮಾಡುವಂತೆ ಆದೇಶದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಗಿದೆ. ಕೇಂದ್ರೀಯ ವಿದ್ಯಾಲಯಕ್ಕಾಗಿ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಶ್ರಮಿಸಿದ್ದರು. ಕೇಂದ್ರ ಮಾನವ ಸಂಪನ್ಮೂಲ ಸಚಿವರನ್ನು ಸಾಕಷ್ಟು ಬಾರಿ ಭೇಟಿ ಮಾಡಿ ಶೈಕ್ಷಣಿಕವಾಗಿ ಹಿಂದುಳಿದಿರುವ ನಮ್ಮ ಭಾಗಕ್ಕೆ ಕೇಂದ್ರೀಯ ವಿದ್ಯಾಲಯದ ಅವಶ್ಯಕತೆ ಹೆಚ್ಚಾಗಿದೆ. ಹೀಗಾಗಿ ಕೂಡಲೇ ನಮ್ಮ ಭಾಗದಲ್ಲಿ ಕೇಂದ್ರೀಯ ವಿದ್ಯಾಲಯವನ್ನು ಆರಂಭಿಸಬೇಕು ಎಂದು ಮನವಿ ಮಾಡಿಕೊಂಡಿದರು. ಸಂಸದರ ಸತತ ಪರಿಶ್ರಮದಿಂದಾಗಿ ಕೇಂದ್ರ ಸರ್ಕಾರ ಇವರ ಮನವಿ ಪುರಸ್ಕರಿಸಿ ಕೇಂದ್ರೀಯ ವಿದ್ಯಾಲಯವನ್ನು ಅನುಮೋದಿಸಿದೆ.

ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯಿಂದ ಆರಂಭವಾಗುತ್ತಿರುವ ಕೇಂದ್ರೀಯ ವಿದ್ಯಾಲಯಕ್ಕೆ ಪ್ರವೇಶ ಪಡೆಯಲು ಜಿಲ್ಲೆಯ ಮಕ್ಕಳಿಗೆ ಉತ್ತಮ ಅವಕಾಶವಿದ್ದು, ಜುಲೈ ೧೧ರ ಒಳಗಾಗಿ ಪ್ರವೇಶ ಪಡೆಯಬಹುದಾಗಿದೆ.
ಬಾಕ್ಸ್.

“ಶೈಕ್ಷಣಿಕವಾಗಿ ಮುಂದುವರೆಯುವ ದೃಷ್ಟಿಯಿಂದ ನಮ್ಮ ಭಾಗಕ್ಕೆ ಕೇಂದ್ರೀಯ ವಿದ್ಯಾಲಯದ ಅವಶ್ಯಕತೆ ಇತ್ತು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಮಡ ಕಾರಣ ಜಿಲ್ಲೆಯ ಗಂಗಾವತಿಗೆ ಕೇಂದ್ರೀಯ ವಿದ್ಯಾಲಯ ದೊರಕಿದೆ. ಈ ವರ್ಷದಿಂದ ತನ್ನ ಕಾರ್ಯಚಟುವಟಿಕೆ ಆರಂಭಿಸಲಿದೆ. ಪ್ರಧಾನಿ ಮೋದಿ, ಕೇಂದ್ರ ಸರ್ಕಾರಕ್ಕೆ ನನ್ನ ಕ್ಷೇತ್ರದ ಜನತೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ” – ಕರಡಿ ಸಂಗಣ್ಣ, ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ