ನಿಸರ್ಗದ ಮಡಿಲಲ್ಲಿ ನೆಲೆನಿಂತ ಅಭಯವೀರಾಂಜನೇಯ

ಶ್ರೀ ವ್ಯಾಸರಾಜರು ( ಕ್ರಿ.ಶ.1447–1548 ) ವಿಜಯನಗರ ಸಾಮ್ರಾಜ್ಯದ  ಕಾಲದಲ್ಲಿ ಬದುಕಿದ್ದು, ಸಾಮ್ರಾಜ್ಯವನ್ನು ಉತ್ತುಂಗಕ್ಕೇರಿಸಿದ ಅರಸು ಶ್ರೀಕೃಷ್ಣದೇವರಾಯನ  ರಾಜಗುರುಗಳಾಗಿದ್ದು, ಅವನ ಮೇಲೆ ಅಪಾರ ಪ್ರಭಾವ ಬೀರಿದ್ದವರು.  ದ್ವೈತ ಸಿದ್ದಾಂತದ ಪ್ರತಿಪಾದಕರಾಗಿದ್ದ ಇವರು, ಆಚಾರ್ಯತ್ರಯರಲ್ಲಿ ಒಬ್ಬರು ಎಂದೇ ಪ್ರಸಿದ್ದರು. ತಮ್ಮ ಜೀವಿತಾವದಿಯಲ್ಲಿ ಅಸೇತುಹಿಮಾಲಯ ಪರ್ಯಂತ ಸಂಚರಿಸಿದ್ದ ಇವರು, ಆ ಕಾಲದಲ್ಲಿ ನಡೆಯುತ್ತಿದ್ದ ವಿದೇಶಿಗರ ದಾಳಿ, ದಂಡಯಾತ್ರೆ, ಸತತ ಯುದ್ದಗಳು, ಇತ್ಯಾದಿಗಳನ್ನು ನೋಡಿ, ಸಾಮ್ರಾಜ್ಯವನ್ನು ಆಂತರಿಕವಾಗಿ ಹಾಗೂ ದೈವಿಕವಾಗಿ ಬಲಶಾಲಿಗೊಳಿಸುವ ಉದ್ದೇಶದಿಂದ ತಮ್ಮ ಆರಾಧ್ಯ ದೈವ ಮುಖ್ಯಪ್ರಾಣ ದೇವರು ಅಥವಾ ಹನುಮಂತನ  732  ವಿಗ್ರಹಗಳನ್ನು, ದಕ್ಷಿಣ ಭಾರತದಾದ್ಯಂತ ಸ್ಥಾಪಿಸಿದ್ದಾರೆ. ಬೆಂಗಳೂರಿನಲ್ಲಿರುವ ಶ್ರೀ ಗಾಳಿ ಆಂಜನೇಯ ದೇವರು ಮತ್ತು ಕೆ.ಆರ್.ಮಾರುಕಟ್ಟೆಯ ಬಳಿಯ ಕೋಟೆ ಆಂಜನೇಯ ದೇವರು, ಹಂಪಿಯಲ್ಲಿನ ಶ್ರೀ ಯಂತ್ರೋದ್ದಾರ ಆಂಜನೇಯ ದೇವರು, ಹುಬ್ಬಳ್ಳಿಯಲ್ಲಿನ ಶ್ರೀ ಕೋಟೆ ಆಂಜನೇಯ ದೇವರು, ಮುಂತಾದವುಗಳು ಇವರಿಂದಲೇ ಪ್ರತಿಷ್ಥಾಪಿಸಲ್ಪಟ್ಟಿರುವ ಮೂರ್ತಿಗಳಾಗಿವೆ. ತ್ರೇತಾಯುಗದಲ್ಲಿ ಆಂಜನೇಯನಾಗಿ, ದ್ವಾಪರದಲ್ಲಿ ಭೀಮನಾಗಿ, ಕಲಿಯುಗದಲ್ಲಿ ಮಧ್ವಾಚಾರ್ಯರಾಗಿ ಪ್ರಾಣದೇವರು ಅವತರಿಸಿದ್ದರು ಎಂದು  ಹೇಳಲಾಗುತ್ತದೆ. ಹಂಗಾಗಿ ಮಾದ್ವರಿಗೆ ಹನುಮಂತನ ಮೆಲೆ ವಿಶೇಷ ಬಕ್ತಿ.

ಸಾಧಾರಣವಾಗಿ ಎಲ್ಲೆಡೆಯೂ ರಾಮನ ಮುಂದೆ ಭಕ್ತಿಯಿಂದ ಕುಳಿತ ಭಕ್ತಹನುಮಂತನ ಮೂರ್ತಿ ಇದ್ದರೆ, ಇವರಿಂದ ಪ್ರತಿಷ್ಥಾಪಿಸಲ್ಪಟ್ಟಿರುವ ಮೂರ್ತಿಗಳು, ಧೈರ್ಯ-ಸಾಹಸಗಳೇ ಆಕಾರ ತಳೆದಿರುವಂತೆ ತೋರುವ ವೀರಾಂಜನೇಯನ ಮೂರ್ತಿಗಳಾಗಿದ್ದು, ಅನನ್ಯ ಗುಣಲಕ್ಷಣಗಳನ್ನು ಹೊಂದಿವೆ.  ಒಂದು ಕೈ ಆಕಾಶಕ್ಕೆ ಅಥವಾ ಭಕ್ತನಡೆಗೆ ಅಭಯದಾನಅಭಯದಾನ  ಮಾಡುವಂತೆ  ಮುಖ ಮಾಡಿದ್ದರೆ, ಇನ್ನೊಂದು ಕೈಯಲ್ಲಿ ಸೌಗಂಧಿಕಾ ಪುಷ್ಪ ಇರುತ್ತದೆ. ಹನುಮಮೂರ್ತಿಯ ಬಾಲ ತಲೆಯ ಮೇಲಿಂದ  ಬಂದು  ಅರ್ಧವೃತ್ತಾಕಾರದಂತ ರಚನೆಯಾಗಿರುವುದು ಹಾಗೂ  ಬಾಲದ ತುದಿ ಸುರುಳಿಯಾಗಿರುವುದು,  ಕೆಡುಕಿನೆಡೆಗೆ ಕೋಪ ತೋರಿಸುತ್ತಿರುವುದರ ಸಂಕೇತವಾಗಿದೆ. ಸಾಧಾರಣ ಕೋತಿಯೂ ಕೊಪಗೊಂಡಾಗ ಬಾಲ ಮೇಲೆತ್ತಿ ನಿಲ್ಲುವುದನ್ನು ಇಲ್ಲಿ ಸ್ಮರಿಸಬಹುದು. ಬಾಲದ ತುದಿಯಲ್ಲಿ ಗಂಟೆ ಕಟ್ಟಿರುವುದು ಕಂಡುಬರುತ್ತದೆ. ಕೆಲವೆಡೆ ಶಂಖ ಚಕ್ರಗಳನ್ನು, ಸೂರ್ಯ ಚಂದ್ರರನ್ನು ಕೆತ್ತಲಾಗಿದ್ದು, ಕಾಲಿನ ಬುಡದಲ್ಲಿ ಅಸುರನಿರುವಂತೆ ಕೆತ್ತಲಾಗಿದೆ. ಇಲ್ಲಿಯವರೆಗೆ ಗುರುತಿಸಲ್ಪಟ್ಟ ಮೂರ್ತಿಗಳಲ್ಲಿ ಈ ಅಂಶಗಳು ಕಂಡುಬಂದಿವೆ. ಅಂತಹುದೇ ಒಂದು ಮೂರ್ತಿ ಯಲ್ಲಾಪುರ ತಾಲೂಕಿನ ಲಾಲಗುಳಿ ಗ್ರಾಮದಲ್ಲಿದೆ.

ಯಲ್ಲಾಪುರ ತಾಲೂಕಾ ಕೇಂದ್ರದಿಂದ ಸುಮಾರು 18 ಕಿ.ಮೀ ದೂರದಲ್ಲಿರುವ ಲಾಲಗುಳಿ, ಅಂಬರಚುಂಬಿತ ವೃಕ್ಷಗಳಿಂದ, ಅಭೇದ್ಯ ಬಿದಿರುಮೇಳೆಗಳಿಂದ ಕೂಡಿದ ದಟ್ಟ ಅರಣ್ಯದಿಂದ ಕೂಡಿದ್ದು, ವನ್ಯಮೃಗಗಳ ಬೀಡಾಗಿದೆ.  ಗ್ರಾಮದ ಅಂತಿಮ ಬಸ್ ನಿಲ್ದಾಣದಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರಕ್ಕೆ ಮಣ್ಣಿನ ರಸ್ತೆಯಲ್ಲಿ ಕ್ರಮಿಸಿ , ಎದುರಿಗೆ ಸಿಗುವ ಹಳ್ಳವನ್ನು ದಾಟಿದರೆ ಸಿಗುವ ಜಾಗವೇ ಹನುಮಾನ್ ಕೋಟೆ. ಮೊದಲು ಇಲ್ಲಿಗೆ  ಜನರು ಆಗಮಿಸಿ, ಪೂಜಾದಿಗಳನ್ನು ಮುಗಿಸಿ, ಇಲ್ಲಿಯೇ ಅಡುಗೆ ಮಾಡಿ ಊಟ ಮಾಡಿ ಹೋಗುತ್ತಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ದಾರಿಯಲ್ಲಿ ದೊಡ್ಡ  ಒರಳುಕಲ್ಲೊಂದು ಕಾಣುತ್ತದೆ.  ಸ್ವಲ್ಪ ಮುಂದೆ ಹೋದಂತೆ,  ದೊಡ್ಡದೊಂದು ಕೋಟೆಯ ಪಳೆಯುಳಿಕೆಗಳಂತೆ, ಧರೆಗುರುಳಿದ ಕಲ್ಲುಗಳು, ಮಣ್ಣಿನ ದಿಬ್ಬ ಕಾಣಲಾರಂಭಿಸುತ್ತವೆ. ಪುರಾತನ ಕೋಟೆಯ ದ್ವಾರ ಆಂಗ್ಲಭಾಷೆಯ ಎಲ್ ಆಕಾರದಲ್ಲಿದ್ದು, ಒಳಗಡೆ ಹೊಕ್ಕು ಎಡತಿರುಗಿ ಹೋದರೆ ಭವ್ಯ ವೀರಾಂಜನೇಯನ  ಮೂರ್ತಿ ಕಾಣುತ್ತದೆ. ಮೂರ್ತಿಯ ಸುತ್ತಲೂ ಮಂದಿರದ ಅವಶೇಷಗಳೆಂಬಂತೆ, ಬೃಹದಾಕಾರದ ಚಪ್ಪಡಿ ಕಲ್ಲುಗಳಿಂದ ನಿರ್ಮಿಸಿದ ಅರ್ಧ ಧರೆ ಸೇರಿದ ಗೋಡೆಗಳಿವೆ.

ಶ್ರೀ ವ್ಯಾಸರಾಜತೀರ್ಥರು ಇಲ್ಲಿಗೆ ಬಂದು ಈ ವೀರಾಂಜನೇಯ ಮೂರ್ತಿಯನ್ನು ಸ್ಥಾಪಿಸಿದರೋ ಅಥವಾ ಅವರಿಂದ ಪ್ರೇರಣೆ ಪಡೆದು ಬೇರೆಯವರು ಸ್ಥಾಪಿಸಿದರೋ ಎಂಬುದು ಇಲ್ಲಿಯವರೆಗೆ ಖಚಿತವಾಗಿ ತಿಳಿದಿಲ್ಲವಾದರೂ, ಸುಮಾರು ಐದು ಅಡಿಗಳಷ್ಟು ಎತ್ತರ ಇರುವ ಇದು, ವ್ಯಾಸರಾಜರಿಂದ ಪ್ರತಿಷ್ಟಾಪಿಸಲ್ಪಟ್ಟ ಮೂರ್ತಿಗಳ ಎಲ್ಲ ಲಕ್ಷಣವನ್ನೂ ಹೊಂದಿ ನೋಡಲು ಬಹಳ ಸುಂದರವಾಗಿದೆ.  ಈ ಭವ್ಯ ಏಕಶಿಲಾ ವೀರಾಂಜನೇಯ ಮೂರ್ತಿ ಹಾಗೂ ಪ್ರಭಾವಳಿಯನ್ನು ಒಂದೇ ಕಲ್ಲಿನಲ್ಲಿ ಕೆತ್ತಲಾಗಿದೆ. ದಟ್ಟ ಕಾಡಿನ ನಡುವೆ ಇರುವ ವೀರಾಂಜನೆಯನಿಗೆ ನಿತ್ಯಪೂಜೆ ನಡೆಸುವುದು ಕಷ್ಟವಾದ್ದರಿಂದ, ಸುತ್ತಮುತ್ತಲಿನ ಗ್ರಾಮಸ್ಥರು ಪ್ರತೀ ಶನಿವಾರ ಇವನ ಸನ್ನಿಧಿಗೆ ಬಂದು ಪೂಜೆ ಸಲ್ಲಿಸಿ ಹೋಗುವುದನ್ನು ವಾಡಿಕೆ ಮಾಡಿಕೊಂಡಿದ್ದಾರೆ. ಅಪಾರ ಶಕ್ತಿವಂತ ಸ್ಥಳವಾಗಿರುವ ಈತನ ಸನ್ನಿಧಿಯಲ್ಲಿ ಬೇಡಿದ್ದು ನೆರವೇರುತ್ತದೆ ಎಂಬ ಪ್ರತೀತಿಯೂ ಇದೆ. ತೆಂಗಿನ ಕಾಯಿ ಬಾಳೆಗೊನೆ ಅರ್ಪಿಸಿದರೆ ತೋಟಗಳಲ್ಲಿ ಕೋತಿಗಳ ಹಾವಳಿ ತಪ್ಪುತ್ತದೆ ಎಂಬುದು ಸುತ್ತಮುತ್ತಲಿನ ಹಿರಿಯರ ಖಚಿತ ನುಡಿ.

ಆಸ್ತಿಕರು ವೀರಾಂಜನೇಯನ ದರ್ಶನಕ್ಕಾಗಿ ಬಂದರೆ,  ಹಲವರು ಪ್ರಕೃತಿ ಸೌಂದರ್ಯವನ್ನು ಸವಿಯಲು, ಚಾರಣ ಮಾಡಲು ಇಲ್ಲಿಗೆ ಬರುತ್ತಾರೆ. ಹನುಮನ ಸನ್ನಿಧಿಯಿಂದ ಮುಂದುವರಿದು ಅರ್ಧ ಕಿಲೋಮೀಟರ್ ಮುಂದೆ ಸಾಗಿ,  ತಪ್ಪಲನ್ನು ಇಳಿಯುತ್ತ ಹೋದರೆ ಎದುರಾಗುವದು ಕಾಳಿ ನದಿ. ಹತ್ತು-ಹಲವು ಅಚ್ಚರಿಗಳನ್ನು ಒಡಲಲ್ಲಿ ತುಂಬಿಕೊಂಡು ಹರಿಯುವ ಕಾಳಿಯ ಮಡಿಲು ಮುದ ನೀಡುತ್ತದೆ.ಕಣ್ಣು ಹಾಯಿಸಿದಷ್ಟೂ ದೂರ ಹಸಿರು. ಅಲ್ಲಿಲ್ಲಿ ಕಪ್ಪು ಚುಕ್ಕೆಯಂತೆ ಗೋಚರವಾಗುವ ಜೇನುಗಳ ಸಂಸಾರ. ಕಂಡು-ಕೇಳರಿಯದ ಜಾತಿಯ ಸಸ್ಯ ಸಂಕುಲ…ಅಬ್ಬಬ್ಬಾ…ಕಾಳಿಯ ನಿರಂತರ ಹರಿಯುವಿಕೆಯಿಂದ ಉಂಟಾದ ಬೃಹದಾಕಾರದ ಗುಂಡಿಯೊಂದಿದೆ. ಇದೇ ಬಂದೀ ಖಾನೆ ಕೊಂಡಿ. ಈ ಸ್ಥಳದ ಇತಿಹಾಸ ಕೇಳ ಹೊರಟರೆ ಮೈ ಜುಮ್ಮೆನ್ನುತ್ತದೆ. ಕೊಂಡಿಯ ಇಕ್ಕೆಲಗಳಲ್ಲಿ ಎತ್ತರದ ಗುಡ್ಡ. 45 ಡಿಗ್ರಿ ಇಳಿಜಾರು. ಹಿಂದೆ, ಅಪರಾಧಿಗಳಿಗೆ ಮರಣ ಶಿಕ್ಷೆ ನೀಡಲು ಇಲ್ಲಿಗೆ ಕರೆತರಲಾಗುತ್ತಿತ್ತು, ಗುಡ್ಡದ ಮೇಲೆ ನಿಲ್ಲಿಸಿ ಕಣ್ಣಿಗೆ ಪಟ್ಟಿ ಕಟ್ಟಿ ಕೆಳಕ್ಕೆ ನೂಕಲಾಗುತ್ತಿತ್ತಂತೆ. ಕೆಳಜಾರಿ ಬಂದ ಅಪರಾಧಿ ಗುಂಡಿ ಸೇರಿ ಮುಳುಗಿ ಸಾಯಬೇಕು. ಹಾಗೆಯೂ ಬದುಕುಳಿದರೆ, ಗುಂಡಿಯಲ್ಲಿರುವ ಮೊಸಳೆಗಳ ಉದರ ಸೇರಬೇಕು! ಸ್ಥಳಿಯರು ಹೇಳುವಂತೆ ಈಗಲೂ ಈ ಸ್ಥಳದಲ್ಲಿ ಮೊಸಳೆಗಳ ಸಂಸಾರವಿದೆ.

ಇಂಥಹ ವಿಧಾನಗಳನ್ನು ಅನುಸರಿಸುತ್ತಿದ್ದ ಬಗ್ಗೆ ಕಥೆಗಳಿವೆಯೇ ಹೊರತು ಆಧಾರವಿಲ್ಲ. ಶಿವಾಜಿಯ ಬಗ್ಗೆ, ಬೆಳವಡಿ ಮಲ್ಲಮ್ಮನ ಬಗ್ಗೆ ಇಲ್ಲಿಯ ಜನರು ಕೆಲವು ಕಥೆಗಳನ್ನು ಹೇಳುತ್ತಾರಾದರೂ,  ಯಾವ ರಾಜ, ಸಾಮಂತರ ಆಳ್ವಿಕೆಯಿತ್ತು ಎಂಬುದಕ್ಕೆ ಮಾಹಿತಿಗಳು ಲಭ್ಯವಿಲ್ಲ. ಆದರೆ, ಈ ಸ್ಥಳಕ್ಕೊಮ್ಮೆ ಭೇಟಿ ನೀಡಿದರೆ, ನೈಜತೆಯ ಅರಿವಾಗುತ್ತದೆ. ಸಂಶೋಧನಾಸಕ್ತರು, ಇತಿಹಾಸ ತಜ್ಞರು ಈ ಸ್ಥಳಕ್ಕೆ ಭೇಟಿ ನೀಡಿ ಇತಿಹಾಸವನ್ನು ಸಂಶೋಧಿಸಿ, ಕಳೆದು ಹೋದ ಇತಿಹಾಸದ ಕೊಂಡಿಯನ್ನು ಮತ್ತೆ ಜೋಡಿಸಬೇಕಿದೆ.  ರಾಜಧಾನಿ ಬೆಂಗಳೂರಿನಿಂದ ಸುಮಾರು 450 ಕಿಲೋಮೀಟರ್, ಹುಬ್ಬಳ್ಳಿಯಿಂದ ಸುಮಾರು 90 ಕಿಲೋಮೀಟರ್,  ಉಡುಪಿಯಿಂದ ಸುಮಾರು 250 ಕಿಲೋಮೀಟರ್ ದೂರದಲ್ಲಿರುವ ಈ ತಾಣ, ಶ್ರೀಮದ್ವಮಥ ಪ್ರವರ್ದನಾಚಾರ್ಯರು ಎಂದೇ ಹೆಸರಾದ  ರಾಘವೇಂದ್ರ ಸ್ವಾಮಿಗಳ ನೆಲೆಯಾದ ಮಂತ್ರಾಲಯದಿಂದ ಸುಮಾರು ಮುನ್ನೂರಾ ತೊಂಬತ್ತು ಕಿಲೋಮೀಟರು ದೂರದಲ್ಲಿದೆ. ಸಾಹಸ ಮನೋಭಾವದೊಂದಿಗೆ ಭಕ್ತಿಯನ್ನೂ ಹೊಂದಿರುವ ಜನರಿಗೆ ದರ್ಶನಯೋಗ್ಯ ತಾಣವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ