ಜಿ.ಟಿ.ದೇವೇಗೌಡರಿಗೆ ಉನ್ನತ ಶಿಕ್ಷಣ ಖಾತೆಗೆ ವಿರೋಧ; ಪುತ್ರ ಹರೀಶ್ ಗೌಡರಿಗೆ ಘೇರಾವ್

 

ಬೆಂಗಳೂರು, ಜೂ.9- ಶಾಸಕ ಜಿ.ಟಿ.ದೇವೇಗೌಡರಿಗೆ ಉನ್ನತ ಶಿಕ್ಷಣ ಖಾತೆ ನೀಡಿರುವುದನ್ನು ವಿರೋಧಿಸಿ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿ ಜಿ.ಟಿ.ದೇವೇಗೌಡ ಅವರ ಪುತ್ರ ಹರೀಶ್ ಗೌಡರಿಗೆ ಘೇರಾವ್ ಮಾಡಿದರು.
ಉನ್ನತ ಶಿಕ್ಷಣ ಖಾತೆಯನ್ನು ನಿರಾಕರಿಸಬೇಕು, ಕಂದಾಯ ಅಥವಾ ಅಬಕಾರಿ ಖಾತೆ ನೀಡುವಂತೆ ಜೆಡಿಎಸ್ ವರಿಷ್ಠರನ್ನು ಒತ್ತಾಯಿಸುವಂತೆ ಬೆಂಬಲಿಗರು ಆಗ್ರಹಿಸಿದರು.

ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರನ್ನೇ ಸೋಲಿಸಿದ ಜಿ.ಟಿ.ದೇವೇಗೌಡರಿಗೆ ಅತ್ಯಂತ ಪ್ರಮುಖ ಖಾತೆ ನೀಡಬೇಕಾಗಿತ್ತು. ಉನ್ನತ ಶಿಕ್ಷಣ ಖಾತೆಯನ್ನು ನಿರಾಕರಿಸಬೇಕಿತ್ತು ಎಂದು ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದರು.
ನೀವು ಕೂಡ ಹುಣಸೂರು ಕ್ಷೇತ್ರವನ್ನು ಎಚ್.ವಿಶ್ವನಾಥ್‍ಗಾಗಿ ಬಿಟ್ಟುಕೊಟ್ಟಿದ್ದೀರಾ ಹಾಗಾಗಿ ನಿಮ್ಮ ತಂದೆ ಪ್ರಮುಖ ಖಾತೆ ನೀಡಬೇಕಿತ್ತು. ತಂದೆ-ಮಗ ಏಕೆ ಸುಮ್ಮನಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಬಲಿಗರು, ಅಭಿಮಾನಿಗಳು ಪ್ರತಿಭಟನೆಗೆ ಬರುತ್ತಿದ್ದಾರೆ ಎಂಬ ವಿಷಯ ತಿಳಿದ ಜಿ.ಟಿ.ದೇವೇಗೌಡ ಮನೆಯಿಂದ ಹೊರಗೆ ಹೊರಟುಹೋಗಿದ್ದು ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ.
ಇದರಿಂದಾಗಿ ಅವರ ಪುತ್ರ ಹರೀಶ್‍ಗೌಡ ಅಭಿಮಾನಿಗಳನ್ನು ಸಮಾಧಾನಪಡಿಸಲು ಮುಂದಾದರು. ಆದರೆ ಯಾರೂ ಸಮಾಧಾನಗೊಳ್ಳದೆ ಅವರನ್ನೇ ತರಾಟೆಗೆ ತೆಗೆದುಕೊಂಡರು.
ಒಂದು ಮೂಲದ ಪ್ರಕಾರ ಜಿ.ಟಿ.ದೇವೇಗೌಡರು ತಮಗೆ ಪ್ರಮುಖ ಖಾತೆ ನೀಡದ ಹಿನ್ನೆಲೆಯಲ್ಲಿ ಸರ್ಕಾರಿ ಕಾರು ಕೊಂಡಯ್ಯದೆ ಖಾಸಗಿ ಕಾರಿನಲ್ಲಿ ಹೋಗಿದ್ದಾರೆ ಎನ್ನಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ