ಏಕಜಾತಿ ನೆಡುತೋಪು ನಿರ್ಮಾಣಕ್ಕಾಗಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ 10,000 ಹೆಕ್ಟೇರ್ ಭೂಮಿ ನೀಡಿಕೆಗೆ ವೃಕ್ಷಲಕ್ಷ ಆಂದೋಲನ ತೀವೃ ವಿರೋಧ

ಶಿರಸಿ :

ಪಶ್ಚಿಮ ಘಟ್ಟ ಪ್ರದೇಶದಲ್ಲಿ 10000 ಹೆಕ್ಟೇರ್ ನೆಡುತೋಪು ಬೆಳೆಸಲು ಅಗತ್ಯವಾದ ಭೂಮಿಯನ್ನು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮಕ್ಕೆ ನೀಡಲು ರಾಜ್ಯ ಅರಣ್ಯ ಇಲಾಖೆ ತಯಾರಿ ನಡೆಸಿದೆ ಎಂಬ ಸಂಗತಿ ತೀರಾ ಕಳವಳಕಾರಿ ಅಂಶವಾಗಿದೆ. ಜಿಲ್ಲಾ ಅರಣ್ಯ ಇಲಾಖೆಗಳಿಗೆ ಈ ಬಗ್ಗೆ ರಾಜ್ಯ ಅರಣ್ಯ ಇಲಾಖೆ ಸೂಚನೆ ನೀಡಿದೆ ಎಂಬ ಸಂಗತಿಯನ್ನು ವೃಕ್ಷಲಕ್ಷ ಆಂದೋಲನ ಬಹಿರಂಗ ಪಡಿಸಿದೆ. ಇನ್ನಷ್ಟು ಜೀವವೈವಿಧ್ಯ ನಾಶ ಮಾಡುವ ನೆಡುತೋಪು ಯೋಜನೆ ಕೈಬಿಡಬೇಕು. ಈ ಬಗ್ಗೆ ರಾಜ್ಯ ಅರಣ್ಯ -ಪರಿಸರ ಕಾರ್ಯದರ್ಶಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿಗಳಿಗೆ ತುರ್ತು ಪತ್ರ ಬರೆಯಲಾಗಿದೆ ಎಂದು ವೃಕ್ಷ ಲಕ್ಷ ಆಂದೋಲನ ತಿಳಿಸಿದೆ.

ಕಳೆದ 3 ದಶಕಗಳಲ್ಲಿ ಪಶ್ಚಿಮಘಟ್ಟ ಪ್ರದೇಶದಲ್ಲಿ ಲಕ್ಷಾಂತರ ಎಕರೆ ನೆಡುತೋಪು ನಿರ್ಮಾಣದಿಂದ ಸ್ವಾಭಾವಿಕ ಅರಣ್ಯ ನಾಶವಾಗಿದೆ. ಬುಲ್ಡೋಜರ್ ಕಾಮಗಾರಿ ನಡೆಸಿ, ಬೆಂಕಿ ಹಾಕಿ ಸ್ವಾಭಾವಿಕ ಸಸ್ಯ ಸಂಪತ್ತು ಕಣ್ಮರೆ ಆಗಿದೆ. ಔಷಧೀ ಗಿಡಮರಗಳು ಇಲ್ಲವಾಗಿವೆ. ನೀಲಗಿರಿ, ಅಕೇಶಿಯಾ ನೆಡುತೋಪುಗಳಿಂದ ವನ್ಯಜೀವಿಗಳು ರೈತರ ಹೊಲಗದ್ದೆಗಳಿಗೆ ಬಂದಿವೆ. ಅಂತರ್ಜಲ ನಾಶವಾಗಿದೆ. ಗೋಮಾಳಗಳು ಮಾಯವಾಗಿದೆ. ಇದೀಗ ಸತತ ಒತ್ತಡದ ನಂತರ ಅಕೇಶಿಯಾ ನೆಡುತೋಪು ಬೆಳೆಸಲು ನಿಷೇಧ ಹಾಕಲಾಗಿದೆ.

’80’ ರ ದಶಕದಲ್ಲಿ ಜನಾಂದೋಲನದ ನಂತರ ಕನರ್ಾಟಕ ಪಲ್ಪವುಡ್ ಸಂಸ್ಥೆಗೆ ಶಿವಮೊಗ್ಗಾ ಜಿಲ್ಲೆಯಲ್ಲಿ ನೀಡಿದ್ದ ಒಂದು ಲಕ್ಷ ಎಕರೆ ಭೂಮಿಯನ್ನು ಸರ್ಕಾರ ಹಿಂಪಡೆದಿತ್ತು (1991) . ಈ ಸಂದರ್ಭದಲ್ಲಿ ಮಲೆನಾಡಿನಲ್ಲಿ ಗ್ರಾಮಸಾಮೂಹಿಕ ಭೂಮಿ ಉಳಿಸಿ ಚಳುವಳಿ ನಡೆದಿತ್ತು ಎಂಬುದನ್ನು ಇಲ್ಲಿ ನೆನಪಿಸಲಾಗಿದೆ. ಮೈಸೂರು ಕಾಗದ ಕಾರ್ಖಾನೆ (ಎಂ.ಪಿ.ಎಂ) ಗೆ ನೆಡುತೋಪು ಬೆಳೆಸಲು 75000 ಎಕರೆ ಭೂಮಿಯನ್ನು ಮಲೆನಾಡಿನಲ್ಲಿ ನೀಡಿದ ಬಗ್ಗೆ ಹಳ್ಳಿ ಹಳ್ಳಿಗಳಲ್ಲಿ ವೃಕ್ಷಲಕ್ಷ ಆಂದೋಲನ ಹೋರಾಟ ನಡೆಸಿತ್ತು. ಇದೀಗ ಎಂ.ಪಿ.ಎಂ ನೆಡುತೋಪು ಭೂಮಿ ಹಾಳು ಬಿದ್ದಿದೆ. ಅತಿಕ್ರಮಣಕ್ಕೆ ಒಳಗಾಗಿದೆ. ಈ ಭೂಮಿಯನ್ನು ಅರಣ್ಯ ಇಲಾಖೆ ಎಂ.ಪಿ.ಎಂ ನಿಂದ ಹಿಂದಕ್ಕೆ ಪಡೆಯಬೇಕು ಎಂದು ಸತತ ಆಗ್ರಹ ಮಾಡುತ್ತಿರುವುದನ್ನು ಇಲ್ಲಿ ನೆನಪಿಸಲಾಗಿದೆ.

ಅರಣ್ಯ ಅಭಿವೃದ್ಧಿ ನಿಗಮಕ್ಕೆ 10000 ಹೆಕ್ಟೇರ್ ಭೂಮಿ ನೀಡುವ ಮೊದಲು ಈವರೆಗೆ ಅವರಿಗೆ ನೀಡಿದ ಭೂಮಿ ಏನಾಗಿದೆ ನೋಡಿ ಎಂದು ಅರಣ್ಯ ಇಲಾಖೆ ಮುಖ್ಯಸ್ಥರನ್ನು ಆಗ್ರಹಿಸಲಾಗಿದೆ.

ಅರಣ್ಯ ಇಲಾಖೆ ಪಶ್ಚಿಮ ಘಟ್ಟದ ನೈಸರ್ಗಿಕ ಅರಣ್ಯ, ಕಾನು ಇತ್ಯಾದಿ ಡೀಮ್ಡ್ ಅರಣ್ಯಗಳ ರಕ್ಷಣೆಗೆ ಮುಂದಾಗಬೇಕು. ಗ್ರಾಮ ಅರಣ್ಯ ಸಮೀತಿಗಳ ಮೂಲಕ ವೈವಿಧ್ಯಮಯಗಿಡಮರ ಬೆಳೆಸಲು ಮುಂದಾಗಬೇಕು. ನೆಡುತೋಪಿಗೆ ಭೂಮಿ ನೀಡಿದರೆ ಜೀವ ವೈವಿಧ್ಯ ಕಾಯಿದೆ, ಅರಣ್ಯ ವನ್ಯ ಜೀವಿ ಕಾಯಿದೆಗಳ ಉಲ್ಲಂಘನೆ ಆಗುತ್ತವೆ. ಉ.ಕ, ಶಿವಮೊಗ್ಗಾ, ದ. ಕ. ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಏಕಜಾತಿ ಕೈಗಾರಿಕಾ ನೆಡುತೋಪು ಬೆಳೆಸಲು ಭೂಮಿ ನೀಡುವ ನಿರ್ಧಾರ ಕೈಬಿಡಿ ಎಂದು ವೃಕ್ಷಲಕ್ಷ ಆಂದೋಲನ ವೃಕ್ಷಲಕ್ಷ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಪರಿಸರ ವಿಜ್ಞಾನಿಗಳಾದ ಡಾ|| ಕೇಶವ್, ಡಾ|| ರಾಮಚಂದ್ರ, ಕುಮಾರಸ್ವಾಮಿ, ಗಜೇಂದ್ರ, ರಾಘವೇಂದ್ರ, ವೆಂಕಟೇಶ್, ಇವರು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.

ಈಗಾಗಲೇ ಆಗಿರುವ ಹಾನಿ

ಎಂ.ಪಿ.ಎಂ,ಕೆ.ಪಿ.ಎಲ್,ಕೆ.ಎಫ್.ಡಿ.ಸಿ ಮುಂತಾದ ಸಂಸ್ಥೆಗಳು ಪಶ್ಚಿಮ ಘಟ್ಟದಲ್ಲಿ ಕೈಗಾರಿಕಾ ನೆಡುತೋಪು, ಏಕಜಾತಿ ನೆಡುತೋಪುಗಳನ್ನು ಬೆಳೆಸುವ ಯೋಜನೆಗಳಿಂದ ಆಗಿರುವ ಅನಾಹುತಗಳು ಅಪರಿಮಿತ. ಔಷಧೀ ಸಸ್ಯಗಳ ನಾಶವಾಗಿದೆ, ಜಾನುವಾರು ಮೇವಿಗೆ ಜಾಗ ಇಲ್ಲ. ಕಾನು, ದೇವರ ಕಾಡುಗಳು ನೆಲೆ ಕಳೆದುಕೊಂಡಿವೆ. ಅಕೇಶಿಯಾಕ್ಕೆ ಬಂದ ಹುಳುಬಾಧೆ ಊರಿಗೇ ವ್ಯಾಪಿಸಿದೆ. ಸ್ಥಾನಿಕ ರೈತರ, ವನವಾಸಿಗಳಿಗೆ ಅರಣ್ಯ ಉಪಉತ್ಪನ್ನ ಇಲ್ಲವಾಗಿದೆ.ಕಾಡಿನ ಜೇನು ಸಂತತಿ ವಿನಾಶದ ಅಂಚಿಗೆ ಬಂದಿದೆ. ಏಕಜಾತಿಯ ಕೈಗಾರಿಕಾ ನೆಡುತೋಪು ನಿರ್ಮಾಣದಿಂದ ಪಶ್ಚಿಮ ಘಟ್ಟದಲ್ಲಿ ವನ್ಯ ಜೀವಿಗಳ ಆವಾಸ ಸ್ಥಾನಕ್ಕೆ ತೀವ್ರ ಧಕ್ಕೆ ಆಗಿದೆ. ಘಟ್ಟದ ನದೀ ಕಣಿವೆಗಳಲ್ಲಿ ಸಿಹಿ ನೀರ ಜಡ್ಡಿಗಳಿಗೆ ಸ್ವಾಭಾವಿಕ ಅರಣ್ಯ ನಾಶವಾಗಿ ನಡುತೋಪು ನಿರ್ಮಾಣವಾಗಿ ಸಿಹಿ ನೀರ ಜಡ್ಡಿಗಳು ನಾಶವಾಗಿವೆ. ನೀರಿನ ಹರಿವು ನಿಂತಿದೆ. ಗೋಮಾಳ, ಜಾಡಿ, ಸೊಪ್ಪಿಗೆ ಮುಫತ್ತು, ಕಾನು ಮುಂತಾದ ಗ್ರಾಮ ಸಾಮೂಹಿಕ ಭೂಮಿ ನಾಶವಾಗಿವೆ, ರೈತರ ಸಾಂಪ್ರದಾಯಿಕ ಹಕ್ಕುಗಳಿಗೆ ಧಕ್ಕೆ ಬಂದಿದೆ. ಅಪಾರ ಪ್ರಮಾಣದಲ್ಲಿ ಇದ್ದ ಕಾಡಿನ ಹಣ್ಣಿನ ಜಾತಿಯ ಗಿಡಗಳ ಸಂತತಿ ಇಲ್ಲವಾಗಿದೆ.

ಪಶ್ಚಿಮ ಘಟ್ಟದಲ್ಲಿ ಏಕಜಾತಿ ನೆಡು ತೋಪುಗಳು ಬೇಡ ಎಂದು ರಾಜ್ಯ ಉಚ್ಛ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಏಕ ಜಾತಿ ನೆಡುತೋಪುಗಳ ನಿಮರ್ಾಣ ವಾಣಿಜ್ಯಿಕ ಉದ್ದೇಶ ಹೊಂದಿವೆ. ಇದು ಪಶ್ಚಿಮ ಘಟ್ಟದ ಜೀವ ವೈವಿಧ್ಯಕ್ಕೆ ಅಪಾರ ಹಾನಿ ತಂದಿದೆ.

ಶಿವಮೊಗ್ಗಾ ಉ.ಕ ಚಿಕ್ಕಮಗಳೂರು ಜಿಲ್ಲೆಗಳ ಅರಣ್ಯ ಪರಿಸ್ಥಿತಿ ಅಧ್ಯಯನ ವರದಿ, ಶರಾವತಿ ಕಣಿವೆ ಪರಿಸರ ಅಧ್ಯಯನ ವರದಿ (ಭಾರತೀಯ ವಿಜ್ಞಾನ ಸಂಸ್ಥೆ) ಇವು ಏಕಜಾತಿ ನೆಡು ತೋಪು ನಿರ್ಮಾಣದಿಂದ ಪಶ್ಚಿಮ ಘಟ್ಟದ ನದಿ ಕಣಿವೆಗಳು ಛಿದ್ರವಾಗಿವೆ. ಎಂದು ಅಭಿಪ್ರಾಯ ಪಟ್ಟಿವೆ.

. ಈ ಬಗ್ಗೆ ರಾಜ್ಯ ಕೇಂದ್ರ ಪರಿಸರ ಅರಣ್ಯ ಮಂತ್ರಾಲಯಗಳ ಗಮನ ಸೆಳೆಯಲಾಗಿದೆ. ರಾಜ್ಯ ಅರಣ್ಯ-ಪರಿಸರ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಅಗ್ರಹಿಸಲಾಗುತ್ತದೆ. ಘಟ್ಟದ ಜಿಲ್ಲೆಗಳಲ್ಲಿ ಈ ಕುರಿತು ಜನ ಪ್ರತಿನಿಧಿಗಳ ಗಮನ ಸೆಳೆಯಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ