ಉತ್ತರ ಪ್ರದೇಶ: ದೂಳು ಬಿರುಗಾಳಿ, ಸಿಡಿಲು ಬಡಿದು 26 ಮಂದಿ ಸಾವು

ಲಖನೌ: ಉತ್ತರ ಪ್ರದೇಶದಲ್ಲಿ ದೂಳು ಸುನಾಮಿಗೆ ಸಿಲುಕಿ ಹಾಗೂ ಸಿಡಿಲು ಬಡಿದು 26 ಮಂದಿ ಮೃತಪಟ್ಟಿದ್ದಾರೆ ಎಂದು ಶನಿವಾರ ಅಧಿಕೃತ ವಕ್ತಾರರು ತಿಳಿಸಿದ್ದಾರೆ.

ನಿನ್ನೆ ರಾತ್ರಿ ರಾಜ್ಯದ 11 ಜಿಲ್ಲೆಗಳಲ್ಲಿ ದೂಳು ಬಿರುಗಾಳಿಗೆ ಸಿಲುಕಿ ಮತ್ತು ಸಿಡಿಲು ಬಡಿದು 26 ಮಂದಿ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.

ಜೋನ್ ಪುರ್ ಮತ್ತು ಸುಲ್ತಾನ್ ಪುರದಲ್ಲಿ ತಲಾ ಐವರು, ಉನ್ನಾವೋದಲ್ಲಿ ನಾಲ್ವರು, ಚಂದೋಳಿಯಲ್ಲಿ ಮೂವರು, ಭಹರೈಚ್ ನಲ್ಲಿ ಮೂವರು, ರಾಯ್ ಬರೇಲಿಯಲ್ಲಿ ಇಬ್ಬರು ಹಾಗೂ ಮಿರ್ಚಾಪುರ್ ಮತ್ತು ಸೀತಾಪುರ್ ದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.

ಕನೌಜ್ ಜಿಲ್ಲೆಯೂ ದೂಳು ಬಿರುಗಾಳಿಗೆ ಸಿಲುಕಿದೆ. ಆದರೆ ಪ್ರಾಣ ಹಾನಿ ಬಗ್ಗೆ ಇದುವರೆಗೂ ವರದಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.

ಮೃತರ ಕುಟುಂಬಕ್ಕೆ ಕೂಡಲೇ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜಿಲ್ಲಾ ಆಡಳಿತಕ್ಕೆ ಸೂಚಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ