ಫೇಸ್ ಬುಕ್ ತಾಂತ್ರಿಕ ದೋಷ: 14 ಮಿಲಿಯನ್ ಬಳಕೆದಾರರ ಖಾಸಗಿ ಪೋಸ್ಟ್ ಗಳು ಲೀಕ್!

ನ್ಯೂಜೆರ್ಸಿ: ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ಯಡವಟ್ಟುಗಳ ಸರಮಾಲೆ ಮುಂದುವರೆದಿದ್ದು, ಇದೀಗ ಹೊಸ ಸೇರ್ಪಡೆ ಎಂಬಂತೆ ತಾಂತ್ರಿಕ ದೋಷದಿಂದಾಗಿ ಫೇಸ್ ಬುಕ್ ಸುಮಾರು 14 ಮಿಲಿಯನ್ ಬಳಕೆದಾರರ ಪೋಸ್ಟ್ ಗಳು ಲೀಕ್ ಆಗಿವೆ.

ಫೇಸ್ ಬುಕ್ ಬಳಕೆದಾರರು ಖಾಸಗಿಯಾಗಿ ಹಾಕಿದ್ದ ಪೋಸ್ಟ್ ಗಳು ಇದೀಗ ಸಾರ್ವಜನಿಕವಾಗಿದ್ದು, ವ್ಯಕ್ತಿಯಿಂದ ವ್ಯಕ್ತಿಗೆ ರವಾನೆ ಮಾಡಲಾಗಿದ್ದ ಸುಮಾರು 14 ಮಿಲಿಯನ್ ಬಳಕೆದಾರರ ಪೋಸ್ಚ್ ಗಳು ಇದೀಗ ಸಾರ್ವಜನಿಕವಾಗಿದೆ.

ಫೇಸ್ ಬುಕ್ ತಂತ್ರಜ್ಞರ ಪ್ರಕಾರ ಮೇ 18 ರಿಂದ ಮೇ 27ರವರೆಗೂ ಈ ತಾಂತ್ರಿಕ ದೋಷ ಮುಂದುವರೆದಿತ್ತು. ಈ ದೋಷದಿಂದಾಗಿ ಬಳಕೆದಾರರ ಖಾಸಗಿ ಭದ್ರತಾ ಸೆಟ್ಟಿಂಗ್ ಗಳು ಬದಲಾಗಿ ಎಲ್ಲ ಪೋಸ್ಟ್ ಗಳು ಸಾರ್ವಜನಿಕವಾಗಿದೆ. ಈ ಪೋಸ್ಟ್ ಗಳು ಬಹಿರಂಗವಾಗಿರುವ ಕುರಿತು ಬಳಕೆದಾರರಿಗೂ ಯಾವುದೇ ಮಾಹಿತಿ ಹೋಗಿಲ್ಲ. ಪ್ರಸ್ತುತ ಈ ಸಮಸ್ಯೆಯನ್ನು ಸರಿ ಪಡಿಸಲಾಗಿದ್ದು, ಬಳಕೆದಾರರು ಆತಂಕ ಪಡುವ ಅಗತ್ಯ ಇಲ್ಲ ಎಂದು ಫೇಸ್ ಬುಕ್ ಹೇಳಿಕೊಂಡಿದೆ.

ಅಂತೆಯೇ ದೋಷದಿಂದಾಗಿ ಅನಾನುಕೂಲಕ್ಕೊಳಗಾಗಿರುವ ಬಳಕೆದಾರರಿಗೆ ಗುರುವಾರದಿಂದಲೇ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದೇವೆ. ಅವರ ಯಾವುದೇ ಪೋಸ್ಟ್ ಗಳು ಬಹಿರಂಗವಾಗಿದ್ದರೆ ಅಂತಹ ಪೋಸ್ಟ್ ಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಮೊದಲಿಗೆ ಈ ಅನಾನುಕೂಲಕ್ಕಾಗಿ ಬಳಕೆದಾರರಲ್ಲಿ ನಾವು ಕ್ಷಮೆ ಕೇಳುತ್ತೇವೆ ಎಂದು ಫೇಸ್ ಬುಕ್ ಸಂಸ್ಥೆಯ ಭದ್ರತಾ ವಿಭಾಗ ಮುಖ್ಯಸ್ಥ ಎರಿನ್ ಎಗಾನ್ ಹೇಳಿದ್ದಾರೆ.

ಇತ್ತೀಚೆಗಷ್ಟೇ ಇದೇ ಫೇಸ್ ಬುಕ್ ಗ್ರಾಹಕರ ಮಾಹಿತಿ ಸಂಗ್ರಹಣಕ್ಕೆ ಸಂಬಂಧಿಸಿದಂತೆ ಕೇಂಬ್ರಿಡ್ಜ್ ಅನಲಿಟಿಕಾ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಆ ಸಂಸ್ಥೆ ಕೋಟ್ಯಂತರ ಬಳಕೆದಾರರ ಮಾಹಿತಿ ಸೋರಿಕೆ ಮಾಡಿತ್ತು. ಇದರ ಬೆನ್ನಲ್ಲೇ ಇದೇ ಫೇಸ್ ಬುಕ್ ಚೀನಾದ ನಾಲ್ಕು ಸಂಸ್ಥೆಗಳೂ ಸೇರಿದಂತೆ ವಿಶ್ವಾದ್ಯಂತ ಸುಮಾರು 40ಕ್ಕೂ ಹೆಚ್ಚು ಸಂಸ್ಥೆಗಳೊಂದಿಗೆ ಗ್ರಾಹಕರ ಮಾಹಿತಿ ಹಂಚಿಕೊಳ್ಳುವ ಕುರಿತು ಒಪ್ಪಂದ ಮಾಡಿಕೊಂಡಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ