ಬೆನ್ನಮೇಲೆ ಸಹಸ್ರಾರು ಮರಿಗಳನ್ನು ಕೂಸುಮರಿ ಮಾಡಿಕೊಂಡೇ ಬೆಳೆಸುವ ತೋಳ ಜೇಡ ಎಂಬ ವಿಸ್ಮಯಕರ ಮಹಾಮಾತೆ

ಗುರುಪ್ರಸಾದ ಕಾನ್ಲೆ

-ಹವ್ಯಾಸಿ ಬರಹಗಾರರು

(8147688898)

ಪಶ್ಚಿಮಘಟ್ಟ ಎಂಬ ಹೆಸರೇ ಪರಿಸರ ಪ್ರೇಮಿಗಳಿಗೆ ಆಹ್ಲಾದಕರ. ಉತ್ತರದ ತಪತಿ ನದಿಯ ದಕ್ಷಿಣದಿಂದ ಪಶ್ಚಿಮ ಕರಾವಳಿಯುದ್ದಕ್ಕೂ ಸಾಗಿ ತಮಿಳುನಾಡಿನ ದಕ್ಷಿಣ ತುದಿಯಲ್ಲಿ ಕೊನೆಗೊಳ್ಳುವ ಈ ಬೆಟ್ಟಗುಡ್ಡಗಳ ಸಾಲು, ಅದ್ಭುತ ಪ್ರಕೃತಿ ಸೌಂದರ್ಯವನ್ನು ಒಳಗೊಂಡಿದೆ. ಈ ಪಶ್ಚಿಮ ಘಟ್ಟಗಳ ಸಾಲು ಅಸಂಖ್ಯಾತ ವಿಧದ ಪ್ರಾಣಿ, ಪಕ್ಷಿ, ಕೀಟಗಳಿಗೂ ಆವಾಸಸ್ಥಾನ ಆಗಿದೆ.

ಈ ಪಶ್ಚಿಮ ಘಟ್ಟಗಳ ನಡುವೆಯೇ ಹುಟ್ಟಿ ಬೆಳೆದವರಿಗೆ ವಿಶೇಷ ರೂಪ, ಗುಣದ ಜೀವಿಗಳು ಕಾಣುವುದು ಸರ್ವೇಸಾಮಾನ್ಯ ಆಗಿರುತ್ತದೆ. ಅಂತಹದ್ದೇ ತಾಣವೊಂದರಲ್ಲಿ ಇತ್ತೀಚಿಗೆ, ರಾತ್ರಿ ಹನ್ನೊಂದು ಗಂಟೆಯ ಸಮಯದಲ್ಲಿ ಅದ್ಭುತ ಜೀವಿಯೊಂದನ್ನು ಕಂಡೆ. ತಡರಾತ್ರಿಯ ತನಕ ಏನೋ ಬರೆಯುತ್ತಿದ್ದವನು ಬರೆಯಲಾಗುತ್ತಿಲ್ಲ ಎಂದು ಎದ್ದೆ. ಇನ್ನೇನು ಮಲಗಬೇಕು ಅಂತ ಹೊರಗಿನ ಲೈಟ್ ಆರಿಸಲು ಬಂದೆ. ಹೊರಗೆ ವಿದ್ಯುದ್ದೀಪದ ಬೆಳಕಿಗೆ ಅಸಂಖ್ಯ ಹುಳಗಳು, ಪತಂಗಗಳು ಹಾರಾಡುತ್ತಿದ್ದವು. ಕೆಳಗೂ ಹಾಸಿದಂತೆ ಬಿದ್ದಿದ್ದವು. ಅದರ ನಡುವೆಯೇ ತಟ್ಟನೆ ಗಮನ ಸೆಳೆದಿದ್ದು ಸಾಧಾರಣ ಗಾತ್ರಕ್ಕಿಂತ ದೊಡ್ಡದಾದ ಜೇಡ. ಶಿರಸಿ ಭಾಗದ ಸುಲಿದಿಟ್ಟ ಬೆಟ್ಟೇಅಡಿಕೆಯ ಗಾತ್ರದ ಈ ಜೇಡ, ಮೊದಲಿಗೆ ಗಾತ್ರದಲ್ಲಿ ದೊಡ್ಡದಿದೆ ಇದು ಎಂಬ ಒಂದೇ ಕಾರಣಕ್ಕೆ ಗಮನ ಸೆಳೆದರೂ ಹತ್ತಿರದಿಂದ ಗಮನಿಸಿದಾಗ ಅಲ್ಲಿ ಏನೋ ವಿಶೇಷವಿದ್ದಂತೆ ಕಾಣಿಸಿತು. ಜೇಡದ ಬೆನ್ನಮೇಲೆ ದೊರಗುದೊರಗಾಗಿ ಕಂಬಳಿ ಹೊದ್ದುಕೊಂಡಂತ ರಚನೆ ಕಾಣಿಸಿತು. ಬಿಡು ಏನೋ ವಿಶಿಷ್ಟವಾಗಿದೆ ಎಂದು ಹಾಗೆಯೇ ಮೊಬೈಲ್‌ನಿಂದ ನಾಲ್ಕಾರು ಫೋಟೋಗಳನ್ನು ತೆಗೆದೆ. ಫ್ಲ್ಯಾಶ್‌‌‌ ಹಾಕಿ ಫೋಟೋ ತೆಗೆಯುತ್ತಿರುವಾಗಲೂ ಒಂದಿನಿತೂ ಅಲುಗಾಡದೇ ಸುಮ್ಮನೇ ಕುಳಿತಿರುವ ಜೇಡನನ್ನು ನೋಡಿದರೆ ಜೀವ ಇದೆಯೋ ಇಲ್ಲವೋ ಎನಿಸುತ್ತಿತ್ತು. ಆದರೆ ತನ್ನ ಕಾಲಿನ ಬಳಿ ಬೇರೆ ಹುಳಗಳು ಬಂದಾಗ ಮಾತ್ರ ಕಾಲಿನಿಂದ ಆ ಹುಳಗಳನ್ನು ದೂರತಳ್ಳುತ್ತಿತ್ತು.

ಹಾಗೆಯೇ ಪರಿಶೀಲನೆ ಮಾಡುತ್ತಿರುವಾಗ ಹಠಾತ್ತಾಗಿ  ಅದರ ಬೆನ್ನಮೇಲೆ ಏನೋ ಚಲಿಸಿದಂತೆ ಅನಿಸಿತು. ಅರೆ ಏನಿದು ಬೆನ್ನಮೇಲೆ ಎಂಬ ಕುತೂಹಲ ಕೆರಳಿತು. ಅಂದು ನನ್ನ ಕ್ಯಾಮರಾ ಹತ್ತಿರದಲ್ಲಿ ಇರಲಿಲ್ಲ. ಹಾಗಾಗಿ ಬ್ಯಾಗಿನಲ್ಲಿದ್ದ ಮೊಬೈಲ್ ಮೈಕ್ರೋಲೆನ್ಸ್ ತೆಗೆದು ಫೋಟೋ ತೆಗೆದೆ. ವೀಡಿಯೋ ಮಾಡತೊಡಗಿದಾಗ ಕಂಡಿತು ನೋಡಿ ಈ ಅದ್ಭುತ……!!!!! ಆ ಬೃಹತ್ ಜೇಡದ ಬೆನ್ನ ತುಂಬಾ ಚಿಕ್ಕಚಿಕ್ಕ ಮರಿಗಳು.. ಒಂದು ಕ್ಷಣ ಮೈ ಜುಮ್ಮೆಂದಿತು ಕಣ್ರೀ. ರೋಮಾಂಚನವಾಯಿತು. ಒಂದೆರಡಲ್ಲ.. ಮೈತುಂಬಾ ಅಂದರೆ ಬಹುಶಃ ಸಾವಿರಾರು ಮರಿಗಳಿದ್ದವೇನೋ..?? ಬಹಳ ಚಿಕ್ಕವನಿದ್ದಾಗ ಒಮ್ಮೆ ನೋಡಿದ್ದೆ ಈ ಜೇಡವನ್ನು. ಆಗ ಗೊತ್ತಿಲ್ಲದೇ ಹೊಡೆದೋಡಿಸಿದ್ದೆ ಅದನ್ನು.

ಈಗ ಅಲ್ಲೇ ಕುಳಿತು ಕೂಲಂಕಷವಾಗಿ ಅದರ ಪರಿಶೀಲನೆ ಮಾಡತೊಡಗಿದೆ. ಬೆನ್ನ ಮೇಲೆ ಒತ್ತೊತ್ತಾಗಿ ಅಸಂಖ್ಯಾತ ಸಣ್ಣಸಣ್ಣ ಮರಿಗಳು ಕಾಣಿಸತೊಡಗಿದವು. ಬಹುಶಃ ಈ ಮಹಾತಾಯಿ ಆ ಸಾವಿರಾರು ಮರಿಗಳನ್ನು ತನ್ನ ಬೆನ್ನಮೇಲೆ ಕೂಸುಮರಿ ಮಾಡಿಸಿಕೊಂಡು, ಆಹಾರ ಹುಡುಕಲು ಬಂದಿದ್ದಾಳೆ, ದೀಪದ ಬೆಳಕಿನ ಕೆಳಗೆ ಹರಿದಾಡುತ್ತಿರುವ ಸಾವಿರಾರು ಕೀಟ, ಹುಳ, ಹುಪ್ಪಡಿಗಳನ್ನು ಯಾವುದೇ ಶ್ರಮವಿಲ್ಲದೇ ಬೇಟೆಯಾಡುತ್ತಿದ್ದಾಳೆ ಅನ್ನಿಸಿತು ನನಗೆ. ಹಾಗೆಯೇ ಮ್ಯಾಕ್ರೋಲೆನ್ಸ್‌ನಲ್ಲಿ ನೋಡುತ್ತಿರುವಾಗ ಚಿಕ್ಕ ಮರಿಗಳ ಕಾಲುಗಳು, ಹೊಟ್ಟೆ, ಎಲ್ಲ ಕಾಣುತ್ತಿದ್ದವು. ಕ್ಯಾಮರಾ ಇರದ ಕಾರಣ ಮೊಬೈಲಿನಲ್ಲೇ ವೀಡಿಯೋ ಮಾಡತೊಡಗಿದೆ. ನಡುವೆ ಮಡದಿಯನ್ನೂ ಕರೆದು ಅವಳಿಗೂ ತೋರಿಸಿದೆ. ಅವಳಿಗೆ ಈ ಕೀಟಪ್ರಪಂಚ ಕಂಡರಾಗದು. ಹಾಗೆಯೇ ಕಸಬರಿಗೆ ತಂದು ಗುಡಿಸಿಬಿಡುತ್ತಾಳೆ. ಆದರೆ ಈ ದೃಶ್ಯ ನೋಡಿ ಅವಳೂ ಬೆರಗಾಗಿದ್ದಳು.

ಮಹಿಳೆಯರಿಗೆ ಜೇಡ ಎಂಬ ಜಾತಿಯನ್ನು ಕಂಡರಾಗುವುದಿಲ್ಲ. ಮೂಲೆಮೂಲೆಗಳಲ್ಲಿ ಬಲೆ ಕಟ್ಟುತ್ತವೆ ಎಂಬುದು ಅವರ ಬಹುದೊಡ್ಡ ತಲೆನೋವು. ಆದರೆ, ಜೇಡಗಳು ಅನಿವಾರ್ಯ ಯಾಕೆಂದರೆ, ಇವು ಜಗತ್ತಿನ ಎಲ್ಲ ಭಾಗಗಳಲ್ಲಿ ಕಂಡುಬರುವ ಕೀಟ ಪ್ರಭೇದ. ಇದರಲ್ಲಿ ತರಹೇವಾರಿ ಜಾತಿಗಳು. 350 ಮಿಲಿಯ ವರ್ಷಗಳಿಂದ ಇವು ಭೂಮಿಯಲ್ಲಿ ವಾಸವಾಗಿವೆ. ಜಗತ್ತಿನಲ್ಲಿ 40 ಸಾವಿರ ಜಾತಿಯ ಜೇಡಗಳಿವೆ ಎಂದು ಅಂದಾಜಿಸಲಾಗಿದ್ದು. ಭಾರತದಲ್ಲಿ 1,500 ಜಾತಿಯ ಜೇಡಗಳನ್ನಷ್ಟೇ ಗುರುತಿಸಲಾಗಿದೆ. ಜೇಡ ತನ್ನ ಎಂಜಲಿನಿಂದ ನಾನಾ ವಿಧದ ಸುಂದರ ಬಲೆ ಹೆಣೆದು ಅದರ ಮಧ್ಯೆ ವಾಸಿಸುತ್ತದೆ. ಆ ಬಲೆಗೆ ಬಿದ್ದ ಹುಳಹುಪ್ಪಟೆಗಳೇ ಇದರಆಹಾರ. ಇದರ ಹೊಟ್ಟೆಯಲ್ಲಿರುವ ದ್ರವ ಬಾಯಿಯಿಂದ ಹೊರಬಂದೊಡನೇ ಗಾಳಿ ತಗುಲಿ ಗಟ್ಟಿಯಾಗುತ್ತದೆ. ಆ ಬಲೆಯ ಎಳೆ ಕೂದಲಿಗಿಂತ ಸಣ್ಣದಾಗಿದ್ದರೂ, ಉಕ್ಕಿನ ದಾರದಂತೆ ಹರಿಯದ, ಮುರಿಯದ ಗುಣ ಹೊಂದಿರುತ್ತದೆ. ಸಾಮಾನ್ಯವಾಗಿ ಹೆಣ್ಣು ಜೇಡವೇ ಬಲೆ ನೇಯುತ್ತದೆ. ಕೀಟಗಳಿಗೆ ಅಂಟುವ ಜೇಡನ ಬಲೆ ಜೇಡನಿಗೆ ಮಾತ್ರ ಅಂಟದು. ಜೇಡ ಸುಮಾರು 25 ವರ್ಷ ಬದುಕುತ್ತದೆ.ಆದರೆ ಅವು ನೇಯುವ ಬಲೆಗಳು ಸಾವಿರಾರು ವರ್ಷಗಳವರೆಗೂ ಹಾಗೆಯೇ ಇರುತ್ತವೆ.

ಎಲ್ಲ ಜೇಡಗಳೂ ಬಲೆ ನೇಯುವುದಿಲ್ಲ. ಕೆಲವು ಜೇಡಗಳು ಬೇಟೆಯಾಡುತ್ತವೆ. ಮರದ ಕೊಂಬೆಗಳ ಮೇಲೆ ಅಂಟುರಸವನ್ನು ಸ್ರವಿಸಿ ಬೇಟೆಗಾಗಿ ಹೊಂಚು ಹಾಕುತ್ತವೆ. ಚಿಕ್ಕಪುಟ್ಟ ಜೀವಿಗಳು ಕೊಂಬೆಗಳ ಮೇಲೆ ಕೂತಾಗ ಅಂಟು ಕಾಲಿಗೆ ಅಂಟಿ ಅಲ್ಲಿಯೇ ಜೋತು ಬೀಳುತ್ತವೆ. ಈ ಸಂದರ್ಭ ನೋಡಿ ಅವುಗಳನ್ನು ಜೇಡ ಬೇಟೆಯಾಡುತ್ತದೆ. ಜೇಡ ತನ್ನ ಬಲೆಗೆ ಬಿದ್ದ ಕೀಟವನ್ನು ವಿಷಪೂರಿತ ಕೊಂಬಿನಿಂದ ಕಚ್ಚಿ ಸಾಯಿಸುತ್ತದೆ. ಇದರ ಬಾಯಿ ದ್ರವ ಆಹಾರ ಸೇವಿಸಲು ಮಾತ್ರ ಸಮರ್ಥ. ಹೀಗಾಗಿ ಸತ್ತ ಕೀಟದ ಮೈಯ ದ್ರವ ಹೀರಿ ಮೈಯನ್ನು ಹಾಗೇ ಬಿಡುತ್ತದೆ.

ಎಲ್ಲ ಜೇಡ ಪ್ರಬೇಧಗಳಿಗೂ ಎಂಟುಕಾಲುಗಳು ಮತ್ತು ಎಂಟು ಕಣ್ಣುಗಳು ಇರುತ್ತವೆ. ಈ ತೋಳಜೇಡಗಳಲ್ಲೂ ಮತ್ತೆ ಹಲವು ಪ್ರಬೇಧಗಳು ಇವೆ. ಸತತವಾಗಿ ಅವುಗಳಿಗೆ ತೊಂದರೆ ನೀಡಿದರೆ ಮಾತ್ರ ಇವು ಕೆರಳುತ್ತವೆ ಹಾಗೂ ಕಚ್ಚುತ್ತವೆ. ಇವುಗಳು ಸ್ವಲ್ಪಮಟ್ಟಿಗೆ ವಿಷಯುಕ್ತವಾಗಿದ್ದು, ಕಚ್ಚಿದರೆ ಆ ಜಾಗದಲ್ಲಿ ಬಾವು ಬರುವುದು, ನೋವು, ತುರಿಕೆ ಕಾಣಿಸುತ್ತದೆ. ಆ ಕಾರಣದಿಂದ ಇವು ಅವಶ್ಯಕವಾಗಿ ಮನುಷ್ಯನಿಂದ ಹತ್ಯೆಗೊಳಗಾಗುತ್ತವೆ. ನಾವು ಅರಿಯಬೇಕಾದ ವಿಷಯ ಏನೆಂದರೆ, ಎಲ್ಲಾ ಜೇಡಗಳಿಂದ ಮಾನವನಿಗೆ ಅಪಾಯವಿರುವುದಿಲ್ಲ. ಎಲ್ಲ ಜೇಡಗಳಲ್ಲೂ ವಿಷವಿರುತ್ತದೆ. ಆದರೆ ಮಾನವನ ಚರ್ಮವನ್ನು ಅವುಗಳ ಕೊಂಡಿ ಭೇದಿಸಲು ಸಾಧ್ಯವಿಲ್ಲ. ಕೆಲವು ದೊಡ್ಡ ಜೇಡಗಳು ಮಾತ್ರ ಮಾನವನಿಗೆ ಅಪಾಯಕಾರಿ, ಹಾಗಾಗಿ ಅವುಗಳನ್ನು ಕಂಡಲ್ಲಿ ಕೊಲ್ಲುವ ಅಭ್ಯಾಸ ತಪ್ಪಬೇಕು.

ಜೇಡಗಳ ಇನ್ನೂ ಒಂದು ವಿಶೇಷ ಎಂದರೆ ಇವುಗಳ ಮಿಲನ. ಮಿಲನವೆಂದರೆ ಗಂಡು ಜೇಡದ ಮರಣವೆಂದೇ ಅರ್ಥ. ಮಿಲನದ ಅನಂತರ ಗಂಡು ಜೇಡಹೆಣ್ಣಿನಿಂದ ಪಾರಾಗಲು ಓಡುತ್ತದೆ. ಇಲ್ಲದಿದ್ದರೆ ಹೆಣ್ಣು ಜೇಡಕ್ಕೆ ಇದು ಆಹಾರವಾಗುತ್ತದೆ. ಸಾಮಾನ್ಯವಾಗಿ ಗಂಡು ಜೇಡ ಗಾತ್ರದಲ್ಲಿ ಚಿಕ್ಕದಾಗಿರುತ್ತದೆ. ಕೆಲವೊಮ್ಮೆ ಗಂಡು ಹೆಣ್ಣಿಗೆ ಆಹಾರ ತಂದು ಕೊಟ್ಟು ಅನಂತರ ಸೇರುವುದುಂಟು. ಆದರೂ ಸರಸವೆಂದರೆ ಗಂಡಿಗೆ ಸಾವು.

ನನಗೆ ಕಂಡ ಜೇಡ ಲೈಕೋಸಿಡೇ (Lycosidae) ಕುಟುಂಬಕ್ಕೆ ಸೇರಿದ ತೋಳಜೇಡ (Wolf Spider) ಎಂಬ ಜಾತಿಗೆ ಸೇರಿದ ತಾಯಿಯಾಗಿತ್ತು. ಈ ಹೆಣ್ಣು ಜೇಡ ಒಂದು ಬಾರಿಗೆ ನೂರಾರು ಮೊಟ್ಟೆ ಇಡುತ್ತದೆ. ಮೊಟ್ಟೆ ಇಡುವ ಸಲುವಾಗಿಯೇ ಇವು ರೇಷ್ಮೆ ಚೀಲ ತಯಾರಿಸಿ, ಅದರಲ್ಲಿ ಮೊಟ್ಟೆ ಇಟ್ಟು, ಅದನ್ನು ಹೊತ್ತು ಓಡಾಡುತ್ತವೆ. ರೇಷ್ಮೆನೂಲಿನಂತಹ ಬಿಳಿಯ ಚೀಲ ಸರಿಸುಮಾರು ಅದರ ಹೊಟ್ಟೆಯ ಗಾತ್ರಕ್ಕೆ ಇರುತ್ತದೆ. ಆ ಚೀಲವನ್ನು ಹೊತ್ತು ಇವು ಓಡಾಡುವುದಷ್ಟೇ ಅಲ್ಲದೇ ಬೇಟೆಯಾಡಲೂ ಶಕ್ತವಾಗಿರುತ್ತವೆ. ಮೊಟ್ಟೆಯೊಡೆದು ಮರಿಗಳು ಚೀಲದಿಂದ ಹೊರಬರುತ್ತಿದ್ದಂತೆಯೇ ಇವು ತಮ್ಮ ಮರಿಗಳನ್ನು ತಮ್ಮ ಮೈಮೇಲೆ ಹೊತ್ತು ರಕ್ಷಿಸುತ್ತವೆ. ಕೆಲವು ವಾರಗಳ ತನಕ ಮರಿಗಳನ್ನು ಹೊತ್ತು, ಮರಿಗಳು ಸ್ವತಂತ್ರವಾಗಿ ಬದುಕಬಲ್ಲವು ಅನಿಸಿದ ನಂತರ ಬೇರೆಬೇರೆ ಆಗುತ್ತವೆ. ಇಂತಹ ಅದ್ಭುತ ತಾಯಿ ಮಮತೆ ಬೇರೆ ಜೇಡಗಳಲ್ಲಿ ಕಾಣಸಿಗುವುದಿಲ್ಲ. ಆದರೆ ಕೆಲವು ಜಾತಿಯ ಚೇಳುಗಳು, ಏಡಿಗಳು, ತಮ್ಮ ಮರಿಗಳನ್ನು ಹೊತ್ತೊಯ್ಯುವ, ಆ ಮೂಲಕ ರಕ್ಷಣೆ ಮಾಡುವ ಗುಣವನ್ನು ಹೊಂದಿರುವುದನ್ನು ನೋಡಬಹುದು.

ನಾವು ಈ ಮಹಾತಾಯಿ ತೋಳಜೇಡವನ್ನು ಬೆರಗು ಕಂಗಳಿಂದ ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತಿರುವಾಗ ಅದು ಒಂದೆರಡು ಬಾರಿ ನಿಧಾನವಾಗಿ ತನ್ನ ಸ್ಥಾನ ಬದಲಾಯಿಸಿತು. ರಾತ್ರಿಯಾಗಿದ್ದ ಕಾರಣ ನಾನು ಮೊಬೈಲಿನಲ್ಲಿ ದೀಪಬೆಳಗಿಸಿಕೊಂಡು ವೀಡಿಯೋ ಮಾಡತೊಡಗಿದ್ದೆ. ಅದರ ಮೈಮೇಲಿದ್ದ ಚಿಕ್ಕಚಿಕ್ಕ ಮರಿಗಳು ಆಗೀಗ ಹರಿದಾಡುತ್ತಿದ್ದವು. ನೋಡುತ್ತಿರುವಂತೆಯೇ, ಮೊತ್ತೊಂದು ಕೀಟ ಇದರ ಹತ್ತಿರ ಬಂದ ಕಾರಣ, ಹಠಾತ್ತಾಗಿ ಈ ಜೇಡ ಅಲ್ಲೇ ಕಟ್ಟೆಯಿಂದ ಕೆಳಗೆ ಜಿಗಿಯಿತು. ಕೆಳಬಿದ್ದಾಕ್ಷಣ ಅದರ ಮೈಮೇಲಿದ್ದ ಅಸಂಖ್ಯಾತ ಮರಿಗಳು ಒಮ್ಮೆ ಚೆಲ್ಲಾಪಿಲ್ಲಿಯಾದವು. ಎಲ್ಲೆಲ್ಲೂ ಹರಡಿದ ಅವುಗಳ ಸಂಖ್ಯೆ ನೋಡಿ ಮೊತ್ತೊಮ್ಮೆ ಬೆರಗಾದೆವು ನಾವು. ಕೆಳಗಿಳಿದು ಮತ್ತೆ ಬೆಳಕಿನಲ್ಲಿ ನೋಡುತ್ತಿರುವಾಗ ಆ ಮರಿಗಳು ಅತ್ತಿತ್ತ ಓಡಾಡುತ್ತಿರುವುದು, ಮತ್ತೆ ನಿಧಾನವಾಗಿ ತಾಯಿಯ ಬಳಿ ಬಂದು ಅದರ ಬೆನ್ನೇರಿ ಕುಳಿತುಕೊಳ್ಳುವುದು ಕಾಣಿಸಿತು. ಮಧ್ಯರಾತ್ರಿ ಆದ ಕಾರಣ, ಜೇಡವನ್ನು ಅದರ ಪಾಡಿಗೆ ಬಿಟ್ಟು ನಾವು ಮನೆಯೊಳಗೆ ನಡೆದೆವು.

ಈ ಪ್ರಕೃತಿ ಎಷ್ಟು ವಿಸ್ಮಯವಾದದ್ದು ನೋಡಿ. ಇದರಲ್ಲಿ ಎಲ್ಲ ಪ್ರಾಣಿ, ಪಕ್ಷಿ, ಕೀಟ, ಸರೀಸೃಪಗಳಿಗೂ ಸಮಾನವಾದ ಅವಕಾಶ ಇತ್ತು. ಆ ಸಮತೋಲನವನ್ನು ನಾವು ಹಾಳುಮಾಡುತ್ತಿದ್ದೇವೆ. ಪ್ರಕೃತಿಯ ಕಾರ್ಯಗಳ ನಡುವೆ ಮಾನವನ ಹಸ್ತಕ್ಷೇಪ ಇಲ್ಲದಿದ್ದಲ್ಲಿ ಭೂಮಿ ನಂದನವನವಾಗಿಯೇ ಉಳಿದಿರುತ್ತಿತ್ತು ಅಲ್ಲವೇ?

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ