ಅಗಸೆ – ಆರೋಗ್ಯಕಾರಿ ಆಹಾರ

ಅಗಸೆಯನ್ನು ಇಂಗ್ಲೀಷನಲ್ಲಿ ‘ಫ್ಲಾಕ್ಸ’ ಅಥವಾ ಲಿನ್‍ಸೀಡ್ ಎಂದು ಕರೆಯುತ್ತಾರೆ. ಮೂಲತಃ ಇಂಗ್ಲೀಷ ಪದಗಳಲ್ಲಿ ಅರ್ಥೈಸಿದಂತೆ ಅಗಸೆಯು ಫ್ಲಾಕ್ಸ ಎಂಬ ಗಿಡದಿಂದ ಬೀಜಗಳ ರೂಪದಲ್ಲಿ ಸಿಗುವ ಆಹಾರವಾಗಿದೆ. ಅಗಸೆಯ ವೈಜ್ಞಾನಿಕ ಹೆಸರು ‘ಲಿನಮ್ ಯುಸಿಟಾಟಿಸಿಮಮ್’ (Linum usitatissimum). ಫ್ಲಾಕ್ಸ ಗಿಡವು ಉದ್ದನೆಯದ್ದಾಗಿದ್ದು, ನೀಲಿ ಬಣ್ಣದ ಹೂವುಗಳನ್ನು ಬಿಡುವ ಗಿಡವಾಗಿದೆ. ಫ್ಲಾಕ್ಸ ಗಿಡದಿಂದ ಬೆಳೆಯುವ ಅಗಸೆ ಬೀಜಗಳು ಸಾಮಾನ್ಯವಾಗಿ ಕಂದು ಬಣ್ಣ ಅಥವಾ ಹಳದಿ ಬಣ್ಣದಲ್ಲಿರುತ್ತವೆ. ಈ ಫ್ಲಾಕ್ಸ ಗಿಡದಿಂದ ಲಿನಿನ್ ಬಟ್ಟೆಗಳನ್ನೂ ಕೂಡ ತಯಾರಿಸಲಾಗುತ್ತದೆ.

ಅಗಸೆಯು ಅತ್ಯಂತ ಪ್ರಾಚೀನ ಕಾಲದ ಆಹಾರವಾಗಿದೆ. ಇದರ ಮೂಲವು ಈಜಿಪ್ಟ ಎಂದು ಭಾವಿಸಲಾಗಿದೆ. ಅಗಸೆ ಬೀಜವನ್ನು ಮುಖ್ಯವಾಗಿ ಎಣ್ಣೆ ಬೀಜಗಳ ಪಟ್ಟಿಯಲ್ಲಿ ಸೇರಿಸಿದೆ. ಇದಕ್ಕೆ ಕಾರಣ ಅಗಸೆ ಬೀಜದಲ್ಲಿರುವ ಎಣ್ಣೆಯ ಪ್ರಮಾಣ, ಸುಮಾರು 35 ರಿಂದ 47 ಪ್ರತಿಶತ ಕೊಬ್ಬಿನಾಂಶದಿಂದ ಕೂಡಿರುತ್ತದೆ. ಈ ಬೀಜಗಳಿಂದ ದೊರೆಯುವ ಎಣ್ಣೆಯು/ಕೊಬ್ಬಿನಾಂಶವು ಅತ್ಯಂತ ಆರೋಗ್ಯಕಾರವಾದದ್ದು, ಏಕೆಂದರೆ ಇದರಲ್ಲಿ ಶೇಕಡಾ 73 ರಷ್ಟು ಒಮೇಗಾ-3 ಮತ್ತು ಒಮೇಗಾ-6 ಎಂಬ ಆರೋಗ್ಯಕರ ಕೊಬ್ಬಿನಾಂಶಗಳನ್ನು ಒಳಗೊಂಡಿದೆ. ಸಾಮಾನ್ಯವಾಗಿ ಒಮೇಗಾ-3 ಎಂಬ ಕೊಬ್ಬಿನಾಂಶವು ಮೀನು ಹಾಗೂ ಮೀನಿನ ಪದಾರ್ಥಗಳಲ್ಲಿ ಕಂಡುಬರುತ್ತದೆ. ಆದರೆ ಸಸ್ಯ ಪದಾರ್ಥಗಳಲ್ಲಿ ಕಂಡುಬರುವುದು ಅತ್ಯಂತ ಹೇರಳಕರ. ಹಾಗಾಗಿ ಅಗಸೆಯು ಒಂದು ಒಳ್ಳೆಯ ಆರೋಗ್ಯಕಾರಿ ಕೊಬ್ಬಿನಾಂಶವನ್ನು ಹೊಂದಿರುವ ಆಹಾರವಾಗಿದೆ. ಅಗಸೆಯ ಇಡೀ ಬೀಜವನ್ನು ತಂಪಾದ ಹಾಗೂ ಶುಷ್ಕ ಸ್ಥಳಗಳಲ್ಲಿ ಸುಮಾರು ಒಂದು ವರ್ಷಗಳ ಕಾಲ ಶೇಖರಿಸಿಡಬಹುದು. ಆದರೆ ಪುಡಿ ಮಾಡಿದ ಅಗಸೆಯನ್ನು ಕೇವಲ ಕೆಲವು ದಿನಗಳ ಕಾಲ ಮಾತ್ರ ಶೇಖರಿಸಿಡಬಹುದು. ಕೆಲವು ತಜ್ಞರು ತಿಳಿಸಿದಂತೆ ದಿನನಿತ್ಯ ಒಬ್ಬ ವ್ಯಕ್ತಿಯು 1 ರಿಂದ 2 ಟೀ ಚಮಚಗಳಷ್ಟು ಅಗಸೆಯನ್ನು ಸೇವಿಸುವುದು ಒಳ್ಳೆಯದು.

ಒಂದು ಟೀ ಚಮಚ ಅಗಸೆಯಲ್ಲಿರುವ ಪೋಷಕಾಂಶಗಳ ವಿವರ –

13 ಕಿಲೋಕ್ಯಾಲೋರಿಗಳು, 0.4 ಗ್ರಾಂ ಪ್ರೋಟಿನ, 0.7 ಗ್ರಾಂ ನಾರು, 0 ಕೊಲೆಸ್ಟೆರೋಲ್, 6 ಮಿ. ಗ್ರಾಂ ಕ್ಯಾಲ್ಸಿಯಂ, 0.14 ಮಿ ಗ್ರಾಂ ಕಬ್ಬಿಣ, 1.05 ಗ್ರಾಂ ಕೊಬ್ಬು, 0.11 ಮಿ ಗ್ರಾಂ ಸತುವು, 2 ಮಿ ಗ್ರಾಂ ಫೋಲೆಟ್, 0.1 ಮೈಕ್ರೋ ಗ್ರಾಂ ಜೀವಸತ್ವ ಕೆ.

 

ಈ ಲೇಖನದ ಬಗ್ಗೆ ಹೆಚ್ಚು ಮಾಹಿತಿಗಾಗಿ ಇಲ್ಲಿ ಭೇಟಿ ನೀಡಿ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ